‘ನಸೀಮ್ ಅಲ್ ಬಹರ್’: ಭಾರತ-ಓಮನ್ ನೌಕಾ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳಲು ಮಸ್ಕತ್ ತಲುಪಿದ ಐಎನ್ಎಸ್ ಸೂರತ್
- by Suddi Loka
- November 10, 2026
- 136 Views
ನವದೆಹಲಿ: ಭಾರತ ಮತ್ತು ಓಮನ್ ನಡುವಿನ ದ್ವಿಪಕ್ಷೀಯ ಕಡಲ ಸಮರಾಭ್ಯಾಸದ 15ನೇ ಆವೃತ್ತಿಯಾದ ‘ನಸೀಮ್ ಅಲ್ ಬಹರ್’ನಲ್ಲಿ ಪಾಲ್ಗೊಳ್ಳಲು ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್ಎಸ್ ಸೂರತ್ ನವೆಂಬರ್ 8ರಂದು ಮಸ್ಕತ್ ತಲುಪಿದೆ. ಸಮರಾಭ್ಯಾಸದ ಬಳಿಕ ಓಮನ್ ರಾಯಲ್ ನೇವಿ ಜತೆ ಸಂಯೋಜಿತ ಗಸ್ತು (CORPAT) ಕಾರ್ಯಾಚರಣೆ ನಡೆಯಲಿದೆ ಎಂದು ನೌಕಾಪಡೆ ತಿಳಿಸಿದೆ.
ಸಮರಾಭ್ಯಾಸದಲ್ಲಿ ಬಂದರು ಮತ್ತು ಸಮುದ್ರ ಹಂತದ ಚಟುವಟಿಕೆಗಳು ನಡೆಯಲಿವೆ. ಕ್ರಾಸ್-ಡೆಕ್ ಭೇಟಿಗಳು, ಕಾರ್ಯಾಚರಣೆಗೆ ಸಂಬಂಧಿಸಿದ ಸಂವಾದಗಳು ಹಾಗೂ ಕ್ರೀಡಾಕೂಟಗಳು ಇದರ ಭಾಗವಾಗಿವೆ. ಉಭಯ ನೌಕಾಪಡೆಗಳ ನಡುವಿನ ಪರಸ್ಪರ ಕಾರ್ಯಾಚರಣಾ ಸಾಮರ್ಥ್ಯ ಹೆಚ್ಚಿಸುವುದು, ಅನುಭವ ಹಂಚಿಕೊಳ್ಳುವುದು ಮತ್ತು ಸಹಕಾರ ಬಲಪಡಿಸುವುದು ಇದರ ಉದ್ದೇಶವಾಗಿದೆ.

ಐಎನ್ಎಸ್ ಸೂರತ್ನ ಭೇಟಿ ಭಾರತ ಮತ್ತು ಓಮನ್ ನಡುವಿನ ದೀರ್ಘಕಾಲದ ಕಡಲ ಪಾಲುದಾರಿಕೆಯನ್ನು ಪ್ರತಿಬಿಂಬಿಸುತ್ತದೆ. ಇದು ಭಾರತದ ‘ಮಹಾಸಾಗರ್’ ದೃಷ್ಟಿಕೋನಕ್ಕೂ ಅನುಗುಣವಾಗಿದೆ. ಪ್ರಾದೇಶಿಕ ಭದ್ರತೆ ಮತ್ತು ಬೆಳವಣಿಗೆಗಾಗಿ ಪರಸ್ಪರ ಸಹಕಾರ ಹಾಗೂ ಸಮಗ್ರ ಪ್ರಗತಿಗೆ ಈ ದೃಷ್ಟಿಕೋನ ಒತ್ತು ನೀಡುತ್ತದೆ.
2025ರ ನವೆಂಬರ್ 24ರಂದು ನಡೆದ 13ನೇ ಜಂಟಿ ಮಿಲಿಟರಿ ಸಹಕಾರ ಸಮಿತಿ ಸಭೆಯ ಫಲಿತಾಂಶಗಳ ಆಧಾರದಲ್ಲೂ ಈ ಭೇಟಿ ಮಹತ್ವ ಪಡೆದಿದೆ ಎಂದು ನೌಕಾಪಡೆ ತಿಳಿಸಿದೆ.


Comments (0)