ಆಂಧ್ರ ಸ್ಥಳೀಯ ಸಂಸ್ಥೆ ಚುನಾವಣೆ: ಟಿಡಿಪಿ ನೇತೃತ್ವದ ಎನ್ಡಿಎಗೆ ಭರ್ಜರಿ ಜಯ
- by Suddi Loka
- November 9, 2026
- 180 Views
ಅಮರಾವತಿ: ಆಂಧ್ರಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಟಿಡಿಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಭರ್ಜರಿ ಗೆಲುವು ದಾಖಲಿಸಿದೆ. 582 ಜಿಲ್ಲಾ ಪರಿಷತ್ ಸ್ಥಾನಗಳ ಪೈಕಿ 499ರಲ್ಲಿ ಹಾಗೂ 7,768 ಮಂಡಲ ಪರಿಷತ್ ಸ್ಥಾನಗಳ ಪೈಕಿ 5,861ರಲ್ಲಿ ಮೈತ್ರಿಕೂಟ ಜಯಗಳಿಸಿದೆ.
ಟಿಡಿಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, 406 ಜಿಲ್ಲಾ ಪರಿಷತ್ ಮತ್ತು 4,806 ಮಂಡಲ ಪರಿಷತ್ ಸ್ಥಾನಗಳನ್ನು ಗೆದ್ದಿದೆ. ಜನಸೇನಾ ಪಕ್ಷ 73 ಜಿಲ್ಲಾ ಪರಿಷತ್ ಹಾಗೂ 938 ಮಂಡಲ ಪರಿಷತ್ ಸ್ಥಾನಗಳನ್ನು ಪಡೆದರೆ, ಬಿಜೆಪಿ ಕ್ರಮವಾಗಿ 20 ಮತ್ತು 117 ಸ್ಥಾನಗಳಲ್ಲಿ ಜಯ ಸಾಧಿಸಿದೆ.
ಪ್ರತಿಪಕ್ಷ ವೈಎಸ್ಆರ್ಸಿಪಿ 76 ಜಿಲ್ಲಾ ಪರಿಷತ್ ಹಾಗೂ 1,711 ಮಂಡಲ ಪರಿಷತ್ ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ಗೆ ಯಾವುದೇ ಸ್ಥಾನ ಲಭಿಸಿಲ್ಲ. ಸಿಪಿಐ(ಎಂ) ಒಂದು ಜಿಲ್ಲಾ ಪರಿಷತ್ ಸ್ಥಾನ ಪಡೆದಿದೆ.

ವೈಎಸ್ಆರ್ಸಿಪಿ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಅವರ ತವರು ಕಡಪದಲ್ಲೂ ಪಕ್ಷಕ್ಕೆ ಹಿನ್ನಡೆಯಾಗಿದೆ. 16 ಸ್ಥಾನಗಳ ಪೈಕಿ ವೈಎಸ್ಆರ್ಸಿಪಿ ಕೇವಲ ಎರಡರಲ್ಲಿ ಗೆದ್ದಿದ್ದು, ಟಿಡಿಪಿ 12 ಮತ್ತು ಜನಸೇನಾ ಎರಡು ಸ್ಥಾನಗಳನ್ನು ಪಡೆದಿವೆ. ನೆಲ್ಲೂರು ಜಿಲ್ಲೆಯಲ್ಲಿ 30 ಸ್ಥಾನಗಳ ಪೈಕಿ ಟಿಡಿಪಿ 26 ಸ್ಥಾನಗಳನ್ನು ಗೆದ್ದಿದೆ.
ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಜಗನ್ ಮೋಹನ್ ರೆಡ್ಡಿ ಆರೋಪಿಸಿದ್ದಾರೆ. ಅಧಿಕಾರಿಗಳ ಮೇಲೆ ಒತ್ತಡ ಹೇರಿ ಫಲಿತಾಂಶ ತಿರುಚಲಾಗಿದೆ ಎಂದು ದೂರಿರುವ ಅವರು, ಟಿಡಿಪಿ ಚುನಾವಣೆಯಲ್ಲಿ ಗೆದ್ದಿರಬಹುದು, ಆದರೆ ನೈತಿಕವಾಗಿ ಸೋತಿದೆ ಎಂದು ಟೀಕಿಸಿದ್ದಾರೆ.


Comments (0)