ಗುರು ದರ್ಶನದ ಸಂಸ್ಕಾರದಿಂದ ಭವ ಬಂಧನ ಮುಕ್ತಿ: ಶ್ರೀ ರಂಭಾಪುರಿ ಜಗದ್ಗುರುಗಳು

ಚಿಕ್ಕಮಗಳೂರು:ಮಾನವನ ಮನಸ್ಸನ್ನು ಜಾಗೃತಗೊಳಿಸಲು ಧರ್ಮದ ಅಗತ್ಯವಿದೆ. ಗುರುವಿನ ದರ್ಶನ ಪಡೆಯಲು ಪೂರ್ವ ಜನ್ಮದ ಪುಣ್ಯವಿರಬೇಕು. ಗುರು ತೋರಿದ ಸಂಸ್ಕಾರದ ಹಾದಿಯಲ್ಲಿ ನಡೆದರೆ ಸಂಸಾರದ ಭವ ಬಂಧನಗಳು ದೂರವಾಗುತ್ತವೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಜಗದ್ಗುರುಗಳು ತಿಳಿಸಿದರು.

ನಗರದ ಶ್ರೀ ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಬುಧವಾರ ಆಯೋಜಿಸಲಾಗಿದ್ದ ‘ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ’ ಹಾಗೂ ‘ಭಕ್ತಿ ಭಂಡಾರಿ ಶ್ರೀ ಬಸವೇಶ್ವರ ಜಯಂತಿ’ ಅಂಗವಾಗಿ ಹಮ್ಮಿಕೊಂಡಿದ್ದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಲೌಕಿಕ ಪ್ರಪಂಚದ ಸಂಬಂಧಗಳು ಕಾಲ ಕಳೆದಂತೆ ಮಸುಕಾಗಬಹುದು. ಆದರೆ ಗುರು ಮತ್ತು ಶಿಷ್ಯರ ನಡುವಿನ ಬಾಂಧವ್ಯ ಎಂದಿಗೂ ಶಾಶ್ವತ ಹಾಗೂ ನಿರಂತರ ನೂತನವಾದದ್ದು. ನೊಂದವರ ಬಾಳಿಗೆ ಬೆಳಕಾಗುವ ಶ್ರೀ ಗುರು, ಜ್ಞಾನದ ಚೈತನ್ಯದ ಸಂಕೇತವಾಗಿದ್ದಾರೆ. ವೀರಶೈವ ಧರ್ಮವೆಂಬ ವೃಕ್ಷಕ್ಕೆ ಶ್ರೀ ಜಗದ್ಗುರು ರೇಣುಕಾಚಾರ್ಯರು ತಾಯ ಬೇರಾಗಿದ್ದರೆ, ಬಸವಾದಿ ಶರಣರು ಆ ಧರ್ಮ ವೃಕ್ಷದ ಹೂ ಮತ್ತು ಹಣ್ಣುಗಳಿದ್ದಂತೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಕರ್ಮ ಸಿದ್ಧಾಂತದ ಉದಾತ್ತ ಮೌಲ್ಯಗಳನ್ನು ಜಗತ್ತಿಗೆ ಬೋಧಿಸಿದರು ಎಂದು ಜಗದ್ಗುರುಗಳು ವಿವರಿಸಿದರು.

ಸಮಾರಂಭ ಉದ್ಘಾಟಿಸಿದ ಶಾಸಕ ಹೆಚ್.ಟಿ.ತಮ್ಮಯ್ಯ ಮಾತನಾಡಿ ತಂದೆ ಮೆಚ್ಚಿದರೆ ಮಗನ ಶ್ರೇಯಸ್ಸು, ಗುರು ಮೆಚ್ಚಿದರೆ ಶಿಷ್ಯನ ಉದ್ಧಾರ ಸಾಧ್ಯ. ಗುರುದೇವನ ಕರುಣೆ ಕಿರಿದಲ್ಲ. ಆ ಹೃದಯ ಹರಕೆಗೆ ಸಮಾನವಾದುದು ಇನ್ನೊಂದಿಲ್ಲ ಎಂದರು. ಬೇರುಗಂಡಿ ಬೃಹನ್ಮಠದ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮಿಗಳು ಭಕ್ತಿ ಭಂಡಾರಿ ಶ್ರೀ ಬಸವೇಶ್ವರರು ಕೆಡಕುಗಳನ್ನು ಮೆಟ್ಟಿ ನಿಂತು ಒಳಿತಿನತ್ತ ಹೆಜ್ಜೆ ಹಾಕಲು ಪ್ರೇರೇಪಿಸಿದ ಮಹಾನುಭಾವರು. ಬಾಳಿಗೊಂದು ಗುರಿ ಮತ್ತು ಗುರು ಇರಬೇಕೆಂಬುದನ್ನು ಮನವರಿಕೆ ಮಾಡಿ ಕೊಟ್ಟರೆಂದರು. ಶಂಕರದೇವರಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಶ್ರೀ ಜಗದ್ಗುರು ರೇಣುಕಾಚಾರ್ಯರ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳ ವಿಚಾರ ಧಾರೆ ಎಂದೆಂದಿಗೂ ಎಲ್ಲರಿಗೂ ಬೇಕಾದವುಗಳು. ಅಹಿಂಸಾದಿ ಧ್ಯಾನ ಪರ್ಯಂತರವಾದ ದಶಧರ್ಮ ಸೂತ್ರಗಳು ಬಾಳಿನ ವಿಕಾಸಕ್ಕೆ ಅಡಿಪಾಯ. ಭೌತಿಕ ಬದುಕಿಗೆ ಶ್ರೀ ಜಗದ್ಗುರು ರೇಣುಕಾಚಾರ್ಯರ ಚಿಂತನಗಳು ಭಾಗೋದಯದ ಬೆಳಕಿಗೆ ಮೂಲವೆಂದರು. ಹುಲಿಕೆರೆ ದೊಡ್ಡಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಟ್ರಸ್ಟಿನ ಉಪಾಧ್ಯಕ್ಷರಾದ ಎ.ಬಿ. ಸುದರ್ಶನ ಮಾತನಾಡಿ ರವಿ ಕಿರಣದಿಂದ ಪುಷ್ಪ ಅರಳಿದರೆ ಗುರು ಕರುಣದಿಂದ ಆತ್ಮ ಅರಳುತ್ತದೆ. ಜಗ ಬೆಳಗಲು ಸೂರ್ಯ ಬದುಕು ಬೆಳಗಲು ಗುರು ಬೇಕು.ಗುರುವಿನ ಆಧ್ಯಾತ್ಮ ಶಕ್ತಿ ಅದ್ಭುತ. ಶ್ರೀ ಜಗದ್ಗುರು ರೇಣುಕಾಚಾರ್ಯರ ತತ್ವ ಸಿದ್ಧಾಂತಗಳು ಮತ್ತು ಬಸವಣ್ಣನವರ ಸಾಮಾಜಿಕ ಚಿಂತನಗಳು ಬದುಕಿನ ವಿಕಾಸಕ್ಕೆ ಅವಶ್ಯಕವೆಂದರು.

ಶ್ರೀ ಜಗದ್ಗುರು ರೇಣುಕಾಚಾರ್ಯ ಟ್ರಸ್ಟಿನ ಪದಾಧಿಕಾರಿಗಳಾದ ಯು.ಎಮ್.ಬಸವರಾಜ್, ಎಮ್.ಡಿ.ಪುಟ್ಟಸ್ವಾಮಿ, ಎಸ್.ಎಮ್.ದೇವಣ್ಣಗೌಡ ಸೇರಿದಂತೆ ಸರ್ವ ಸದಸ್ಯರು ಪಾಲ್ಗೊಂಡಿದ್ದರು. ಬಾಳೆಹೊನ್ನೂರು ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ ಜರುಗಿತು. ಹೆಚ್.ಎನ್.ನಂಜೇಗೌಡ ಸರ್ವರನ್ನು ಸ್ವಾಗತಿಸಿದರು. ಪಾರ್ವತಿ ಮಹಿಳಾ ಬಳಗ ಮತ್ತು ಅಕ್ಕಮಹಾದೇವಿ ಸಂಘದ ಸದಸ್ಯರು ಪ್ರಾರ್ಥನೆ ಸಲ್ಲಿಸಿದರು. ಬಿ.ಎ.ಶಿವಶಂಕರ್ ನಿರೂಪಿಸಿದರು. ಕಾರ್ಯದರ್ಶಿ ಸಿ.ವಿ.ಮಲ್ಲಿಕಾರ್ಜುನ್, ವಂದನಾರ್ಪಣೆ ಸಲ್ಲಿಸಿದರು.

ಬೆಳಿಗ್ಗೆ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಸರ್ವರಿಗೂ ಶುಭ ಹಾರೈಸಿದರು.

ಶಂಕರದೇವರಮಠದ ಚಂದ್ರಶೇಖರ ಶಿವಾಚಾರ್ಯರು 16 ಜನ ವಟುಗಳಿಗೆ ಶಿವದೀಕ್ಷಾ ಅಯ್ಯಾಚಾರ ಸಂಸ್ಕಾರ ನೀಡಿ ಮಂತ್ರೋಪದೇಶ ಮಾಡಿದರು.

 

Related Articles

Comments (0)

Leave a Comment