ಡಿಆರ್‌ಐ ಕಾರ್ಯಾಚರಣೆ: ಜೆಎನ್‌ಪಿಟಿ ಬಂದರಿನಲ್ಲಿ ₹4 ಕೋಟಿಗೂ ಅಧಿಕ ಮೌಲ್ಯದ 13,000 ಇ-ಸಿಗರೇಟ್‌ ವಶ

ಮುಂಬೈ: ಜವಾಹರಲಾಲ್ ನೆಹರು ಬಂದರು ಟ್ರಸ್ಟ್ (ಜೆಎನ್‌ಪಿಟಿ)ಯಲ್ಲಿ ಅಕ್ರಮವಾಗಿ ಆಮದು ಮಾಡಲಾಗಿದ್ದ ₹4 ಕೋಟಿಗೂ ಅಧಿಕ ಮೌಲ್ಯದ 13,000 ಇ-ಸಿಗರೇಟ್‌ಗಳನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ವಶಪಡಿಸಿಕೊಂಡಿದೆ.

ನಿರ್ದಿಷ್ಟ ಗುಪ್ತಚರ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಮಾಪ್ ರಾಡ್‌ಗಳೆಂದು ಘೋಷಿಸಿ ಆಮದು ಮಾಡಲಾಗಿದ್ದ ಕಂಟೇನರ್‌ವೊಂದನ್ನು ತಡೆದು ಪರಿಶೀಲಿಸಿದ್ದಾರೆ. ಈ ವೇಳೆ ಘೋಷಿತ ಸರಕಿನ ಹಿಂದೆ ಅಡಗಿಸಿಟ್ಟಿದ್ದ 6,000 ಯುಟೊ ಥಾನೋಸ್ ಮತ್ತು 7,000 ಯುಟೊ ಲೆನ್ಸ್ ಬ್ರಾಂಡ್‌ನ ಇ-ಸಿಗರೇಟ್‌ಗಳು ಪತ್ತೆಯಾಗಿವೆ. ಸರಕು ಸಮೇತ ಸಾಧನಗಳನ್ನು ಕಸ್ಟಮ್ಸ್ ಕಾಯ್ದೆಯಡಿ ವಶಪಡಿಸಿಕೊಳ್ಳಲಾಗಿದೆ.

ಭಾರತದಲ್ಲಿ ಇ-ಸಿಗರೇಟ್‌ಗಳು ಹಾಗೂ ಇತರ ಎಲೆಕ್ಟ್ರಾನಿಕ್ ನಿಕೋಟಿನ್ ವಿತರಣಾ ವ್ಯವಸ್ಥೆಗಳನ್ನು (ENDS) ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ ಕಾಯ್ದೆ-2019ರ ಅಡಿಯಲ್ಲಿ ನಿಷೇಧಿಸಲಾಗಿದೆ. ಇವುಗಳ ಉತ್ಪಾದನೆ, ಆಮದು, ಮಾರಾಟ ಮತ್ತು ವಿತರಣೆಗೆ ಕಾನೂನಿನಲ್ಲಿ ನಿರ್ಬಂಧವಿದೆ.

2026-27ನೇ ಹಣಕಾಸು ವರ್ಷದಲ್ಲಿ ಮಹಾರಾಷ್ಟ್ರ, ಗುಜರಾತ್, ದೆಹಲಿ ಮತ್ತು ಪಶ್ಚಿಮ ಬಂಗಾಳದ ಬಂದರುಗಳು, ವಿಮಾನ ನಿಲ್ದಾಣಗಳು ಹಾಗೂ ಒಳನಾಡಿನ ಕಂಟೇನರ್ ಡಿಪೋಗಳಲ್ಲಿ ಸುಮಾರು ₹135 ಕೋಟಿಗೂ ಅಧಿಕ ಮೌಲ್ಯದ 3.55 ಲಕ್ಷ ಇ-ಸಿಗರೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಆರ್‌ಐ ತಿಳಿಸಿದೆ.

ಗಡಿಯಾಚೆಗಿನ ಕಳ್ಳಸಾಗಣೆ ಮತ್ತು ಅಕ್ರಮ ವ್ಯಾಪಾರ ತಡೆಗಟ್ಟುವ ಕಾರ್ಯಾಚರಣೆಯ ಭಾಗವಾಗಿ ಈ ದಾಳಿ ನಡೆಸಲಾಗಿದೆ ಎಂದು ಸಂಸ್ಥೆ ಹೇಳಿದೆ.

Related Articles

Comments (0)