ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ರೂಪಿಸಲು ಪಿಯೂಷ್ ಗೋಯಲ್ ಕರೆ
- by Suddi Loka
- November 11, 2026
- 3 Views
ನವದೆಹಲಿ: ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ರೂಪಿಸಲು ಉದ್ಯಮ ವಲಯ ಮುಂದಾಗಬೇಕು. ದೇಶೀಯ ಮಾರುಕಟ್ಟೆಯ ಜತೆಗೆ ಜಾಗತಿಕ ಮಾರುಕಟ್ಟೆಗಳತ್ತಲೂ ಗಮನಹರಿಸಬೇಕು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಕರೆ ನೀಡಿದ್ದಾರೆ.
ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ಪೋ ಮೂರನೇ ಆವೃತ್ತಿಯ ಪೂರ್ವಭಾವಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ವರ್ಷ 1 ಟ್ರಿಲಿಯನ್ ಡಾಲರ್ ಮೌಲ್ಯದ ರಫ್ತು ಗುರಿ ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು. ಜಾಗತಿಕ ಪಾಲುದಾರಿಕೆ ಮತ್ತು ರಫ್ತು ಆಧಾರಿತ ಬೆಳವಣಿಗೆಗೆ ಆದ್ಯತೆ ನೀಡಬೇಕು ಎಂದರು.
ಜಪಾನ್ ಮತ್ತು ಯುರೋಪ್ನ ವಾಹನ ತಯಾರಕರಿಗೆ ಬಿಡಿಭಾಗ ಪೂರೈಸುತ್ತಿರುವ ಭಾರತೀಯ ಕಂಪನಿಗಳ ಗುಣಮಟ್ಟವನ್ನು ಶ್ಲಾಘಿಸಿದ ಅವರು, ಜಾಗತಿಕ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುವ ಸಾಮರ್ಥ್ಯ ದೇಶೀಯ ಉದ್ಯಮಗಳಿಗಿದೆ ಎಂದು ಹೇಳಿದರು.
ಮೊಬಿಲಿಟಿ ಎಕ್ಸ್ಪೋಗೆ 10 ಲಕ್ಷ ಸಂದರ್ಶಕರು ಹಾಗೂ 25 ಸಾವಿರ ವಿದೇಶಿ ಪ್ರತಿನಿಧಿಗಳ ಆಗಮನ ನಿರೀಕ್ಷಿಸಲಾಗಿದೆ. ಟೈರ್ ವಿತರಕರು, ವಾಹನ ಬಿಡಿಭಾಗ ತಯಾರಕರು ಮತ್ತು ಪೂರೈಕೆದಾರರೂ ಜಾಗತಿಕ ಮಾರುಕಟ್ಟೆ ಸಂಪರ್ಕ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಯುರೋಪ್ನ ವಾಹನ ತಯಾರಕರು ಭಾರತದಲ್ಲಿ ಮಾದರಿಗಳನ್ನು ಪರಿಚಯಿಸಿ, ಬೇಡಿಕೆ ಆಧರಿಸಿ ಇಲ್ಲಿಯೇ ಉತ್ಪಾದನೆ ಆರಂಭಿಸಿ ಜಾಗತಿಕವಾಗಿ ರಫ್ತು ಮಾಡಬಹುದು. ಇದರಿಂದ ಸ್ಪರ್ಧಾತ್ಮಕ ಬೆಲೆಯಲ್ಲಿ ಉತ್ಪನ್ನಗಳನ್ನು ಒದಗಿಸಲು ಸಾಧ್ಯವಾಗಲಿದೆ ಎಂದರು.
ನವರಾತ್ರಿ ಅವಧಿಯಲ್ಲಿ 10 ಲಕ್ಷ ಕಾರುಗಳು ಹಾಗೂ ಧನತೇರಸ್ನ ಎರಡು ದಿನಗಳಲ್ಲಿ 70 ಸಾವಿರ ಕಾರುಗಳು ಮಾರಾಟವಾಗಿರುವುದು ದೇಶೀಯ ಮಾರುಕಟ್ಟೆಯ ಸಾಮರ್ಥ್ಯವನ್ನು ತೋರಿಸುತ್ತದೆ. ಭಾರತವು ಉತ್ಪಾದನೆಯ ಜತೆಗೆ ತಂತ್ರಜ್ಞಾನ ಮತ್ತು ವಿನ್ಯಾಸ ಕ್ಷೇತ್ರಗಳ ಕೇಂದ್ರವಾಗಿಯೂ ಬೆಳೆಯಬೇಕು ಎಂದು ಗೋಯಲ್ ತಿಳಿಸಿದರು.


Comments (0)