ಬೆಂಗಳೂರಿನ ಜಲಮೂಲಗಳ ರಕ್ಷಣೆಗೆ ತ್ವರಿತ ಕ್ರಮ: ಒಳಚರಂಡಿ ಸಂಸ್ಕರಣಾ ಘಟಕಗಳ (STP) ಸಾಮರ್ಥ್ಯವರ್ಧನೆಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ

ಬೆಂಗಳೂರು: ಸಿಲಿಕಾನ್ ಸಿಟಿಯ ಜಲಮೂಲಗಳು ಮಾಲಿನ್ಯಗೊಳ್ಳುವುದನ್ನು ತಡೆಗಟ್ಟಲು ಹಾಗೂ ಸಂಸ್ಕರಿಸದ ಒಳಚರಂಡಿ ನೀರು ಕೆರೆಗಳಿಗೆ ಸೇರುವುದನ್ನು ತಡೆಯಲು ಒಳಚರಂಡಿ ಸಂಸ್ಕರಣಾ ಘಟಕಗಳ (STP) ಸ್ಥಾಪನೆ ಮತ್ತು ಅವುಗಳ ಸಾಮರ್ಥ್ಯವರ್ಧನೆಗೆ ತ್ವರಿತ ಕ್ರಮ ಕೈಗೊಳ್ಳುವಂತೆ ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (KSPCB) ಪರಿಸರ ಭವನದ ಸಭಾಂಗಣದಲ್ಲಿ ಸಚಿವರ ಅಧ್ಯಕ್ಷತೆಯಲ್ಲಿ ಬೆಂಗಳೂರು ನಗರದ ಒಳಚರಂಡಿ ನೀರು ನಿರ್ವಹಣೆ ಕುರಿತು ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಯಿತು.

ಜಲಮಂಡಳಿ (BWSSB) ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಅಧಿಕಾರಿಗಳೊಂದಿಗೆ ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ಬೆಂಗಳೂರಿನ ಒಳಚರಂಡಿ ನಿರ್ವಹಣೆಯ ಆಘಾತಕಾರಿ ಅಂಕಿ-ಅಂಶಗಳು ಲಭ್ಯವಾಗಿವೆ.

ಬೆಂಗಳೂರಿನ ಒಳಚರಂಡಿ ಚಿತ್ರಣ (MLD ಗಳಲ್ಲಿ):

ನಗರಕ್ಕೆ ಪೂರೈಕೆಯಾಗುವ ಒಟ್ಟು ನೀರು: 2825 MLD

ಉತ್ಪತ್ತಿಯಾಗುವ ಒಟ್ಟು ಒಳಚರಂಡಿ ನೀರು: 2580 MLD

ಹಾಲಿ ಇರುವ 37 ಎಸ್‌ಟಿಪಿಗಳ ಸಂಸ್ಕರಣಾ ಸಾಮರ್ಥ್ಯ: 1364.5 MLD

ಸದ್ಯ ಎದುರಾಗಿರುವ ಸಂಸ್ಕರಣಾ ಕೊರತೆ (ಗ್ಯಾಪ್): 1215.5 MLD

ಕಾಲಮಿತಿಯೊಳಗೆ 42 ಹೊಸ STPಗಳ ನಿರ್ಮಾಣ:

ಈ ಕೊರತೆಯನ್ನು ನೀಗಿಸಲು ಜಲಮಂಡಳಿಯು ವಿವಿಧ ಯೋಜನೆಗಳಡಿ 1,147 MLD ಸಾಮರ್ಥ್ಯದ 42 ಹೊಸ ಎಸ್‌ಟಿಪಿ (STP) ಘಟಕಗಳ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಹಂತ-ಹಂತವಾಗಿ ಪೂರ್ಣಗೊಳಿಸಲು ಕಾಲಮಿತಿ ನಿಗದಿಪಡಿಸಲಾಗಿದೆ:

ಡಿಸೆಂಬರ್ 2026: 51 MLD ಸಾಮರ್ಥ್ಯದ 7 STPಗಳು ಪೂರ್ಣ.

ಡಿಸೆಂಬರ್ 2027: 413 MLD ಸಾಮರ್ಥ್ಯದ 17 STPಗಳು ಪೂರ್ಣ.

ಡಿಸೆಂಬರ್ 2028: 148 MLD ಸಾಮರ್ಥ್ಯದ 9 STPಗಳು ಪೂರ್ಣ.

ಡಿಸೆಂಬರ್ 2029: 535 MLD ಸಾಮರ್ಥ್ಯದ 9 STPಗಳು ಪೂರ್ಣಗೊಳ್ಳಲಿವೆ.

ಸಚಿವ ರಾಮಲಿಂಗಾರೆಡ್ಡಿ ನೀಡಿದ ಕಟ್ಟುನಿಟ್ಟಿನ ನಿರ್ದೇಶನಗಳು:

30 ದಿನಗಳ ಗಡುವು: ಪ್ರಸ್ತುತ ನಿಗದಿತ ಮಾನದಂಡಗಳಡಿ ಕಾರ್ಯನಿರ್ವಹಿಸದ ಎಸ್‌ಟಿಪಿಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ಮುಂದಿನ 30 ದಿನಗಳೊಳಗೆ ಎನ್‌ಜಿಟಿ (NGT) ಮತ್ತು ಕೆಎಸ್‌ಪಿಸಿಬಿ ನಿಯಮಾವಳಿಗಳಿಗೆ ತಕ್ಕಂತೆ ಸುಧಾರಿಸಬೇಕು.

ಖಾಸಗಿ ಎಸ್‌ಟಿಪಿಗಳ ತಪಾಸಣೆ: ನಗರದ ಅಪಾರ್ಟ್‌ಮೆಂಟ್‌ಗಳು, ಆಸ್ಪತ್ರೆಗಳು, ವಾಣಿಜ್ಯ ಸಂಕೀರ್ಣಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿರುವ ಖಾಸಗಿ ಎಸ್‌ಟಿಪಿಗಳು ಸಮರ್ಪಕವಾಗಿ ಕೆಲಸ ಮಾಡುತ್ತಿವೆಯೇ ಎಂಬುದನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಖುದ್ದು ಪರಿಶೀಲಿಸಬೇಕು.

ಮಿಸ್ಸಿಂಗ್ ಬಿಟ್ಸ್ ಮತ್ತು ಮ್ಯಾನ್‌ಹೋಲ್ ದುರಸ್ತಿ: ರಾಜಕಾಲುವೆಗಳಿಗೆ ಒಳಚರಂಡಿ ನೀರು ಸೇರುವುದನ್ನು ತಡೆಯಲು ಬಾಕಿ ಉಳಿದಿರುವ ಪೈಪ್‌ಲೈನ್ ಲಿಂಕ್‌ಗಳನ್ನು (Missing Bits) ತಕ್ಷಣ ಪೂರ್ಣಗೊಳಿಸಬೇಕು. ಹಾನಿಗೊಳಗಾದ ಮ್ಯಾನ್‌ಹೋಲ್‌ಗಳನ್ನು ಯುದ್ಧೋಪಾದಿಯಲ್ಲಿ ದುರಸ್ತಿ ಮಾಡಬೇಕು.

ಕೈಗಾರಿಕಾ ತ್ಯಾಜ್ಯದ ಜಂಟಿ ಪರಿಶೀಲನೆ: ಪೀಣ್ಯ, ಜಿಗಣಿ ಸೇರಿದಂತೆ ಪ್ರಮುಖ ಕೈಗಾರಿಕಾ ವಲಯಗಳಲ್ಲಿ ಉತ್ಪತ್ತಿಯಾಗುವ ಅಪಾಯಕಾರಿ ದ್ರವ ಮತ್ತು ಘನ ತ್ಯಾಜ್ಯದ ನಿರ್ವಹಣೆ ಕುರಿತು ಜಲಮಂಡಳಿ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಜಂಟಿ ತಪಾಸಣೆ ನಡೆಸಬೇಕು.

ಅಕ್ರಮ ಸಂಪರ್ಕಗಳಿಗೆ ಕಡಿವಾಣ: ಜಲಮಂಡಳಿಯ ಒಳಚರಂಡಿ ಜಾಲ ಲಭ್ಯವಿದ್ದರೂ ಸಂಪರ್ಕ ಪಡೆಯದ ಅಥವಾ ಅಕ್ರಮವಾಗಿ ಬಳಸುತ್ತಿರುವವರನ್ನು ಪತ್ತೆ ಹಚ್ಚಿ, ಅವರಿಗೆ ಅಧಿಕೃತ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಬೇಕು.

 

 

Related Articles

Comments (0)

Leave a Comment