ಬಾಳೆಹೊನ್ನೂರು ಅಜ್ಜಯ್ಯ ನೀಡಿದ ಸಾಕ್ಷಾತ್ಕಾರ ಶೀಘ್ರದಲ್ಲೇ ಪುಸ್ತಕ ರೂಪಕ್ಕೆ: ಡಿಕೆ ಶಿವಕುಮಾರ್ ಘೋಷಣೆ

ಬಾಳೆಹೊನ್ನೂರು: “ರಂಭಾಪುರಿ ಪೀಠವು ಕೇವಲ ಒಂದು ಧರ್ಮಕ್ಕೆ ಸೀಮಿತವಾದ ಆಸ್ತಿಯಲ್ಲ, ಅದು ಇಡೀ ಮಾನವ ಧರ್ಮದ ಆಸ್ತಿ” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಣ್ಣಿಸಿದ್ದಾರೆ.

ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ಆಯೋಜನೆ ಮಾಡಿದ್ದ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,”ನಾನು ಒಕ್ಕಲಿಗನಾಗಿದ್ದರೂ ಗಂಗಾಧರ ಅಜ್ಜಯ್ಯ ಅವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ನನ್ನ ಅಚಲ ನಂಬಿಕೆ. ಅಜ್ಜಯ್ಯ ಅವರು ನನಗೆ ನೀಡಿದ ಸಾಕ್ಷಾತ್ಕಾರಗಳನ್ನು ಮುಂದಿನ ದಿನಗಳಲ್ಲಿ ಪುಸ್ತಕ ರೂಪದಲ್ಲಿ ಹೊರತರುತ್ತೇನೆ. ರಂಭಾಪುರಿ ಶ್ರೀಗಳ ಮಾರ್ಗದರ್ಶನ ನನ್ನ ಸಾರ್ವಜನಿಕ ಜೀವನಕ್ಕೆ ದೊಡ್ಡ ಶಕ್ತಿಯಾಗಿದೆ” ಎಂದು ಅವರು ಭಾವನಾತ್ಮಕವಾಗಿ ನುಡಿದರು.

5 ಕೋಟಿ ರೂ. ಅನುದಾನ ಘೋಷಣೆ:

ಮಠದ ಆವರಣದಲ್ಲಿ ಅರ್ಧಕ್ಕೆ ನಿಂತಿರುವ ಭವನದ ಕಾಮಗಾರಿಯನ್ನು ಪೂರ್ಣಗೊಳಿಸಲು ಸರ್ಕಾರದಿಂದ 5 ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಡಿಸಿಎಂ ಇದೇ ವೇಳೆ ಘೋಷಿಸಿದರು. ಕಾಮಗಾರಿ ಮುಗಿದ ನಂತರ ತಾವೇ ಖುದ್ದಾಗಿ ಬಂದು ಉದ್ಘಾಟಿಸುವುದಾಗಿ ಅವರು ಭರವಸೆ ನೀಡಿದರು.

ಧರ್ಮ ಹೋರಾಟದ ಪಶ್ಚಾತ್ತಾಪ:

ಈ ಹಿಂದೆ ನಡೆದ ವೀರಶೈವ-ಲಿಂಗಾಯತ ಧರ್ಮ ಹೋರಾಟದ ಸಂದರ್ಭದಲ್ಲಿ ಉಂಟಾದ ಗೊಂದಲಗಳ ಬಗ್ಗೆ ಉಲ್ಲೇಖಿಸಿದ ಅವರು, “ಆಗ ನಮ್ಮಿಂದ ತಪ್ಪಾಯಿತು ಎಂದು ನಾನು ಶ್ರೀಗಳ ಪಾದಕ್ಕೆ ನಮಸ್ಕರಿಸಿ ಕ್ಷಮೆ ಕೇಳಿದ್ದೆ. ಲೋಕ ಏನೇ ಟೀಕಿಸಿದರೂ ಆತ್ಮಸಾಕ್ಷಿಗೆ ಅನುಗುಣವಾಗಿ ಬದುಕಬೇಕು ಎಂಬುದು ನನ್ನ ಸಿದ್ಧಾಂತ” ಎಂದರು.

ವಿಶ್ವಕ್ಕೆ ಶಾಂತಿಯ ಸಂದೇಶ:

“ದೇವನೊಬ್ಬ ನಾಮ ಹಲವು” ಎಂಬ ಅಜ್ಜಯ್ಯ ಅವರ ತತ್ವವನ್ನು ಸ್ಮರಿಸಿದ ಶಿವಕುಮಾರ್ ಅವರು, ಮಾನವ ಧರ್ಮದ ಮೂಲಕವೇ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯ. ಸಾಹಿತ್ಯ ಮತ್ತು ಸಂಸ್ಕೃತಿ ಸಮೃದ್ಧವಾಗಿ ಬೆಳೆಯಬೇಕು ಎಂದು ಆಶಿಸಿದ ಅಜ್ಜಯ್ಯರನ್ನು ಸ್ಮರಿಸಿದರು.

“ಅಕ್ಕಿ ಮತ್ತು ಅರಿಶಿನ ಬೇರೆ ಬೇರೆ ಇದ್ದಾಗ ಸಾಮಾನ್ಯ, ಆದರೆ ಅವೆರಡೂ ಬೆರೆತಾಗ ಮಂತ್ರಾಕ್ಷತೆಯಾಗಿ ಪವಿತ್ರತೆ ಪಡೆಯುತ್ತವೆ. ಅದೇ ರೀತಿ ರಂಭಾಪುರಿ ಪೀಠದ ಪವಿತ್ರ ಕಾರ್ಯಗಳಲ್ಲಿ ಭಾಗಿಯಾಗುತ್ತಿರುವುದು ನನ್ನ ಪೂರ್ವಜನ್ಮದ ಪುಣ್ಯ” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟರು.

ಜಾತಿ ಮೀರಿ ಬದುಕೋಣ:

“ಯಾರೂ ಕೂಡ ಇಂತಹುದೇ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿ ಹುಟ್ಟುವುದಿಲ್ಲ. ಧರ್ಮವನ್ನು ನಾವು ಕಾಪಾಡಿದರೆ, ಧರ್ಮ ನಮ್ಮನ್ನು ಕಾಪಾಡುತ್ತದೆ ಎಂಬ ತತ್ವದಲ್ಲಿ ನನಗೆ ನಂಬಿಕೆಯಿದೆ. ಹುಟ್ಟು ಮತ್ತು ಸಾವಿನ ನಡುವೆ ನಾವು ಸಮಾಜಕ್ಕೆ ಒಳ್ಳೆಯ ಕೆಲಸಗಳ ಮೂಲಕ ಸಾಕ್ಷಿಗುಡ್ಡೆಗಳನ್ನು ಬಿಟ್ಟು ಹೋಗಬೇಕು. ಹಿರಿಯರು ಹೇಳಿದಂತೆ ಮಠ ಮತ್ತು ಮನೆಗಳನ್ನು ನಾವು ಪೂಜ್ಯ ಭಾವನೆಯಿಂದ ಸಂರಕ್ಷಿಸಬೇಕು” ಎಂದು ಅವರು ಕರೆ ನೀಡಿದರು.

ಹೆಸರಿನ ಹಿಂದಿನ ಶಿವನ ಮಹಿಮೆ:

ತಮ್ಮ ಹೆಸರಿನ ಕುರಿತು ವಿಶೇಷ ಮಾಹಿತಿ ಹಂಚಿಕೊಂಡ ಡಿ.ಕೆ. ಶಿವಕುಮಾರ್, “ನಮ್ಮ ಕುಟುಂಬದಲ್ಲಿ ಕೆಂಪೇಗೌಡ ಎಂಬ ಹೆಸರೇ ಪಾರಂಪರಿಕವಾಗಿ ನಡೆದು ಬಂದಿದೆ. ಆದರೆ, ನಮ್ಮ ತಂದೆ-ತಾಯಿಗೆ ಮಕ್ಕಳಾಗುವುದು ತಡವಾದಾಗ ಶಿವಾಲ್ದಾಪ್ಪ ಬೆಟ್ಟದ ಶಿವನಿಗೆ ಪೂಜೆ ಸಲ್ಲಿಸಿದ ಫಲವಾಗಿ ನಾನು ಜನಿಸಿದೆ. ಹಾಗಾಗಿಯೇ ನನಗೆ ‘ಶಿವಕುಮಾರ’ ಎಂದು ಹೆಸರಿಡಲಾಯಿತು” ಎಂದು ನೆನಪಿಸಿಕೊಂಡರು.

ವೀರಶೈವ ಶಿಕ್ಷಣ ಸಂಸ್ಥೆಗಳೊಂದಿಗೆ ಅವಿನಾಭಾವ ಸಂಬಂಧ:

“ನನ್ನ ಶೈಕ್ಷಣಿಕ ಜೀವನಕ್ಕೂ ವೀರಶೈವ ಸಂಸ್ಥೆಗಳಿಗೂ ನಿಕಟ ಸಂಬಂಧವಿದೆ. ಪಿಯುಸಿ ವಿದ್ಯಾಭ್ಯಾಸವನ್ನು ವೀರಶೈವ ಸಂಸ್ಥೆಯಲ್ಲಿ ಹಾಗೂ ಪದವಿಯನ್ನು ವೀರ ಗಂಗಾಧರ ಅಜ್ಜಯ್ಯನವರು ಸ್ಥಾಪಿಸಿದ ರೇಣುಕಾಚಾರ್ಯ ಸಂಸ್ಥೆಯಲ್ಲಿ ಪೂರೈಸಿದ್ದೇನೆ. ಅಂದಿನಿಂದಲೂ ನಾನು ಅಜ್ಜಯ್ಯನವರ ಪರಮಭಕ್ತನಾಗಿದ್ದು, ಅವರ ಆಶೀರ್ವಾದ ಸದಾ ನನ್ನ ಮೇಲಿದೆ” ಎಂದರು.

ಪರಮ ಸುಖದ ಕ್ಷಣ:

ಪುರಂದರ ದಾಸರ “ಇದು ಭಾಗ್ಯ ಇದು ಭಾಗ್ಯ…” ಕೀರ್ತನೆಯನ್ನು ಉಲ್ಲೇಖಿಸಿದ ಡಿಸಿಎಂ, “ಪರಮಗುರು ರೇಣುಕಾಚಾರ್ಯರ ಪ್ರತಿಮೆಯನ್ನು ಉದ್ಘಾಟಿಸುವ ಅವಕಾಶ ಸಿಕ್ಕಿದ್ದು ನನ್ನ ಜೀವನದ ಅತಿದೊಡ್ಡ ಭಾಗ್ಯ” ಎಂದು ಭಾವಪರವಶರಾಗಿ ನುಡಿದರು.

Related Articles

Comments (0)

Leave a Comment