ವೀರಶೈವ ಧರ್ಮ, ಪಂಚಪೀಠಗಳ ನಿಂದನೆ: ಡಿಜಿಪಿಗೆ ದೂರು
- by Suddi Team
- June 20, 2026
- 73 Views
ಬೆಂಗಳೂರು: ವೀರಶೈವ ಧರ್ಮ, ಪಂಚಪೀಠಗಳು ಹಾಗೂ ಶ್ರೀ ರಂಭಾಪುರಿ ಜಗದ್ಗುರುಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಅವಹೇಳನಕಾರಿ ಮತ್ತು ಪ್ರಚೋದನಕಾರಿ ಪೋಸ್ಟ್‌ಗಳನ್ನು ಹಾಕುತ್ತಿರುವ ವ್ಯಕ್ತಿಗಳ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಮನವಿ ಸಲ್ಲಿಸಲಾಗಿದೆ.
ಶ್ರೀಮದ್ ವೀರಶೈವ ಐಟಿ-ಸೆಲ್ ವತಿಯಿಂದ ಬೆಂಗಳೂರಿನಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಮಾನ್ಯ ಡಾ. ಎಂ.ಎ. ಸಲೀಂ, ಐಪಿಎಸ್ ಅವರನ್ನು ಖುದ್ದಾಗಿ ಭೇಟಿ ಮಾಡಿದ ನಿಯೋಗವು ಈ ಕುರಿತು ಸುದೀರ್ಘ ದೂರು ಸಲ್ಲಿಸಿತು. ಫೇಸ್‌ಬುಕ್, ಎಕ್ಸ್ (ಟ್ವಿಟರ್) ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಬರಹಗಳನ್ನು ಉದ್ದೇಶಪೂರ್ವಕವಾಗಿ ಪ್ರಕಟಿಸಲಾಗುತ್ತಿದೆ. ಇದು ಸಮಾಜದಲ್ಲಿ ಶಾಂತಿ ಕದಡುವ ಸಂಚಾಗಿದೆ ಎಂದು ನಿಯೋಗವು ಡಿಜಿಪಿ ಅವರ ಗಮನಕ್ಕೆ ತಂದಿದೆ.
ದೂರು ಸಲ್ಲಿಕೆ ಸಂದರ್ಭದಲ್ಲಿ ‘ಡೆಟೆಕ್ಟಿವ್ ನ್ಯೂಸ್ 24’ ಮುಖ್ಯ ಸಂಪಾದಕ ಕೆ.ಎಂ. ಸತೀಶ್ ಗೌಡ, ಪ್ರಮುಖರಾದ ಎನ್.ಎಸ್. ಆಂಜನೇಯ (ನಿಂಬೇಗೊಂದಿ), ಹೆಚ್. ಈಶ್ವರ ಹಾಗೂ ಬೆಳಗಾವಿಯ ಶಿವಕುಮಾರ್ ಕೊಠ್ಠಾವಳೆ ಉಪಸ್ಥಿತರಿದ್ದರು. ಮನವಿ ಸ್ವೀಕರಿಸಿದ ಡಿಜಿಪಿ ಅವರು, ಸಮಾಜದಲ್ಲಿ ಕೋಮು ಸೌಹಾರ್ದತೆ ಹಾಳುಮಾಡುವ ಮತ್ತು ಧಾರ್ಮಿಕ ನಿಂದನೆ ಮಾಡುವ ಇಂತಹ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ.
Related Articles
Thank you for your comment. It is awaiting moderation.


Comments (0)