ಕನ್ನಡ ರಾಜ್ಯೋತ್ಸವಕ್ಕೆ ‘hmt ಕನ್ನಡಿಗ’ ಕೈಗಡಿಯಾರ ಲೋಕಾರ್ಪಣೆ

ನವದೆಹಲಿ: ಕನ್ನಡ ರಾಜ್ಯೋತ್ಸವದ ಸುಸಂದರ್ಭದಲ್ಲಿ ಕನ್ನಡಿಗರಿಗೆ ಕೇಂದ್ರ ಸರ್ಕಾರಿ ಸ್ವಾಮ್ಯದ ಹೆಚ್ಎಂಟಿ (HMT) ಕಂಪನಿಯು ವಿಶಿಷ್ಟ ಕಾಣಿಕೆಯೊಂದನ್ನು ನೀಡಿದೆ. ಇತಿಹಾಸ ಪ್ರಸಿದ್ಧ ಹೆಚ್ಎಂಟಿ ಸಂಸ್ಥೆ ಸಿದ್ಧಪಡಿಸಿರುವ ನೂತನ ಸರಣಿಯ ‘hmt ಕನ್ನಡಿಗ’ ಕೈಗಡಿಯಾರಗಳನ್ನು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರವಿವಾರ ನವದೆಹಲಿಯಲ್ಲಿ ನಾಡಿಗೆ ಸಮರ್ಪಿಸಿದರು. ಚೈನ್ ಮತ್ತು ಬೆಲ್ಟ್ (ಸ್ಟ್ರಾಪ್) ನಮೂನೆಯ ಒಟ್ಟು 8 ಹೊಸ ಮಾದರಿಯ ಗಡಿಯಾರಗಳನ್ನು ಅನಾವರಣಗೊಳಿಸಿದ ಸಚಿವರು, ಹೆಚ್ಎಂಟಿ ವೈಭವದ ದಿನಗಳನ್ನು ಸ್ಮರಿಸಿ ತೀವ್ರ ಭಾವೋದ್ವೇಗಕ್ಕೆ ಒಳಗಾದರು.

₹3,500 ದರದಲ್ಲಿ ಲಭ್ಯ: ಇಟಾಲಿಯನ್ ಚರ್ಮದ ಬೆಲ್ಟ್ ವೈಶಿಷ್ಟ್ಯ

ಒಂದು ಕಾಲದಲ್ಲಿ ‘ಭಾರತದ ಸಮಯಪಾಲಕ’ ಎಂದೇ ಖ್ಯಾತಿ ಗಳಿಸಿದ್ದ ಹೆಚ್ಎಂಟಿ ಗಡಿಯಾರಗಳು ಕರ್ನಾಟಕದ ಹೆಮ್ಮೆಯ ಅಸ್ಮಿತೆಯಾಗಿದ್ದವು ಎಂದು ಸ್ಮರಿಸಿದ ಸಚಿವರು, “ಬೆಂಗಳೂರಿನಲ್ಲಿ ತಯಾರಾಗುತ್ತಿದ್ದ ಈ ವಾಚ್‌ಗಳ ವೈಭವವನ್ನು ಮರಳಿ ತರಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ” ಎಂದು ಪ್ರಕಟಿಸಿದರು. ಈ ಹೊಸ ಗಡಿಯಾರಗಳು ಶೀಘ್ರದಲ್ಲೇ ಮಾರುಕಟ್ಟೆ ಹಾಗೂ ಹೆಚ್ಎಂಟಿ ಅಧಿಕೃತ ಮಳಿಗೆಗಳಲ್ಲಿ ಮಾರಾಟಕ್ಕೆ ಲಭ್ಯವಾಗಲಿವೆ. ರೇಡಿಯಂ ಹೊಳಪು ಹಾಗೂ ಅತ್ಯಧುನಿಕ ತಂತ್ರಜ್ಞಾನ ಹೊಂದಿರುವ ಈ ಗಡಿಯಾರಗಳ ಬೆಲೆ ₹3,500 ರಿಂದ ₹3,600 ಇರಲಿದ್ದು, ಬೆಲ್ಟ್ ಗಡಿಯಾರಗಳಿಗೆ ₹450 ಮೌಲ್ಯದ ಇಟಲಿಯ ಅಪ್ಪಟ ಚರ್ಮದ (Leather) ಬೆಲ್ಟ್‌ಗಳನ್ನು ಬಳಸಲಾಗಿದೆ. ಇದು ಎಲ್ಲಾ ವಯೋಮಾನದ ಪುರುಷರು ಹಾಗೂ ಮಹಿಳೆಯರ ಕಣ್ಮನ ಸೆಳೆಯುವಂತಿದೆ ಎಂದರು.

ನಾಲ್ವಡಿ ಒಡೆಯರ್ ಕನಸಿನ ಹೆಚ್ಎಂಟಿ ಪುನಶ್ಚೇತನಕ್ಕೆ ಶ್ರಮ

ಕಾರ್ಯಕ್ರಮಕ್ಕೆ ಆಗಮಿಸಿದ್ದ ರಾಜ್ಯದ ಪ್ರಮುಖ ಕನ್ನಡಪರ ಹೋರಾಟಗಾರರನ್ನು ಸ್ವಾಗತಿಸಿ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ, “ಮೈಸೂರಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಒತ್ತಾಸೆಯಿಂದ 1953 ರಲ್ಲಿ ಬೆಂಗಳೂರಿನಲ್ಲಿ ಹೆಚ್ಎಂಟಿ ಕಾರ್ಖಾನೆ ಸ್ಥಾಪನೆಯಾಯಿತು. ಲಕ್ಷಾಂತರ ಕುಟುಂಬಗಳಿಗೆ ಜೀವನಧಾರವಾಗಿದ್ದ, ಗಡಿಯಾರ ಮಾತ್ರವಲ್ಲದೆ ಟ್ರ್ಯಾಕ್ಟರ್ ಹಾಗೂ ರಕ್ಷಣಾ ಇಲಾಖೆಯ ಯಂತ್ರೋಪಕರಣಗಳನ್ನು ತಯಾರಿಸುತ್ತಿದ್ದ ಈ ಐತಿಹಾಸಿಕ ಸಂಸ್ಥೆಯನ್ನು ಉಳಿಸಿಕೊಳ್ಳಲು ನಾವು ನಿರಂತರವಾಗಿ ಶ್ರಮಿಸುತ್ತಿದ್ದೇವೆ” ಎಂದರು. ಇದಕ್ಕೂ ಮುನ್ನ ಹೆಚ್ಎಂಟಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಮೇಶ್ ಕುಮಾರ್ ಅವರು ನೂತನ ಗಡಿಯಾರಗಳ ತಾಂತ್ರಿಕ ವೈಶಿಷ್ಟ್ಯಗಳ ಮಾಹಿತಿ ನೀಡಿದರು.

ಗಣ್ಯರ ಉಪಸ್ಥಿತಿ – ಅರ್ಜುನ್ ಜನ್ಯ ಸಂಗೀತ ಸುಧೆ:

ಸಮಾರಂಭದಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಡಾ. ಸಿ.ಎನ್. ಮಂಜುನಾಥ್, ಮಾಜಿ ಸಚಿವ ಸಾರಾ ಮಹೇಶ್, ಶಾಸಕರಾದ ಮುನಿರತ್ನ, ಎಂ.ಟಿ. ಕೃಷ್ಣಪ್ಪ, ಟಿ.ಎ. ಶರವಣ, ಎ.ಪಿ. ರಂಗನಾಥ್, ಹೆಚ್.ಎಂ. ರಮೇಶ್ ಗೌಡ ಸೇರಿದಂತೆ ಹಲವು ಪ್ರಮುಖ ಮುಖಂಡರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಪ್ರಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ತಂಡದ ‘ಸಂಗೀತ ಸಂಜೆ’ ಕಾರ್ಯಕ್ರಮವು ಕನ್ನಡದ ಸೂಪರ್ ಹಿಟ್ ಹಾಡುಗಳ ಮೂಲಕ ನೆರೆದಿದ್ದ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿತು.

 

 

Related Articles

Comments (0)

Leave a Comment