ಚಂಡಮಾರುತ ಪರಿಸ್ಥಿತಿ ನಿಭಾಯಿಸುವಲ್ಲಿ 45,000ಕ್ಕೂ ಹೆಚ್ಚು ಅಧಿಕಾರಿಗಳ ಸಾಥ್; ಚಂದ್ರಬಾಬು ನಾಯ್ಡು ಮೆಚ್ಚುಗೆ

ಅಮರಾವತಿ: ‘ಅರ್ನಾಬ್’ ಮತ್ತು ‘ಮುರಸು’ ಚಂಡಮಾರುತಗಳ ಪರಿಣಾಮವನ್ನು ನಿರ್ವಹಿಸುವಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ಕ್ಷೇತ್ರಮಟ್ಟದ ಸಿಬ್ಬಂದಿ ತೋರಿದ ಶ್ರಮವನ್ನು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಬುಧವಾರ ಶ್ಲಾಘಿಸಿದ್ದಾರೆ. ಮಳೆ ತಗ್ಗುವವರೆಗೂ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

‘ಮುರಸು’ ಚಂಡಮಾರುತದಿಂದ ಬಾಧಿತವಾದ 12 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಕ್ಷೇತ್ರಮಟ್ಟದ ಸಿಬ್ಬಂದಿಯೊಂದಿಗೆ ಮುಖ್ಯಮಂತ್ರಿ ಟೆಲಿ ಕಾನ್ಫರೆನ್ಸ್ ನಡೆಸಿದರು. ಸಭೆಯಲ್ಲಿ 45,000ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

ಕಳೆದ ಒಂದು ವಾರದಿಂದ ಎರಡು ಚಂಡಮಾರುತಗಳ ಪರಿಣಾಮ ಎದುರಿಸಲು ನಿರಂತರವಾಗಿ ಶ್ರಮಿಸಿದ ಸಿಬ್ಬಂದಿಯನ್ನು ನಾಯ್ಡು ಅಭಿನಂದಿಸಿದರು. ವಿಶೇಷವಾಗಿ ವಿದ್ಯುತ್ ಪೂರೈಕೆಯನ್ನು ಪುನಃಸ್ಥಾಪಿಸಲು ಶ್ರಮಿಸಿದ ವಿದ್ಯುತ್ ಇಲಾಖೆಯ ಸಿಬ್ಬಂದಿಯ ಕಾರ್ಯವನ್ನು ಮೆಚ್ಚಿಕೊಂಡರು. ದುರಸ್ತಿ ಕಾರ್ಯದ ಸಂದರ್ಭದಲ್ಲಿ ಅವರು ಎದುರಿಸಿದ ಅಪಾಯಗಳನ್ನೂ ಗುರುತಿಸಿದರು.

ಪರಿಸ್ಥಿತಿಯ ಮೇಲೆ ನಿರಂತರ ನಿಗಾ ಇರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ ಮುಖ್ಯಮಂತ್ರಿ, ಹವಾಮಾನ ಸುಧಾರಿಸುವವರೆಗೂ ಕ್ಷೇತ್ರಮಟ್ಟದ ತಂಡಗಳು ಸನ್ನದ್ಧ ಸ್ಥಿತಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಮಳೆ ಸಂಪೂರ್ಣವಾಗಿ ತಗ್ಗುವವರೆಗೆ ಯಾವುದೇ ನಿರ್ಲಕ್ಷ್ಯಕ್ಕೆ ಅವಕಾಶ ನೀಡದೆ ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

Related Articles

Comments (0)