ಮಾರ್ಚ್ 6ಕ್ಕೆ ಸಿದ್ದರಾಮಯ್ಯ 17ನೇ ಬಜೆಟ್: ಸಚಿವ ಸಂಪುಟ ಅಸ್ತು
- by Suddi Team
- February 13, 2026
- 11 Views
ಬೆಂಗಳೂರು: ರಾಜ್ಯದ ಕುತೂಹಲ ಕೆರಳಿಸಿರುವ 2026-27ನೇ ಸಾಲಿನ ಆಯವ್ಯಯ ಮಂಡನೆಗೆ ದಿನಾಂಕ ನಿಗದಿಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 6ರಂದು ರಾಜ್ಯ ಬಜೆಟ್ ಮಂಡಿಸಲಿದ್ದಾರೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ದಾಖಲೆಯ 17ನೇ ಬಜೆಟ್ ಮಂಡಿಸಲು ಸಿಎಂ ಸಜ್ಜಾಗಿದ್ದಾರೆ.
14 ದಿನಗಳ ಅಧಿವೇಶನ:
ಸಂಪುಟ ಸಭೆಯ ಬಳಿಕ ವಿವರ ನೀಡಿದ ಕಾನೂನು ಸಚಿವ ಎಚ್.ಕೆ. ಪಾಟೀಲ್, “ಬಜೆಟ್ ಅಧಿವೇಶನವು ಮಾರ್ಚ್ 6 ರಿಂದ 27ರವರೆಗೆ ನಡೆಯಲಿದೆ. ಮಾರ್ಚ್ 6ರಂದು ಬೆಳಗ್ಗೆ 11ಕ್ಕೆ ಬಜೆಟ್ ಮಂಡನೆಯಾಗಲಿದ್ದು, ನಂತರದ ದಿನಗಳಲ್ಲಿ ಇಲಾಖಾವಾರು ಬೇಡಿಕೆಗಳ ಮೇಲೆ ಚರ್ಚೆ ನಡೆಯಲಿದೆ” ಎಂದು ತಿಳಿಸಿದರು.
ಸಂಪುಟದ ಇತರ ಪ್ರಮುಖ ನಿರ್ಧಾರಗಳು:
ಶಕ್ತಿ ಯೋಜನೆಗೆ ‘ಸ್ಮಾರ್ಟ್’ ಸ್ಪರ್ಶ: ಇನ್ಮುಂದೆ ಮಹಿಳೆಯರು ಉಚಿತ ಬಸ್ ಪ್ರಯಾಣಕ್ಕಾಗಿ ಕೇವಲ ಆಧಾರ್ ಕಾರ್ಡ್ ತೋರಿಸಿದರೆ ಸಾಲದು. ಶಕ್ತಿ ಯೋಜನೆಗೆ ಸಾರಿಗೆ ಇಲಾಖೆ ನೀಡುವ ಸ್ಮಾರ್ಟ್ ಕಾರ್ಡ್ ಕಡ್ಡಾಯಗೊಳಿಸಲು ಸಂಪುಟ ಸಭೆ ಅನುಮೋದನೆ ನೀಡಿದೆ. ಇದರಿಂದ ಯೋಜನೆಯಲ್ಲಿ ಆಗುತ್ತಿರುವ ಸೋರಿಕೆ ತಡೆಯಲು ಸರ್ಕಾರ ಮುಂದಾಗಿದೆ.
ರೇಸ್‌ಕೋರ್ಸ್ ಕುಣಿಗಲ್‌ಗೆ ಶಿಫ್ಟ್: ಬೆಂಗಳೂರಿನ ಹೃದಯಭಾಗದಲ್ಲಿರುವ ಟರ್ಫ್ ಕ್ಲಬ್ ಅನ್ನು ತುಮಕೂರು ಜಿಲ್ಲೆಯ ಕುಣಿಗಲ್‌ಗೆ ಸ್ಥಳಾಂತರಿಸಲು ಅಧಿಕೃತ ಮುದ್ರೆ ಒತ್ತಲಾಗಿದೆ. ಬೆಂಗಳೂರಿನ ಈ ಅಮೂಲ್ಯ ಭೂಮಿಯನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಸರ್ಕಾರ ಬಳಸಿಕೊಳ್ಳಲಿದೆ.
ಹೆಣ್ಣುಮಕ್ಕಳಿಗೆ ಕ್ಯಾನ್ಸರ್ ಲಸಿಕೆ: ಕಲ್ಯಾಣ ಕರ್ನಾಟಕದ 5 ಜಿಲ್ಲೆಗಳ ಹದಿಹರೆಯದ ಹೆಣ್ಣುಮಕ್ಕಳಿಗೆ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಹೆಚ್‌ಪಿವಿ (HPV) ಲಸಿಕೆ ನೀಡುವ ಯೋಜನೆಗೆ ₹34 ಕೋಟಿ ಅನುದಾನ ಬಿಡುಗಡೆ ಮಾಡಲು ಸಂಪುಟ ಒಪ್ಪಿಗೆ ನೀಡಿದೆ.
ಕೃಷಿ ವಲಯ ಘೋಷಣೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ 13 ಗ್ರಾಮಗಳ ಸುಮಾರು 1,777 ಎಕರೆ ಪ್ರದೇಶವನ್ನು ‘ವಿಶೇಷ ಕೃಷಿ ವಲಯ’ ಎಂದು ಘೋಷಿಸಲಾಗಿದ್ದು, ಇಲ್ಲಿ ಯಾವುದೇ ಕೈಗಾರಿಕಾ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ.
ಚಿನ್ನಸ್ವಾಮಿಯಲ್ಲಿ ಐಪಿಎಲ್ ಹವಾ: ಸುರಕ್ಷತಾ ಕ್ರಮಗಳ ಅಡಿಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ.
ಗ್ಯಾರಂಟಿ ಯೋಜನೆಗಳ ಅಬ್ಬರದ ನಡುವೆ ಸಿಎಂ ಸಿದ್ದರಾಮಯ್ಯ ಈ ಬಾರಿ ಯಾವ ಹೊಸ ಘೋಷಣೆಗಳನ್ನು ಮಾಡಲಿದ್ದಾರೆ ಎಂಬುದು ಈಗ ಇಡೀ ರಾಜ್ಯದ ಕುತೂಹಲಕ್ಕೆ ಕಾರಣವಾಗಿದೆ.
Related Articles
Thank you for your comment. It is awaiting moderation.


Comments (0)