ಟೆಂಡರ್ ಪ್ರಕ್ರಿಯೆಯಲ್ಲಿ ಭಾರಿ ಅಕ್ರಮ ಎಸಗಿರುವ ಆರೋಪ:ಶಾಸಕ ಎಸ್. ಸುರೇಶ್ ಕುಮಾರ್ ವಿರುದ್ಧ ಲೋಕಾಯುಕ್ತಕ್ಕೆ ದೂರು..!
- by Suddi Team
- July 2, 2026
- 8 Views
ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಅವರ ವಿರುದ್ಧ ಲೋಕಾಯುಕ್ತ ಸಂಸ್ಥೆಗೆ ಅಧಿಕೃತವಾಗಿ ಭ್ರಷ್ಟಾಚಾರ ಮತ್ತು ಟೆಂಡರ್ ಅಕ್ರಮದ ಗಂಭೀರ ದೂರು ಸಲ್ಲಿಕೆಯಾಗಿದೆ.
ರಾಜಾಜಿನಗರ ಕ್ಷೇತ್ರದ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಅನುದಾನ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವತಿಯಿಂದ ಕೈಗೊಳ್ಳಲಾದ ವಿವಿಧ ಸಾರ್ವಜನಿಕ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಗಳಲ್ಲಿ ಭಾರಿ ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿ ವಕೀಲರಾದ ಸೂರ್ಯ ಮುಕುಂದರಾಜ್ ಅವರು ಶಾಸಕ ಎಸ್. ಸುರೇಶ್ ಕುಮಾರ್ ಮತ್ತು ಸಂಬಂಧಪಟ್ಟ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಇಂದು ಕರ್ನಾಟಕ ಲೋಕಾಯುಕ್ತಕ್ಕೆ ಅಧಿಕೃತ ದೂರು ಸಲ್ಲಿಸಿದ್ದಾರೆ.
ಶಾಸಕರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ನಿಯಮಗಳನ್ನು ಗಾಳಿಗೆ ತೂರಿ, ತಮಗೆ ಬೇಕಾದ ಬೇನಾಮಿ ಗುತ್ತಿಗೆದಾರರಿಗೆ ಲಾಭ ಮಾಡಿಕೊಡುವ ಮೂಲಕ ಸರ್ಕಾರಿ ಖಜಾನೆಗೆ ಭಾರಿ ಆರ್ಥಿಕ ನಷ್ಟ ಉಂಟುಮಾಡಿದ್ದಾರೆ ಎಂದು ದೂರಿನಲ್ಲಿ ದಾಖಲೆ ಸಮೇತ ವಿವರಿಸಲಾಗಿದೆ. ಜಿಎಸ್‌ಟಿ ಹಾಗೂ ಇಲಾಖೆಯ ಇತರೆ ವೆಚ್ಚಗಳೂ ಸೇರಿದರೆ ಈ ಒಟ್ಟು ಹಗರಣದ ಮೊತ್ತ 300 ಕೋಟಿಯ ಗಡಿಯನ್ನು ಮೀರುತ್ತದೆ ಎಂದು ದೂರುದಾರರು ತಿಳಿಸಿದ್ದಾರೆ.
ದೂರಿನಲ್ಲಿರುವ ಪ್ರಮುಖ ಹಗರಣಗಳು ಮತ್ತು ಗಂಭೀರ ಆರೋಪಗಳು:
ಎಲ್1 ಗುತ್ತಿಗೆದಾರರನ್ನು ತಪ್ಪಿಸಿ 14 ಕೋಟಿ ನಷ್ಟ: 2020 ರ 72.25 ಕೋಟಿ ಮೊತ್ತದ ರಸ್ತೆ ಮತ್ತು ಚರಂಡಿ ಕಾಮಗಾರಿಗಳ ಟೆಂಡರ್‌ನಲ್ಲಿ ಅತ್ಯಂತ ಕಡಿಮೆ ಬಿಡ್ ಮಾಡಿದ್ದ ಅರ್ಹ ಗುತ್ತಿಗೆದಾರರನ್ನು ತಪ್ಪಿಸಲು ಶಾಸಕರು ಅಧಿಕಾರಿಗಳ ಮೇಲೆ ದೂರವಾಣಿ ಮೂಲಕ ಒತ್ತಡ ಹೇರಿದ್ದಾರೆ. ಬಿಬಿಎಂಪಿಯ ಟಿವಿಸಿಸಿ ಮುಖ್ಯ ಅಭಿಯಂತರರ ಕಛೇರಿ ಟಿಪ್ಪಣಿಯಲ್ಲೇ ಶಾಸಕರ ಈ ದಬ್ಬಾಳಿಕೆ ದಾಖಲಾಗಿದೆ. ತದನಂತರ ಎಲ್2 ಬಿಡ್‌ದಾರರು ನಿರಾಕರಿಸಿದಾಗ, ತಮ್ಮ ಬೇನಾಮಿಗಳಿಗೆ ಲಾಭ ಮಾಡಲು 53 ಕೋಟಿಯ ಕಾಮಗಾರಿಯನ್ನು 67 ಕೋಟಿಗೆ ಏರಿಸಿ, ಸರ್ಕಾರಕ್ಕೆ ನೇರವಾಗಿ 14 ಕೋಟಿ ನಷ್ಟ ಉಂಟುಮಾಡಲಾಗಿದೆ.
ರಸ್ತೆ ನಿಧಿಯ ದುರುಪಯೋಗ – ಉದ್ದೇಶಪೂರ್ವಕ ವಿಳಂಬ: ಭಾಷಾನಗರದ ರಸ್ತೆ ಡಾಂಬರೀಕರಣದ 60 ಲಕ್ಷ ಮೊತ್ತದ ಟೆಂಡರ್‌ನ ಹಣಕಾಸು ಬಿಡ್ ಅನ್ನು ಕಳೆದ 4 ವರ್ಷಗಳಿಂದ ತೆರೆಯದೆ ತಡೆಹಿಡಿಯಲಾಗಿದೆ. ನಾಗರಿಕರ ಮೂಲಸೌಕರ್ಯಕ್ಕೆ ಮೀಸಲಿದ್ದ ಈ ಹಣವನ್ನು ನಿಯಮಬಾಹಿರವಾಗಿ ವರ್ಗಾಯಿಸಿ ಪಾರ್ಕ್‌ಗಳ ಸೌಂದರ್ಯೀಕರಣಕ್ಕೆ ಬಳಸಲಾಗುತ್ತಿದ್ದು, ಕ್ಷೇತ್ರದ ರಸ್ತೆಗಳು ಗುಂಡಿಮಯವಾಗಲು ಶಾಸಕರ ತಪ್ಪು ನಿರ್ಧಾರಗಳೇ ಕಾರಣ ಎಂದು ಆರೋಪಿಸಲಾಗಿದೆ.
Tailor-Made ಷರತ್ತುಗಳು ಮತ್ತು ಮುಕ್ತ ಸ್ಪರ್ಧೆಗೆ ತಡೆ: ಸಿಎಂ ಇನ್ಫ್ರಾಸ್ಟ್ರಕ್ಚರ್ ಗ್ರಾಂಟ್ಸ್ ಅಡಿಯ ಪ್ಯಾಕೇಜ್‌ಗಳಲ್ಲಿ (ಒಟ್ಟು 33.97 ಕೋಟಿ) ಸಾಮಾನ್ಯ ರಸ್ತೆ ಕಾಮಗಾರಿಗಳ ಟೆಂಡರ್‌ನಲ್ಲಿ ಉದ್ದೇಶಪೂರ್ವಕವಾಗಿ Tensile Roofing ಮತ್ತು FRP Covers ನಂತಹ ವಿಶೇಷ ತಾಂತ್ರಿಕ ವಸ್ತುಗಳನ್ನು ಸೇರಿಸಿ, ತಮಗೆ ಬೇಕಾದ ನಿರ್ದಿಷ್ಟ ಗುತ್ತಿಗೆದಾರರಿಗೆ ಮಾತ್ರ ಟೆಂಡರ್ ಸಿಗುವಂತೆ Tailor-Made ಷರತ್ತುಗಳನ್ನು ವಿಧಿಸಲಾಗಿದೆ.
ಏಕೈಕ ಬಿಡ್‌ದಾರರಿಗೆ ಮಣೆ: 2022-23 ನೇ ಸಾಲಿನ 150 ಕೋಟಿ ಮೊತ್ತದ ಬೃಹತ್ ಕಾಮಗಾರಿಗಳು ಹಾಗೂ 2025-26 ನೇ ಸಾಲಿನ 10 ಕೋಟಿ ಮತ್ತು 9 ಕೋಟಿ ವೆಚ್ಚದ ಸರಣಿ ಟೆಂಡರ್‌ಗಳಲ್ಲೂ ನಿಯಮಾವಳಿಗಳನ್ನು ಗಾಳಿಗೆ ತೂರಿ ಮುಕ್ತ ಸ್ಪರ್ಧೆಯನ್ನು ನಿರ್ಬಂಧಿಸಿ, ಏಕೈಕ ಬಿಡ್‌ದಾರರಿಗೆ ಅನುಕೂಲ ಮಾಡಿಕೊಡಲಾಗಿದೆ.
ಅಕ್ರಮ ಸೈಟ್ ವಿಸಿಟ್ ನಿಯಮ ಮತ್ತು ಯಂತ್ರೋಪಕರಣಗಳ ಷರತ್ತು ಡಿಲೀಟ್: ಟೆಂಡರ್‌ನಲ್ಲಿ ಭಾಗವಹಿಸುವ ಮುನ್ನ ಸೈಟ್ ವಿಸಿಟ್ ಮಾಡಿ ರಿಜಿಸ್ಟರ್‌ನಲ್ಲಿ ಸಹಿ ಮಾಡಬೇಕೆಂಬ ಕಡ್ಡಾಯ ನಿಯಮ ತರಲಾಗಿದೆ. ಇದು ಯಾರು ಬಿಡ್ ಮಾಡುತ್ತಿದ್ದಾರೆ ಎಂದು ಮೊದಲೇ ತಿಳಿದು ಬೇರೆಯವರನ್ನು ಹೊರದಬ್ಬುವ ತಂತ್ರವಾಗಿದೆ. ಅಷ್ಟೇ ಅಲ್ಲದೆ, ತಮ್ಮ ಬೇನಾಮಿಗಳ ಬಳಿ ಯಂತ್ರೋಪಕರಣಗಳು ಇಲ್ಲದ ಕಾರಣ 1 ಕೋಟಿಗೂ ಹೆಚ್ಚಿನ ಟೆಂಡರ್‌ಗಳಲ್ಲಿ ಇರಬೇಕಾದ ಕಡ್ಡಾಯ ಯಂತ್ರೋಪಕರಣಗಳ ನಿಯಮವನ್ನೇ ಡಿಲೀಟ್ ಮಾಡಲಾಗಿದೆ.
ಟೆಂಡರ್ ಗೌಪ್ಯತೆ ಉಲ್ಲಂಘನೆ: ಡಿಫರೆನ್ಷಿಯಲ್ ಇಎಂಡಿ ವಿವರಗಳನ್ನು ತಾಂತ್ರಿಕ ಬಿಡ್ ತೆರೆದ ತಕ್ಷಣವೇ ಅಧಿಕಾರಿಗಳು ನೋಡುವಂತೆ ಮಾಡಿ, ಹಣಕಾಸು ಬಿಡ್ ತೆರೆಯುವ ಮುನ್ನವೇ ಯಾರು ಎಷ್ಟು ಕಡಿಮೆ ದರ ಹಾಕಿದ್ದಾರೆ ಎಂಬುದನ್ನು ಮೊದಲೇ ಅಂದಾಜು ಮಾಡಿ ವಂಚಿಸಲಾಗಿದೆ.
ಉಲ್ಲಂಘನೆಯಾಗಿರುವ ವಿಚಾರಗಳು:
ದೂರಿನ ಪ್ರಕಾರ, ಈ ವ್ಯವಸ್ಥಿತ ಅಕ್ರಮವು ಕೆಳಕಂಡ ಶಾಸನಬದ್ಧ ಕಾನೂನುಗಳ ನೇರ ಉಲ್ಲಂಘನೆಯಾಗಿದೆ:
1. KTTP Act, 1999 (ಸೆಕ್ಷನ್ 4, 9, 16): ಮುಕ್ತ ಸ್ಪರ್ಧೆಯನ್ನು ತಡೆದು ಪಾರದರ್ಶಕತೆ ಉಲ್ಲಂಘಿಸಿರುವುದು.
2. KTTP Rules, 2000 (ರೂಲ್ 17, 27): ಅರ್ಹತಾ ಮಾನದಂಡಗಳನ್ನು ದುರುದ್ದೇಶಪೂರ್ವಕವಾಗಿ ತಿರುಚಿರುವುದು.
3. ಸರ್ಕಾರದ ಅಧಿಕೃತ ಸುತ್ತೋಲೆ (FD 560 PPE 2014): Tailor-Made ಕಂಡಿಷನ್‌ಗಳನ್ನು ಹಾಕಿ ಮಾರ್ಗಸೂಚಿ ಉಲ್ಲಂಘಿಸಿರುವುದು.
4. Prevention of Corruption Act, 1988 (ಸೆಕ್ಷನ್ 7 ಮತ್ತು 13): ಸಾರ್ವಜನಿಕ ನಿಧಿಯ ದುರುಪಯೋಗ ಮತ್ತು ಕ್ರಿಮಿನಲ್ ದುರ್ನಡತೆ.
ಒಟ್ಟು 6 ಪ್ರಮುಖ ಹಗರಣಗಳ ವರ್ಷವಾರು ವಿವರ:
1. 2020: 4 ರಸ್ತೆ ಮತ್ತು ಚರಂಡಿ ಕಾಮಗಾರಿಗಳು – 72.25 ಕೋಟಿ
2. 2021-22: ಭಾಷಾನಗರ ರಸ್ತೆ ಆಸ್ಫಾಲ್ಟಿಂಗ್ ಕಾಮಗಾರಿ – 0.60 ಕೋಟಿ
3. 2022-23: ಪಾರ್ಕ್, ಮೈದಾನ, ರಸ್ತೆ ಸರಣಿ ಟೆಂಡರ್‌ಗಳು – 150.00 ಕೋಟಿ
4. 2025-26 (ಸರಣಿ-1): ರಸ್ತೆ, ಚರಂಡಿ, ಉದ್ಯಾನವನ ಅಭಿವೃದ್ಧಿ – 10.00 ಕೋಟಿ
5. 2025-26 (ಸರಣಿ-2): ಶ್ರೀರಾಮಪುರ ಮುಂತಾದ ಪ್ರದೇಶಗಳ ಕಾಮಗಾರಿಗಳು – 9.00 ಕೋಟಿ
6. 2026-27: ಸಿಎಂ ಇನ್ಫ್ರಾಸ್ಟ್ರಕ್ಚರ್ ಗ್ರಾಂಟ್ಸ್ ಪ್ಯಾಕೇಜ್‌ಗಳು – 33.97 ಕೋಟಿ
ದೂರುದಾರರ ಒತ್ತಾಯ:
ಸಾರ್ವಜನಿಕ ಹಿತಾಸಕ್ತಿ ಹಾಗೂ ಸಾರ್ವಜನಿಕ ಹಣದ ಸಂರಕ್ಷಣೆಯ ದೃಷ್ಟಿಯಿಂದ ಲೋಕಾಯುಕ್ತರು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಶಾಸಕ ಸುರೇಶ್ ಕುಮಾರ್ ಹಾಗೂ ಅವರಿಗೆ ಸಹಕರಿಸಿದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಸಮಗ್ರ ತನಿಖೆ ನಡೆಸಿ, ಕಾನೂನು ರೀತ್ಯಾ ಕಠಿಣ ಶಿಕ್ಷೆ ಜರುಗಿಸಬೇಕು ಎಂದು ವಕೀಲರಾದ ಸೂರ್ಯ ಮುಕುಂದರಾಜ್ ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
Related Articles
Thank you for your comment. It is awaiting moderation.


Comments (0)