ಶಿಕ್ಷಣದಲ್ಲಿ AI ಕ್ರಾಂತಿ, ಬೆಂಗಳೂರು ಪೊಲೀಸ್ ವಿಭಜನೆ: ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಮಹತ್ವದ ಘೋಷಣೆಗಳು
- by Suddi Team
- August 15, 2026
- 30 Views
ಬೆಂಗಳೂರು:ರಾಜ್ಯದ ಮುಖ್ಯಮಂತ್ರಿಯಾಗಿ ತಮ್ಮ ಮೊದಲ ಸ್ವಾತಂತ್ರ್ಯ ದಿನಾಚರಣೆಯ ಭಾಷಣ ಮಾಡಿದ ಡಿ.ಕೆ. ಶಿವಕುಮಾರ್ ಅವರು, ಕರ್ನಾಟಕವನ್ನು ಅಭಿವೃದ್ಧಿಯ ಹೊಸ ಪಥಕ್ಕೆ ಕೊಂಡೊಯ್ಯುವ ಬಲಿಷ್ಠ ‘ಯುವ ಕರ್ನಾಟಕ-ನವಭಾರತ’ ಮುನ್ನೋಟವನ್ನು ಅನಾವರಣಗೊಳಿಸಿದರು.
ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ತೆರೆದ ಜೀಪಿನಲ್ಲಿ ಪರೇಡ್ ಪರಿವೀಕ್ಷಣೆ ನಡೆಸಿ ವಂದನೆ ಸ್ವೀಕರಿಸಿದ ಬಳಿಕ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, “ನನ್ನನ್ನು ನಂಬಿ ಈ ಉನ್ನತ ಜವಾಬ್ದಾರಿ ನೀಡಿರುವ ನಾಡಿನ ಜನತೆಗೆ ನಾನು ಕೇವಲ ಭರವಸೆಗಳನ್ನಲ್ಲ, ಬದಲಿಗೆ ಶಾಶ್ವತ ‘ಸಾಕ್ಷಿಗುಡ್ಡೆ’ಗಳನ್ನು (ಅಭಿವೃದ್ಧಿಯ ಗುರುತು) ಉಳಿಸಿ ಹೋಗುತ್ತೇನೆ” ಎಂದು ಪಣ ತೊಟ್ಟರು.
ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿ: ‘AI ಅಕ್ಷರ ಅಭಿಯಾನ’
6ನೇ ತರಗತಿಯಿಂದಲೇ AI ಶಿಕ್ಷಣ: ರಾಜ್ಯದ ಎಲ್ಲಾ ಶಾಲೆಗಳಲ್ಲಿ 6ನೇ ತರಗತಿಯಿಂದಲೇ ಕೃತಕ ಬುದ್ಧಿಮತ್ತೆ (AI) ಶಿಕ್ಷಣವನ್ನು ಕಡ್ಡಾಯಗೊಳಿಸಲಾಗುವುದು.
AI ಅಕ್ಷರ ಅಭಿಯಾನ ಹಾಗೂ ಕೋಡಿಂಗ್ ಗುರುಕುಲ: ಗ್ರಾಮೀಣ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಒದಗಿಸಲು ಈ ನೂತನ ಯೋಜನೆಗಳಿಗೆ ಚಾಲನೆ ನೀಡಲಾಗಿದೆ.
ದೇಶದ ಮೊದಲ ಸರ್ಕಾರಿ AI ವಿಶ್ವವಿದ್ಯಾಲಯ: ತಂತ್ರಜ್ಞಾನದ ರಾಜಧಾನಿ ಬೆಂಗಳೂರಿನಲ್ಲಿ ದೇಶದಲ್ಲೇ ಪ್ರಥಮ ಬಾರಿಗೆ ಸರ್ಕಾರಿ ಸ್ವಾಮ್ಯದ ‘ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯ’ ಸ್ಥಾಪಿಸಲಾಗುವುದು.
ಬೆಂಗಳೂರು ಪೊಲೀಸ್ ಕಮಿಷನರೇಟ್ 5 ಭಾಗವಾಗಿ ವಿಭಜನೆ
ನಗರದ ಕಾನೂನು ಸುವ್ಯವಸ್ಥೆ ಮತ್ತು ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸಲು ಸಿಎಂ ಶಿವಕುಮಾರ್ ಅವರು ಬಿಗ್ ನಿರ್ಧಾರ ಪ್ರಕಟಿಸಿದ್ದಾರೆ. 63 ವರ್ಷಗಳ ಇತಿಹಾಸವಿರುವ ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯವಸ್ಥೆಯನ್ನು ಔಪಚಾರಿಕವಾಗಿ ವಿಭಜಿಸಿ, 5 ಪ್ರತ್ಯೇಕ ಕಮಿಷನರೇಟ್ ಘಟಕಗಳನ್ನಾಗಿ ಮರುಸಂಘಟಿಸಲಾಗುವುದು ಮತ್ತು ಅಪರಾಧ ತಡೆಗಟ್ಟಲು ವಿಶೇಷ ‘ರೌಡಿ ನಿಗ್ರಹ ಪಡೆ’ ರಚಿಸಲಾಗುವುದು ಎಂದು ಘೋಷಿಸಿದರು.
ಉದ್ಯೋಗ ಸೃಷ್ಟಿ: ‘ಮುಖ್ಯಮಂತ್ರಿ ಉದ್ಯೋಗ ಸಂಕಲ್ಪ’
ಯುವಜನತೆಗೆ ಆಸರೆಯಾಗಲು ‘ಮುಖ್ಯಮಂತ್ರಿ ಉದ್ಯೋಗ ಸಂಕಲ್ಪ’ ಯೋಜನೆ ಪ್ರಕಟಿಸಲಾಗಿದ್ದು, ಸರ್ಕಾರಿ ವಲಯದಲ್ಲಿ ಖಾಲಿ ಇರುವ 72,000 ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡಲಾಗುವುದು. ಜೊತೆಗೆ ಮುಂದಿನ ಎರಡು ವರ್ಷಗಳಲ್ಲಿ ಹೆಚ್ಚುವರಿಯಾಗಿ 1 ಲಕ್ಷ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ.
3 ಟ್ರಿಲಿಯನ್ ಡಾಲರ್ ಆರ್ಥಿಕತೆ ಮತ್ತು ಮೇಕೆದಾಟು ಸಂಕಲ್ಪ
“ಭಾರತದ ಆರ್ಥಿಕತೆಗೆ ಕರ್ನಾಟಕವೇ ಬಲವಾದ ಇಂಜಿನ್ ಆಗಿದ್ದು, ರಾಜ್ಯದ ತಲಾದಾಯವು 4.33 ಲಕ್ಷ ರೂ.ಗೆ ತಲುಪುವ ಮೂಲಕ ರಾಷ್ಟ್ರೀಯ ಸರಾಸರಿಗಿಂತ ದುಪ್ಪಟ್ಟಾಗಿದೆ. 2047ರ ವೇಳೆಗೆ ರಾಜ್ಯದ ಆರ್ಥಿಕತೆಯನ್ನು 3 ಟ್ರಿಲಿಯನ್ ಡಾಲರ್ ತಲುಪಿಸುವುದು ನಮ್ಮ ಗುರಿ” ಎಂದರು. ಇದೇ ವೇಳೆ, ರಾಜ್ಯದ ನೀರಿನ ಬವಣೆ ನೀಗಿಸಲು ಮತ್ತು ಅಂತರ್ಜಲ ಹೆಚ್ಚಿಸಲು ಮೇಕೆದಾಟು ಯೋಜನೆ ಪ್ರಾರಂಭಿಸಲು ತಮ್ಮ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಪುನರುಚ್ಚರಿಸಿದರು.
ರೈತರಿಗೆ ಡ್ರೋನ್ ಮತ್ತು ಸ್ಯಾಟಲೈಟ್ ತಂತ್ರಜ್ಞಾನ
ಕೃಷಿ ವಲಯದಲ್ಲಿ ಆಧುನಿಕತೆ ತರಲು ಬೆಳೆ ಸಮೀಕ್ಷೆ (Crop Survey) ಮತ್ತು ರಿಯಲ್ ಟೈಮ್ ಮಾಹಿತಿ ವ್ಯವಸ್ಥೆಗಾಗಿ ಇನ್ಮುಂದೆ ಡ್ರೋನ್‌ಗಳು ಹಾಗೂ ಸ್ಯಾಟಲೈಟ್ (ಉಪಗ್ರಹ) ತಂತ್ರಜ್ಞಾನವನ್ನು ಬಳಸಲಾಗುವುದು ಎಂದು ಸಿಎಂ ತಿಳಿಸಿದರು.
“ಭಾರತ ಎಂಬುದು ಒಂದು ದೊಡ್ಡ ದೇಗುಲವಾದರೆ, ರಾಜ್ಯಗಳು ಅದರ ಬಲಿಷ್ಠ ಕಂಬಗಳು. ಎಲ್ಲಾ ವರ್ಗದ ಜನರನ್ನು ಒಟ್ಟಿಗೆ ಕರೆದೊಯ್ದು ರಾಜ್ಯದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡುವುದು ನನ್ನ ಮೊದಲ ಆದ್ಯತೆ” ಎಂದು ಹೇಳುವ ಮೂಲಕ ಸಿಎಂ ತಮ್ಮ ಭಾಷಣ ಮುಕ್ತಾಯಗೊಳಿಸಿದರು.
Related Articles
Thank you for your comment. It is awaiting moderation.


Comments (0)