ಭಾರತದ ರಾಷ್ಟ್ರೀಯ ಪ್ರಜ್ಞೆ ರೂಪಿಸುವಲ್ಲಿ ರಾಜನಾರಾಯಣ ಬಸು ಪ್ರಮುಖ ಪಾತ್ರ: ದತ್ತಾತ್ರೇಯ ಹೊಸಬಾಳೆ
- by Suddi Loka
- November 5, 2026
- 4 Views
ನವದೆಹಲಿ: 19ನೇ ಶತಮಾನದ ಸಮಾಜ ಸುಧಾರಕ ಹಾಗೂ ರಾಷ್ಟ್ರೀಯತಾವಾದಿ ರಾಜನಾರಾಯಣ ಬಸು ಅವರು ಭಾರತದಲ್ಲಿ ರಾಷ್ಟ್ರೀಯ ಪ್ರಜ್ಞೆಯ ಉದಯಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಆರ್ಎಸ್ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.
ಬಸು ಅವರ 200ನೇ ಜನ್ಮದಿನದ ಅಂಗವಾಗಿ ಗೌರವ ಸಲ್ಲಿಸಿದ ಅವರು, ಬ್ರಿಟಿಷರ ಆಳ್ವಿಕೆಯಿಂದ ಭಾರತೀಯರ ಸಾಂಸ್ಕೃತಿಕ ಬೇರುಗಳು ದುರ್ಬಲಗೊಳ್ಳುತ್ತಿದ್ದ ಸಂದರ್ಭದಲ್ಲಿ ಸುಶಿಕ್ಷಿತ ಸಮಾಜದಲ್ಲಿ ಸಾಂಸ್ಕೃತಿಕ ಹೆಮ್ಮೆ ಮತ್ತು ಆತ್ಮವಿಶ್ವಾಸ ಬೆಳೆಸಲು ಬಸು ಶ್ರಮಿಸಿದ್ದರು ಎಂದು ಸ್ಮರಿಸಿದರು.
1826ರ ಡಿಸೆಂಬರ್ 7ರಂದು ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬೋರಲ್ನಲ್ಲಿ ಜನಿಸಿದ ಬಸು, ಶಿಕ್ಷಣ ಮತ್ತು ಸಮಾಜ ಸುಧಾರಣೆಗೆ ಜೀವನ ಮುಡಿಪಾಗಿಟ್ಟಿದ್ದರು. ಮಹಿಳಾ ಶಿಕ್ಷಣ, ವಿಧವಾ ವಿವಾಹ ಮತ್ತು ಬಡವರ ಕಲ್ಯಾಣಕ್ಕೆ ಆದ್ಯತೆ ನೀಡಿದ್ದ ಅವರು, ಮಾದಕ ವಸ್ತುಗಳ ಬಳಕೆಯ ವಿರುದ್ಧವೂ ಅಭಿಯಾನ ನಡೆಸಿದ್ದರು. ತಮ್ಮ ಸಹೋದರನಿಗೆ ವಿಧವೆಯೊಂದಿಗೆ ವಿವಾಹ ಮಾಡಿಸುವ ಮೂಲಕ ಸಾಮಾಜಿಕ ಸುಧಾರಣೆಗೆ ಮಾದರಿಯಾಗಿದ್ದರು.
ಸುಶಿಕ್ಷಿತ ಭಾರತೀಯರಲ್ಲಿ ರಾಷ್ಟ್ರೀಯ ಹೆಮ್ಮೆ ಬೆಳೆಸುವ ಉದ್ದೇಶದಿಂದ ‘ರಾಷ್ಟ್ರೀಯ ಭಾವನೆಯನ್ನು ಉತ್ತೇಜಿಸುವ ಸಮಾಜದ ಪ್ರಣಾಳಿಕೆ’ಯನ್ನು ಸಿದ್ಧಪಡಿಸಿದ್ದರು. 1867ರಲ್ಲಿ ನಬಗೋಪಾಲ್ ಮಿತ್ರ ಸ್ಥಾಪಿಸಿದ ‘ಹಿಂದೂ ಮೇಳ’ವನ್ನು ಬಲಪಡಿಸುವಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದರು. ಈ ವೇದಿಕೆಯ ಮೂಲಕ ಸ್ವದೇಶಿ ಉತ್ಪನ್ನಗಳ ಬಳಕೆಗೆ ಉತ್ತೇಜನ ನೀಡಲಾಯಿತು ಎಂದು ಹೊಸಬಾಳೆ ತಿಳಿಸಿದರು.

ಮಾತೃಭಾಷೆಯ ಬಳಕೆ, ಆತ್ಮಗೌರವ ಮತ್ತು ರಾಷ್ಟ್ರೀಯ ಗುರುತಿನ ಮಹತ್ವವನ್ನು ಬಸು ಪ್ರತಿಪಾದಿಸಿದ್ದರು. 1873ರಲ್ಲಿ ಪ್ರಕಟವಾದ ‘ದಿ ಸುಪೀರಿಯಾರಿಟಿ ಆಫ್ ಹಿಂದೂಯಿಸಂ’ ಕೃತಿಯಲ್ಲಿ ಹಿಂದೂ ಧರ್ಮದ ತಾತ್ವಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ವಿವರಿಸಿದ್ದರು. 1880ರ ದಶಕದಲ್ಲಿ ಪ್ರಕಟವಾದ ‘ವೃದ್ಧ ಹಿಂದೂರ ಆಶಾ’ ಕಿರುಹೊತ್ತಿಗೆಯಲ್ಲಿಯೂ ತಮ್ಮ ವಿಚಾರಗಳನ್ನು ಮಂಡಿಸಿದ್ದರು.
ಶ್ರೀ ಅರಬಿಂದೋ ಅವರ ತಾಯಿಯ ಕಡೆಯ ಅಜ್ಜರಾಗಿದ್ದ ಬಸು ಅವರ ರಾಷ್ಟ್ರೀಯತಾವಾದಿ ವಿಚಾರಗಳು ಅರಬಿಂದೋ ಅವರ ಮೇಲೂ ಪ್ರಭಾವ ಬೀರಿದ್ದವು. ರವೀಂದ್ರನಾಥ ಟ್ಯಾಗೋರ್, ಸ್ವಾಮಿ ವಿವೇಕಾನಂದ ಮತ್ತು ಸಿಸ್ಟರ್ ನಿವೇದಿತಾ ಸೇರಿದಂತೆ ಹಲವು ಗಣ್ಯರು ಅವರನ್ನು ಗೌರವಿಸುತ್ತಿದ್ದರು ಎಂದು ಹೊಸಬಾಳೆ ಹೇಳಿದರು.
ಸಾಂಸ್ಕೃತಿಕ ಬೇರುಗಳು, ಸ್ವಾಭಿಮಾನ ಮತ್ತು ರಾಷ್ಟ್ರೀಯ ಏಕತೆಗೆ ಬಸು ನೀಡಿದ ಮಹತ್ವ ಇಂದಿಗೂ ಪ್ರಸ್ತುತವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.


Comments (0)