Bidadi Township: ಬಿಡದಿಯಲ್ಲಿ ಜಮೀನು ಸರ್ವೇಗೆ ಬಂದ ಅಧಿಕಾರಿಗಳಿಗೆ ‘ಪೊರಕೆ ಸೇವೆ’ ಮಾಡಿದ ರೈತ ಮಹಿಳೆಯರು! ಕಾರು ಜಖಂ
- by Suddi Team
- July 14, 2026
- 3 Views
ಬೆಂಗಳೂರು: ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಗ್ರೇಟರ್ ಬೆಂಗಳೂರು ಟೌನ್ಶಿಪ್ ಯೋಜನೆಗೆ ಜಮೀನು ಸರ್ವೆ ಮಾಡಲು ಬಂದಿದ್ದ ಅಧಿಕಾರಿಗಳ ತಂಡಕ್ಕೆ ರೈತರು ಮತ್ತು ಮಹಿಳೆಯರು ತೀವ್ರವಾಗಿ ಮುತ್ತಿಗೆ ಹಾಕಿ, ಪೊರಕೆಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಡಲಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.
ಬೃಹತ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ಜಂಟಿ ಅಳತೆ ಸಮಿತಿ ಅಧಿಕಾರಿಗಳು ಪೊಲೀಸ್ ಭದ್ರತೆಯೊಂದಿಗೆ ಜಮೀನು ಸಮೀಕ್ಷೆ ನಡೆಸಲು ಗ್ರಾಮಕ್ಕೆ ಆಗಮಿಸಿದ್ದರು. ಈ ವೇಳೆ ಮೊದಲೇ ಆಕ್ರೋಶಗೊಂಡಿದ್ದ ನೂರಾರು ರೈತರು ಹಾಗೂ ರೈತ ಮಹಿಳೆಯರು ಅಧಿಕಾರಿಗಳ ಕಾರನ್ನು ಸುತ್ತುವರಿದರು. ಜಿಲ್ಲಾಧಿಕಾರಿಗಳ ಲಿಖಿತ ಆದೇಶದ ಪತ್ರ ತೋರಿಸುವಂತೆ ಪಟ್ಟು ಹಿಡಿದ ಪ್ರತಿಭಟನಾಕಾರರು, ಅಧಿಕಾರಿಗಳ ವಾಹನಗಳ ಮೇಲೆ ಪೊರಕೆಯಿಂದ ಪ್ರಹಾರ ನಡೆಸಿದರು.
ಉದ್ವಿಗ್ನ ವಾತಾವರಣ, ಪೊಲೀಸರೊಂದಿಗೆ ತಳ್ಳಾಟ
ಸ್ಥಳದಲ್ಲಿದ್ದ ಬಿಡದಿ ಠಾಣೆ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಮುಂದಾದಾಗ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ತೀವ್ರ ಮಾತಿನ ಚಕಮಕಿ ಹಾಗೂ ತಳ್ಳಾಟ ನಡೆದಿದೆ. ರೈತರ ತೀವ್ರ ಆಕ್ರೋಶಕ್ಕೆ ಹೆದರಿದ ಸರ್ವೆ ಅಧಿಕಾರಿಗಳು ಸಮೀಕ್ಷೆಯನ್ನು ಅರ್ಧಕ್ಕೆ ಕೈಬಿಟ್ಟು ಸ್ಥಳದಿಂದ ಕಾರು ಹತ್ತಿ ಕಾಲ್ಕಿತ್ತಿದ್ದಾರೆ. ಈ ವೇಳೆ ಆಕ್ರೋಶಗೊಂಡ ಗ್ರಾಮಸ್ಥರು ಅಧಿಕಾರಿಗಳ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ್ದು, ಕನಿಷ್ಠ ಎರಡು ಸರ್ಕಾರಿ ವಾಹನಗಳು ಜಖಂಗೊಂಡಿವೆ. ಗಲಾಟೆಯ ನಡುವೆ ಕೆಂಪಶೆಟ್ಟಿ ದೊಡ್ಡಿಯ ಕೃಷ್ಣಪ್ಪ ಎಂಬ ಹಿರಿಯ ರೈತರೊಬ್ಬರು ಕುಸಿದು ಬಿದ್ದಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
“ಪ್ರಾಣ ಬಿಟ್ಟೇವು, ಜಮೀನು ಬಿಡೆವು”
“ಯಾವುದೇ ಪೂರ್ವ ಮಾಹಿತಿ ನೀಡದೆ, ನಮ್ಮ ಆಕ್ಷೇಪಣೆಗಳನ್ನು ಪರಿಗಣಿಸದೆ ಏಕಾಏಕಿ ಭೂಮಿ ಸ್ವಾಧೀನಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ನಮ್ಮ ಪ್ರಾಣ ಹೋದರೂ ಸರಿ, ಬಿಡದಿ ಟೌನ್ಶಿಪ್ ಯೋಜನೆಗೆ ಫಲವತ್ತಾದ ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ” ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮತ್ತು ಹಲ್ಲೆ ನಡೆಸಿದ ಆರೋಪದಡಿ ಬಿಡದಿ ಪೊಲೀಸರು ಪ್ರತಿಭಟನಾಕಾರರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
Related Articles
Thank you for your comment. It is awaiting moderation.


Comments (0)