ಅತ್ಯಾಚಾರ, ಪೋಕ್ಸೋ ಪ್ರಕರಣಗಳ ಫಾಸ್ಟ್‌ಟ್ರ್ಯಾಕ್ ಕೋರ್ಟ್ ಯೋಜನೆ 2031ರವರೆಗೆ ವಿಸ್ತರಣೆ; ಕೇಂದ್ರ ಸಂಪುಟ ಅನುಮೋದನೆ

ನವದೆಹಲಿ: ಅತ್ಯಾಚಾರ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಜಾರಿಯಲ್ಲಿರುವ ಫಾಸ್ಟ್‌ಟ್ರ್ಯಾಕ್ ವಿಶೇಷ ನ್ಯಾಯಾಲಯಗಳ (FTSC) ಯೋಜನೆಯನ್ನು 2031ರವರೆಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

2026ರ ಏಪ್ರಿಲ್ 1ರಿಂದ 2031ರ ಮಾರ್ಚ್ 31ರವರೆಗೆ ಐದು ವರ್ಷಗಳ ಅವಧಿಗೆ ಯೋಜನೆ ಮುಂದುವರಿಯಲಿದ್ದು, ಒಟ್ಟು ₹3,788.04 ಕೋಟಿ ವೆಚ್ಚ ನಿಗದಿಪಡಿಸಲಾಗಿದೆ. ಇದರಲ್ಲಿ ಕೇಂದ್ರ ಸರ್ಕಾರ ನಿರ್ಭಯಾ ನಿಧಿಯಿಂದ ₹2,353.15 ಕೋಟಿ ನೀಡಲಿದ್ದು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ₹1,434.89 ಕೋಟಿ ಭರಿಸಲಿವೆ.

ಬಾಕಿ ಇರುವ ಅತ್ಯಾಚಾರ ಮತ್ತು ಪೋಕ್ಸೋ ಪ್ರಕರಣಗಳ ಸಂಖ್ಯೆಯನ್ನು ಆಧರಿಸಿ, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 779 ನ್ಯಾಯಾಲಯಗಳ ಸಂಖ್ಯೆಯನ್ನು 850ಕ್ಕೆ ಹೆಚ್ಚಿಸಲು ಅವಕಾಶ ಕಲ್ಪಿಸಲಾಗಿದೆ.

ಪ್ರತಿ ನ್ಯಾಯಾಲಯದಲ್ಲಿ ಒಬ್ಬ ನ್ಯಾಯಾಧಿಕಾರಿ, ವಿಶೇಷ ಸರ್ಕಾರಿ ಅಭಿಯೋಜಕರು ಮತ್ತು ಆರು ಮಂದಿ ಸಹಾಯಕ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ನ್ಯಾಯ ಇಲಾಖೆಯು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಹಯೋಗದಲ್ಲಿ ಯೋಜನೆ ಜಾರಿಗೊಳಿಸಲಿದ್ದು, ಡ್ಯಾಶ್‌ಬೋರ್ಡ್, ನಿಯಮಿತ ವರದಿಗಳು ಹಾಗೂ ಹೈಕೋರ್ಟ್‌ಗಳ ಸಮಾಲೋಚನೆಯ ಮೂಲಕ ಮೇಲ್ವಿಚಾರಣೆ ನಡೆಸಲಿದೆ.

ಸಂತ್ರಸ್ತರು ಒತ್ತಡವಿಲ್ಲದೆ ಸಾಕ್ಷ್ಯ ನೀಡಲು ಅನುಕೂಲವಾಗುವಂತೆ ಮಕ್ಕಳ ಸ್ನೇಹಿ ನ್ಯಾಯಾಲಯಗಳು ಮತ್ತು ದುರ್ಬಲ ಸಾಕ್ಷಿಗಳ ಹೇಳಿಕೆ ದಾಖಲಿಸುವ ಕೇಂದ್ರಗಳ ಸ್ಥಾಪನೆಗೂ ಯೋಜನೆಯಲ್ಲಿ ಆದ್ಯತೆ ನೀಡಲಾಗಿದೆ.

2019ರ ಅಕ್ಟೋಬರ್ 2ರಂದು ಆರಂಭವಾದ ಈ ಯೋಜನೆ ಪ್ರಸ್ತುತ 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದುವರೆಗೆ 4,02,457 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.

ಯೋಜನೆಯ ವಿಸ್ತರಣೆಯಿಂದ ಲೈಂಗಿಕ ಅಪರಾಧಗಳ ಪ್ರಕರಣಗಳ ವಿಚಾರಣೆ ವೇಗಗೊಳ್ಳಲಿದ್ದು, ಮಹಿಳೆಯರು ಮತ್ತು ಮಕ್ಕಳಿಗೆ ತ್ವರಿತ ನ್ಯಾಯ ಒದಗಿಸಲು ನೆರವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

Related Articles

Comments (0)