ಇತಿಹಾಸದ ಪುಟ ಸೇರಲಿವೆ ಬೆಂಗಳೂರಿನ ಕಸದ ಗಾಡಿಗಳು..!

ವಿಶೇಷ ವರದಿ:ರಮ್ಯ ಬಿ.ಟಿ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪ್ರತಿ ಬೆಳಿಗ್ಗೆ ಕೇಳಿಬರುವ ಕಸದ ಗಾಡಿಯ ಸಪ್ಪಳ, ರಸ್ತೆ ಮೂಲೆಯಲ್ಲಿದ್ದ ಕಸದ ರಾಶಿ.. ಇವೆಲ್ಲವೂ ಈಗ ಬೆಳ್ಳಂದೂರಿನ ಕೈಕೊಂಡ್ರಹಳ್ಳಿಯ ಕೆಲವು ಬೀದಿಗಳಲ್ಲಿ ಇತಿಹಾಸ ಸೇರುತ್ತಿವೆ. ಇಲ್ಲಿನ ನಿವಾಸಿಗಳು ತಮ್ಮ ಮನೆಯ ತ್ಯಾಜ್ಯವನ್ನು ಕೇವಲ ‘ಕಸ’ ಎಂದು ನೋಡದೆ, ಅದನ್ನೊಂದು ‘ಕಾಂಚಾಣ’ವನ್ನಾಗಿ ಮಾಡುವ ಮಂತ್ರವನ್ನು ಅರಿತುಕೊಂಡಿದ್ದಾರೆ. ಅದಕ್ಕೆ ವೇದಿಕೆ ಕಲ್ಪಿಸಿರುವುದು ಈ ಹೊಸ ‘ಲೇನ್ ಕಂಪೋಸ್ಟರ್’ (Lane Composter) ಅಭಿಯಾನ.

ಬೀದಿಯೇ ಒಂದು ಪಾಠಶಾಲೆ:

ಬೆಂಗಳೂರು ಪೂರ್ವ ನಗರ ಪಾಲಿಕೆ (BECC) ಮತ್ತು ‘ಸಾಹಸ್’ ಎನ್‌ಜಿಒ ತಂಡವು ಕೈಜೋಡಿಸಿದ ಪರಿಣಾಮ, ರಸ್ತೆಯ ಒಂದು ಮೂಲೆ ಸುಂದರ ಕಸ ಸಂಸ್ಕರಣಾ ಘಟಕವಾಗಿ ಮಾರ್ಪಟ್ಟಿತು. ಇಲ್ಲಿ ಅಳವಡಿಸಲಾಗಿರುವ ಕಂಪೋಸ್ಟರ್ ಬಿನ್‌ಗಳು ಕೇವಲ ಕಬ್ಬಿಣದ ಡಬ್ಬಗಳಲ್ಲ; ಅವು ನಾಗರಿಕ ಪ್ರಜ್ಞೆಯ ಸಂಕೇತಗಳು. ಹಸಿ ಕಸವನ್ನು ರಸ್ತೆಗೆ ಎಸೆಯುವ ಬದಲು, ಇಲ್ಲೇ ಸಂಸ್ಕರಿಸಿ ಕಪ್ಪು ಚಿನ್ನದಂತ (Black Gold) ಗೊಬ್ಬರವನ್ನಾಗಿ ಮಾಡುವ ಪ್ರಕ್ರಿಯೆ ಈಗ ಇಲ್ಲಿನ ದಿನಚರಿ.

ಬದಲಾದ ನಿವಾಸಿಗಳ ಮನೋಭಾವ:

“ಹಿಂದೆ ಕಸದ ಗಾಡಿ ಬರದಿದ್ದರೆ ಆತಂಕವಾಗುತ್ತಿತ್ತು, ಈಗ ನಮ್ಮ ಕಸ ನಮ್ಮ ಜವಾಬ್ದಾರಿ ಎಂಬ ಹೆಮ್ಮೆ ಇದೆ,” ಎನ್ನುತ್ತಾರೆ ಸ್ಥಳೀಯ ನಿವಾಸಿಗಳು. ಸಾಹಸ್ ತಂಡವು ಮನೆಮನೆಗೆ ತೆರಳಿ, ಕಸವನ್ನು ಹೇಗೆ ವಿಂಗಡಿಸಬೇಕು ಮತ್ತು ಬಿನ್‌ಗಳಲ್ಲಿ ಹೇಗೆ ಗೊಬ್ಬರ ತಯಾರಿಸಬೇಕು ಎಂದು ನೀಡಿದ ಪ್ರಾತ್ಯಕ್ಷಿಕೆ ಜನರ ಮನಗೆದ್ದಿದೆ. ದುರ್ವಾಸನೆ ಇಲ್ಲದ, ಸೊಳ್ಳೆಗಳ ಕಾಟವಿಲ್ಲದ ಈ ಸರಳ ತಂತ್ರಜ್ಞಾನ ಬೆಂಗಳೂರಿನಂತಹ ಮಹಾನಗರಕ್ಕೆ ವರದಾನವಾಗಿದೆ.

ಯೋಜನೆಯ ‘ಸ್ಪೆಷಲ್’ ಏನು?

ವಿಕೇಂದ್ರೀಕರಣ: ದೊಡ್ಡ ಘಟಕಗಳಿಗೆ ಕಸ ಸಾಗಿಸುವ ವೆಚ್ಚ ಮತ್ತು ಮಾಲಿನ್ಯ ಇಲ್ಲಿ ಶೂನ್ಯ.

ತಕ್ಷಣದ ಪರಿಹಾರ: ಹಸಿ ಕಸ ಕೊಳೆತು ನಾರುವ ಮೊದಲೇ ಅದು ಸಂಸ್ಕರಣೆಗೆ ಒಳಗಾಗುತ್ತದೆ.

ಸಮುದಾಯದ ಶಕ್ತಿ: ಇದು ಕೇವಲ ಸರ್ಕಾರದ ಕೆಲಸವಲ್ಲ, ಬೀದಿಯ ಪ್ರತಿಯೊಬ್ಬ ನಿವಾಸಿಯೂ ಇಲ್ಲಿ ‘ಪರಿಸರ ರಕ್ಷಕ’.

ತ್ಯಾಜ್ಯ ಮುಕ್ತ ಬೆಂಗಳೂರು ಎಂಬುದು ಕೇವಲ ಘೋಷಣೆಯಾಗಿ ಉಳಿಯಬಾರದು ಎನ್ನುವುದಕ್ಕೆ ಕೈಕೊಂಡ್ರಹಳ್ಳಿಯ ಈ ಮಾದರಿ ಸಾಕ್ಷಿ. ತ್ಯಾಜ್ಯವನ್ನು ಸಂಪನ್ಮೂಲವನ್ನಾಗಿ ಬದಲಿಸಿ, ಭೂಮಿಯ ಹೊರೆಯನ್ನು ತಗ್ಗಿಸುತ್ತಿರುವ ಈ ‘ಲೇನ್ ಕಂಪೋಸ್ಟರ್’ ಯೋಜನೆ ನಗರದ ಪ್ರತಿಯೊಂದು ವಾರ್ಡ್ ಗೂ ವಿಸ್ತರಿಸಬೇಕಾದ ಅಗತ್ಯವಿದೆ.

Related Articles

Comments (0)

Leave a Comment