ಶಿಕ್ಷಕರ ಪ್ರಗತಿಗೆ ನಾಂದಿ ಹಾಡಿದ ಕ್ಯಾಟಲಿಸ್ಟ್ ಸರ್ಕಲ್: ಪರಮ್ ಫೌಂಡೇಶನ್-ಕಾರ್ನೆಗೀ ಜಂಟಿ ಯಶಸ್ವಿ

ಬೆಂಗಳೂರು: ಶಿಕ್ಷಣ ಕ್ಷೇತ್ರದಲ್ಲಿ ಸಾಂಪ್ರದಾಯಿಕ ಬೋಧನಾ ಪದ್ಧತಿಯನ್ನು ಮೀರಿ, ಪ್ರಾಯೋಗಿಕ ಹಾಗೂ ಭವಿಷ್ಯದ ತಂತ್ರಜ್ಞಾನ ಆಧಾರಿತ ಕಲಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪರಮ್ ಫೌಂಡೇಶನ್ (Param Foundation) ಹಾಗೂ ಅಮೆರಿಕದ ಪ್ರತಿಷ್ಠಿತ ಕಾರ್ನೆಗೀ ಸೈನ್ಸ್ ಸೆಂಟರ್ (Carnegie Science Center, USA) ಜಂಟಿಯಾಗಿ ಆಯೋಜಿಸಿದ್ದ ವರ್ಷದ ಅವಧಿಯ ‘ಕ್ಯಾಟಲಿಸ್ಟ್ ಸರ್ಕಲ್’ ಶಿಕ್ಷಕರ ಪ್ರಗತಿ ತರಬೇತಿ ಅಭಿಯಾನವು ಯಶಸ್ವಿಯಾಗಿ ಮುಕ್ತಾಯಗೊಂಡಿದೆ.

ಬೆಂಗಳೂರಿನ ವಿಬ್‌ಗ್ಯಾರ್ ಸಮೂಹ ಸಂಸ್ಥೆಗಳ 9 ಶಾಲೆಗಳ ಒಟ್ಟು 49 ಶಿಕ್ಷಕರು ಈ ಮೊದಲ ಬ್ಯಾಚ್‌ನ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ್ದು, ಈ ಮಹತ್ವದ ಪ್ರಯಾಣದ ಸಮಾರೋಪದ ಅಂಗವಾಗಿ ವಿಬ್‌ಗ್ಯಾರ್ ಶಾಲೆಯ ಆವರಣದಲ್ಲಿ ಭವ್ಯ ‘ಅಂತಿಮ ಪ್ರದರ್ಶನ ಮತ್ತು ಸಮಾರೋಪ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ತರಬೇತಿಯಲ್ಲೇನಿತ್ತು? 

12 ತಿಂಗಳುಗಳ ಕಾಲ ನಡೆದ ಈ ಸುದೀರ್ಘ ಶೈಕ್ಷಣಿಕ ಅಭಿಯಾನದಲ್ಲಿ ಶಿಕ್ಷಕರು 40ಕ್ಕೂ ಹೆಚ್ಚು ಗಂಟೆಗಳ ವ್ಯವಸ್ಥಿತ ತರಬೇತಿಯಲ್ಲಿ ಭಾಗಿಯಾಗಿದ್ದರು. ಇದರಲ್ಲಿ ಅಮೆರಿಕದ ಕಾರ್ನೆಗೀ ಸಂಸ್ಥೆಯ ತಜ್ಞರು ನಡೆಸಿಕೊಟ್ಟ 3 ವಿಶೇಷ ಎಸ್‌ಟಿಇಎಂ (STEM) ಕಾರ್ಯಾಗಾರಗಳು, ಪರಮ್ ಸಂಸ್ಥೆಯ 3 ಪ್ರಾಯೋಗಿಕ ಕಲಿಕಾ ಅವಧಿಗಳು, ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಅಳವಡಿಕೆ ಮತ್ತು ವಿಶ್ಲೇಷಣಾ ಮಾಡ್ಯೂಲ್‌ಗಳು ಒಳಗೊಂಡಿದ್ದವು. ತರಬೇತಿಯ ಭಾಗವಾಗಿ ಶಿಕ್ಷಕರು ‘ಪರಮ್ ಸೈನ್ಸ್ ಎಕ್ಸ್‌ಪೀರಿಯನ್ಸ್ ಸೆಂಟರ್’ಗೆ ಭೇಟಿ ನೀಡಿ ಪ್ರಾಯೋಗಿಕ ಅನುಭವ ಪಡೆದರು. ಇದರೊಂದಿಗೆ ಹೊಸ ಆವಿಷ್ಕಾರಗಳಿಗೆ ಮುಕ್ತ ಅವಕಾಶ ನೀಡುವ ಮೇಕರ್‌ಸ್ಪೇಸ್‌ಗಳ ಬಳಕೆ ಮತ್ತು ವರ್ಷಪೂರ್ತಿ ತಜ್ಞರ ನಿರಂತರ ಮಾರ್ಗದರ್ಶನವೂ ಅವರಿಗೆ ಲಭ್ಯವಾಗಿತ್ತು. ಹೀಗಾಗಿ ಇಲ್ಲಿ ಶಿಕ್ಷಕರು “ತಾವು ಏನನ್ನು ಬೋಧಿಸಬೇಕು?” ಎಂಬ ಪ್ರಶ್ನೆಯಿಂದ ಹಿಡಿದು “ಕಲಿಕೆಯನ್ನು ಹೇಗೆ ಬದಲಾಯಿಸಿಕೊಳ್ಳಬೇಕು?” ಎಂಬ ಪ್ರಶ್ನೆಯ ಕಡೆಗೆ ಬದಲಾಯಿಸುತ್ತದೆ.

ಸಮಾರೋಪದ ಆಕರ್ಷಕ ಪ್ರದರ್ಶನ: 

ಈ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಿಕ್ಷಕರು ಕೇವಲ ಸಿದ್ದ ಮಾದರಿಗಳನ್ನಷ್ಟೇ ಪ್ರದರ್ಶಿಸದೆ, ವರ್ಷಪೂರ್ತಿ ತಾವು ಕಲಿತ ವಿಷಯಗಳು ತಮ್ಮ ಬೋಧನಾ ಶೈಲಿ ಮತ್ತು ಆಲೋಚನಾ ಕ್ರಮವನ್ನು ಹೇಗೆ ಧನಾತ್ಮಕವಾಗಿ ಬದಲಾಯಿಸಿವೆ ಎಂಬುದನ್ನು ಹೆಮ್ಮೆಯಿಂದ ಹಂಚಿಕೊಂಡರು. ತಾವು ರೂಪಿಸಿದ ವಿವಿಧ ವಿಷಯಗಳನ್ನೊಳಗೊಂಡ ನೂತನ ಶೈಕ್ಷಣಿಕ ಮಾದರಿಗಳು (Lesson Prototypes) ಮತ್ತು ಪ್ರಾಯೋಗಿಕ ಕಲಿಕಾ ವಿಧಾನಗಳನ್ನು ಶಾಲಾ ನಾಯಕತ್ವ, ಕಾರ್ನೆಗೀ ಸೈನ್ಸ್ ಸೆಂಟರ್‌ನ ಪ್ರತಿನಿಧಿಗಳು ಹಾಗೂ ಆಹ್ವಾನಿತ ತೀರ್ಪುಗಾರರ ಸಮ್ಮುಖದಲ್ಲಿ ಪ್ರಸ್ತುತಪಡಿಸಿದರು. ಈ ಪ್ರದರ್ಶನವು ಕೇವಲ ಪರಿಪೂರ್ಣತೆಯ ಮೌಲ್ಯಮಾಪನವಾಗಿರದೆ, ಶಿಕ್ಷಕರ ನಾವೀನ್ಯತೆ, ಸಹಯೋಗ ಮತ್ತು ಶೈಕ್ಷಣಿಕ ಬೆಳವಣಿಗೆಯ ಸಂಭ್ರಮವಾಗಿ ಮೂಡಿಬಂದಿತು.

ನಿರೀಕ್ಷಿತ ಶೈಕ್ಷಣಿಕ ಬದಲಾವಣೆ: 

ಈ ತರಬೇತಿಯ ಮುಖ್ಯ ಉದ್ದೇಶ ಕೇವಲ ಪಾಠದ ಯೋಜನೆಗಳನ್ನು ಸುಧಾರಿಸುವುದಾಗಿರದೆ, ಶಿಕ್ಷಕರನ್ನು ಸೃಜನಶೀಲ ನಾವೀನ್ಯಕಾರರನ್ನಾಗಿ (Innovators) ರೂಪಿಸುವುದಾಗಿದೆ. ಈ ಮೂಲಕ ಶಿಕ್ಷಕರು ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ ತರಗತಿಗಳನ್ನು ಸಿದ್ಧಪಡಿಸುವ, ವಿವಿಧ ವಿಷಯಗಳನ್ನು ಸಂಯೋಜಿಸಿ ಬೋಧಿಸುವ ಮತ್ತು ವಿದ್ಯಾರ್ಥಿಗಳಲ್ಲಿ ಜಿಜ್ಞಾಸೆಯನ್ನು ಮೂಡಿಸುವ ಶಕ್ತಿಯನ್ನು ಪಡೆದುಕೊಂಡಿದ್ದಾರೆ. ಈ ಬದಲಾವಣೆಯು ಶಾಲೆಗಳಿಗೆ ಸ್ಪರ್ಧಾತ್ಮಕ ಹೆಜ್ಜೆಯನ್ನು ಒದಗಿಸಲಿದ್ದು, ವಿದ್ಯಾರ್ಥಿಗಳಿಗೆ ಪರಿವರ್ತನಾತ್ಮಕ ಕಲಿಕೆಯ ಅನುಭವವನ್ನು ನೀಡಲಿದೆ.

ಕಾರ್ಯಕ್ರಮದ ಕೊನೆಯಲ್ಲಿ ತೀರ್ಪುಗಾರರ ಸಂವಾದ, ಶೈಕ್ಷಣಿಕ ನಾಯಕರ ಚಿಂತನೆಗಳ ಹಂಚಿಕೆಯ ನಂತರ ತರಬೇತಿ ಪೂರೈಸಿದ ಎಲ್ಲ ಶಿಕ್ಷಕರಿಗೆ ಅಧಿಕೃತ ಪ್ರಮಾಣಪತ್ರಗಳನ್ನು ವಿತರಿಸಿ, ಅವರ ಶ್ರಮ ಮತ್ತು ಬದ್ಧತೆಯನ್ನು ಗೌರವಿಸಲಾಯಿತು. ಮುಂದಿನ ದಿನಗಳಲ್ಲಿ ಈ ವಿಶಿಷ್ಟ ಶೈಕ್ಷಣಿಕ ಸಂಸ್ಕೃತಿಯನ್ನು ಇನ್ನುಳಿದ ಶಾಲಾ ನೆಟ್‌ವರ್ಕ್‌ಗಳಿಗೂ ವಿಸ್ತರಿಸುವ ದೂರದೃಷ್ಟಿಯನ್ನು ಪರಮ್‌  ಫೌಂಡೇಶನ್‌ ಸಂಸ್ಥೆ ಹೊಂದಿದೆ. ತರಬೇತಿ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಲು ಇಚ್ಛಿಸುವ ಶಿಕ್ಷಕರು membership@paramfoundation.org ಸಂಪರ್ಕಿಸಬಹುದು.

Related Articles

Comments (0)

Leave a Comment