- ಬೆಂಗಳೂರು
- ಮುಖ್ಯ ಮಾಹಿತಿ
- ರಾಜ್ಯ
- Like this post: 0
ಉಚಿತ ವಿದ್ಯುತ್ ಬೆನ್ನತ್ತಿದ ಬೆಸ್ಕಾಂ: ಜುಲೈನಲ್ಲಿ ಮೀಟರ್ ರೀಡಿಂಗ್ ಬಂದ್; ನಿಮ್ಮ ಮನೆ ಬಾಗಿಲಿಗೆ ಬರಲಿದ್ದಾರೆ ‘ಗೃಹ ಜ್ಯೋತಿ’ ಡಿಟೆಕ್ಟಿವ್ಸ್!
- by Suddi Team
- July 2, 2026
- 3 Views
ವಿಶೇಷ ವರದಿ:ರಮ್ಯ ಬಿ.ಟಿ
ಬೆಂಗಳೂರು:ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹ ಜ್ಯೋತಿ’ ಯೋಜನೆ ಜಾರಿಯಾಗಿ ತಿಂಗಳುಗಳೇ ಕಳೆದಿವೆ. ಉಚಿತ ವಿದ್ಯುತ್ ಸವಲತ್ತು ಕೋಟ್ಯಂತರ ಮನೆಗಳ ಕೈ ಸೇರುತ್ತಿದೆ. ಆದರೆ, ಈ ಉಚಿತ ಯೋಜನೆಯ ಮರೆಯಲ್ಲಿ ನಕಲಿ ದಾಖಲೆ ಸೃಷ್ಟಿಸಿ, ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕುತ್ತಿರುವವರ ಸಂಖ್ಯೆಯೂ ಕಮ್ಮಿಯಿಲ್ಲ! ಇದಕ್ಕೀಗ ಬ್ರೇಕ್ ಹಾಕಲು ಬೆಸ್ಕಾಂ (BESCOM) ಜುಲೈ ತಿಂಗಳಿನಲ್ಲಿ ಬಿಗ್ ಆಪರೇಷನ್ ಒಂದನ್ನು ಕೈಗೆತ್ತಿಕೊಂಡಿದೆ.
ಇದರ ಮೊದಲ ಭಾಗವಾಗಿಯೇ ಜುಲೈ ತಿಂಗಳಲ್ಲಿ ನಿಮ್ಮ ಮನೆಗೆ ಎಂದಿನಂತೆ ಬರುವ ಮೀಟರ್ ರೀಡರ್‌ಗಳು ಕಾಣಿಸಿಕೊಳ್ಳುವುದಿಲ್ಲ! ಹೌದು, ಜುಲೈನಲ್ಲಿ ನಿಯಮಿತ ಮೀಟರ್ ರೀಡಿಂಗ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.
ಏನಿದು ಬೆಸ್ಕಾಂ ‘ಸೀಕ್ರೆಟ್ ಆಪರೇಷನ್’?
ಯೋಜನೆಯ ದುರುಪಯೋಗವನ್ನು ಪತ್ತೆ ಹಚ್ಚಲು ಬೆಸ್ಕಾಂ ವಿಶೇಷ ತಪಾಸಣಾ ತಂಡವನ್ನು ರಚಿಸಿದೆ. ಜುಲೈ ತಿವಿಡೀ ಈ ಸಿಬ್ಬಂದಿ ಬಿಲ್ ಮೆಷಿನ್ ಹಿಡಿದು ಬರುವ ಬದಲಿಗೆ, ನಿಮ್ಮ ಗೃಹ ಜ್ಯೋತಿ ಯೋಜನೆಯ ಅರ್ಹತೆಯನ್ನು ಮರು-ಪರಿಶೀಲಿಸಲು ‘ಡಿಟೆಕ್ಟಿವ್ಸ್’ ತರಹ ಮನೆ ಬಾಗಿಲಿಗೆ ಬರಲಿದ್ದಾರೆ.
ಒಂದೇ ಮನೆಯಲ್ಲಿ ಹಲವು ಆರ್‌ಆರ್ (RR) ಸಂಖ್ಯೆಗಳಿಗೆ ಸೌಲಭ್ಯ ಪಡೆದಿರುವುದು.
ಬಾಡಿಗೆದಾರರು ಖಾಲಿ ಮಾಡಿದ್ದರೂ ಮಾಲೀಕರ ಹೆಸರಲ್ಲಿ ಉಚಿತ ವಿದ್ಯುತ್ ಪಡೆಯುತ್ತಿರುವುದು.
ವಾಣಿಜ್ಯ ಬಳಕೆಗೆ (Commercial) ಗೃಹ ಬಳಕೆಯ ಉಚಿತ ವಿದ್ಯುತ್ ಬಳಸುತ್ತಿರುವುದು.
ಇಂತಹ ಅಕ್ರಮಗಳನ್ನು ಭೌತಿಕವಾಗಿ ಪತ್ತೆ ಹಚ್ಚುವುದೇ ಈ ವಿಶೇಷ ಅಭಿಯಾನದ ಮುಖ್ಯ ಉದ್ದೇಶ.
ರೀಡಿಂಗ್ ಇಲ್ಲದೆ ಜುಲೈ ಬಿಲ್ ಬರೋದು ಹೇಗೆ?
ರೀಡಿಂಗ್ ಇಲ್ಲ ಎಂದಮಾತ್ರಕ್ಕೆ ಜುಲೈ ತಿಂಗಳ ಬಿಲ್ ಉಚಿತ ಎಂದಲ್ಲ! ಗ್ರಾಹಕರ ಕಳೆದ 3 ತಿಂಗಳ ಸರಾಸರಿ ವಿದ್ಯುತ್ ಬಳಕೆಯನ್ನು (Average Consumption) ಲೆಕ್ಕ ಹಾಕಿ, ಅದರ ಆಧಾರದ ಮೇಲೆ ಜುಲೈ ತಿಂಗಳ ಬಿಲ್ ಸಿದ್ಧಪಡಿಸಲಾಗುತ್ತದೆ. ಇದನ್ನು ಗ್ರಾಹಕರ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ (SMS) ಮೂಲಕ ಕಳುಹಿಸಲಾಗುತ್ತದೆ. ಈ ಬಿಲ್ಲಿಂಗ್‌ನಲ್ಲಿ ಏನಾದರೂ ಹೆಚ್ಚುಕಮ್ಮಿ ಆದಲ್ಲಿ, ಅದನ್ನು ಆಗಸ್ಟ್ ತಿಂಗಳ ನಿಯಮಿತ ಬಿಲ್‌ನಲ್ಲಿ ಮರು-ಹೊಂದಾಣಿಕೆ (Adjust) ಮಾಡಲಾಗುವುದು ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.
ಯಾರಿಗೆ ಈ ಬಿಸಿ ತಟ್ಟಲ್ಲ?
ಸಾಮಾನ್ಯ ಗೃಹ ಬಳಕೆದಾರರನ್ನು ಬಿಟ್ಟರೆ, ಉದ್ಯಮ ಹಾಗೂ ವಾಣಿಜ್ಯ ವಲಯಕ್ಕೆ ಈ ನಿಯಮ ಅನ್ವಯಿಸುವುದಿಲ್ಲ.
ಹೆಚ್.ಟಿ (High Tension) ಕೈಗಾರಿಕಾ ಗ್ರಾಹಕರು
ಸೋಲಾರ್ ರೂಫ್‌ಟಾಪ್ ಅಳವಡಿಸಿಕೊಂಡಿರುವವರು
40 HP ಗಿಂತ ಹೆಚ್ಚಿನ ಲೋಡ್ ಹೊಂದಿರುವ ಎಲ್.ಟಿ ಗ್ರಾಹಕರು
ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದವರಿಗೆ ಎಂದಿನಂತೆ ನೈಜ ರೀಡಿಂಗ್ ನಡೆಯಲಿದೆ.
ಗ್ರಾಹಕರು ಏನು ಮಾಡಬೇಕು?
ಜುಲೈ ತಿಂಗಳಲ್ಲಿ ನಿಮ್ಮ ಮನೆಗೆ ಬರುವ ಬೆಸ್ಕಾಂ ಅಧಿಕಾರಿಗಳು ದಾಖಲೆಗಳನ್ನು ಕೇಳಿದಾಗ ನಿರಪರಾಧಿ ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ. ನಿಮ್ಮ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಅಥವಾ ಬಾಡಿಗೆ ಒಪ್ಪಂದದ ಪತ್ರಗಳನ್ನು (Rental Agreement) ಸಿದ್ಧವಾಗಿಟ್ಟುಕೊಂಡು ಅಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡಿ ಸಹಕರಿಸಬೇಕಿದೆ. ಒಟ್ಟಿನಲ್ಲಿ, ಅರ್ಹರಿಗೆ ಮಾತ್ರ ಯೋಜನೆಯ ಲಾಭ ಸಿಗಲಿ ಎನ್ನುವ ಬೆಸ್ಕಾಂನ ಈ ‘ಮನೆ ಮನೆ ತಪಾಸಣೆ’ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
Related Articles
Thank you for your comment. It is awaiting moderation.


Comments (0)