ಕನ್ನಡ ರಾಜ್ಯೋತ್ಸವಕ್ಕೆ ಎಚ್ಎಂಟಿ ಹೆಮ್ಮೆಯ ಕೊಡುಗೆ: ನಾಳೆ ಸಂಜೆ ಜಾಲಹಳ್ಳಿಯಲ್ಲಿ ‘HMT ಕನ್ನಡಿಗ’ ವಾಚ್ ಲೋಕಾರ್ಪಣೆ
- by Suddi Team
- October 31, 2026
- 4 Views
ಬೆಂಗಳೂರು: ಕನ್ನಡ ರಾಜ್ಯೋತ್ಸವದ ಸುಸಂದರ್ಭದಲ್ಲಿ ಸಾರ್ವಜನಿಕರ ಬಹುದಿನಗಳ ನಿರೀಕ್ಷೆಯಾಗಿದ್ದ ವಿಶೇಷ ‘HMT ಕನ್ನಡಿಗ’ ಕೈಗಡಿಯಾರಗಳ (ವಾಚ್) ಲೋಕಾರ್ಪಣಾ ಸಮಾರಂಭವು ನಾಳೆ (ಭಾನುವಾರ) ಸಂಜೆ 6:30ಕ್ಕೆ ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಎಚ್ಎಂಟಿ ಆಟದ ಮೈದಾನದಲ್ಲಿ ಅದ್ಧೂರಿಯಾಗಿ ನೆರವೇರಲಿದೆ.
ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಈ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, ಸಮಾರಂಭದ ವಿಶೇಷ ಆಕರ್ಷಣೆಯಾಗಿ ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ತಂಡದವರಿಂದ ಭವ್ಯ ‘ಸಂಗೀತ ಸಂಜೆ’ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಹೋರಾಟಗಾರರಿಗೆ ಕುಮಾರಸ್ವಾಮಿ ಮುಂಚಿತ ಆಹ್ವಾನ:
ಈ ಕಾರ್ಯಕ್ರಮಕ್ಕೆ ನಾಡಿನ ಕನ್ನಡಪರ ಸಂಘಟನೆಗಳನ್ನು ಮುಂಚಿತವಾಗಿ ಆಹ್ವಾನಿಸುವ ಉದ್ದೇಶದಿಂದ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ನವದೆಹಲಿಯ ತಮ್ಮ ಸಚಿವಾಲಯದ ಕಚೇರಿಯಿಂದಲೇ ಆನ್ಲೈನ್ ಮೂಲಕ ಹೋರಾಟಗಾರರ ಮಹತ್ವದ ಸಭೆ ನಡೆಸಿದ್ದರು. ಸುಮಾರು 25ಕ್ಕೂ ಹೆಚ್ಚು ಪ್ರಮುಖ ಕನ್ನಡ ಒಕ್ಕೂಟಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದ ಸಭೆಯಲ್ಲಿ, ಹರಿದು ಹಂಚಿಹೋಗಿರುವ ಎಲ್ಲಾ ಸಂಘಟನೆಗಳು ನಾಡಿನ ಹಿತಕ್ಕಾಗಿ ಒಂದೇ ವೇದಿಕೆಯಡಿ ಬಂದು ಒಂದಾಗಬೇಕು ಎಂದು ಕರೆ ನೀಡಿದ್ದರು.
ಎಚ್ಎಂಟಿಗೆ ಮರು ವೈಭವದ ಸಂಕಲ್ಪ:
ಒಂದು ಕಾಲದಲ್ಲಿ ದೇಶದ ಹೆಮ್ಮೆಯಾಗಿದ್ದ ಎಚ್ಎಂಟಿ ಕಾರ್ಖಾನೆಗೆ ಮರಳಿ ಹಳೆಯ ವೈಭವವನ್ನು ತಂದುಕೊಡುವ ಪ್ರಾಮಾಣಿಕ ಪ್ರಯತ್ನವನ್ನು ತಾವು ಮಾಡುತ್ತಿರುವುದಾಗಿ ತಿಳಿಸಿದ ಸಚಿವರು, ಅದರ ಮೊದಲ ಹೆಜ್ಜೆಯಾಗಿ ಈ ‘HMT ಕನ್ನಡಿಗ’ ವಾಚ್ಗಳನ್ನು ಲೋಕಾರ್ಪಣೆಗೊಳಿಸುತ್ತಿರುವುದಾಗಿ ಹೆಮ್ಮೆಯಿಂದ ಪ್ರಕಟಿಸಿದರು.
ರಾಜ್ಯದ ಸಂಪತ್ತು ದುರುಪಯೋಗವಾಗುತ್ತಿರುವುದನ್ನು ತಡೆಯಲು ಕನ್ನಡ ಹೋರಾಟಗಾರರ ಒಗ್ಗಟ್ಟು ಅಗತ್ಯ ಎಂದ ಸಚಿವರು, “ನಿಮ್ಮ ಎಲ್ಲಾ ನೋವುಗಳಿಗೆ ನಾನು ಸದಾ ಸ್ಪಂದಿಸುತ್ತೇನೆ. ಯಾರೂ ಧೃತಿಗೆಡಬೇಕಾದ ಅಗತ್ಯವಿಲ್ಲ, ನಿಮ್ಮ ಬೆನ್ನಿಗೆ ನಾನಿದ್ದೇನೆ. ಇಂದಿನ ಐತಿಹಾಸಿಕ ಕಾರ್ಯಕ್ರಮದಲ್ಲಿ ತಾವೆಲ್ಲರೂ ಭಾಗಿಯಾಗಿ ಯಶಸ್ವಿಗೊಳಿಸಬೇಕು,” ಎಂದು ವಿನಂತಿಸಿದ್ದರು. ಇಂದು ಸಂಜೆ ನಡೆಯಲಿರುವ ಈ ಭವ್ಯ ಕಾರ್ಯಕ್ರಮಕ್ಕೆ ಮಾಧ್ಯಮ ಮಿತ್ರರು ಹಾಗೂ ಸಾರ್ವಜನಿಕರಿಗೆ ಮುಕ್ತ ಆಹ್ವಾನ ನೀಡಲಾಗಿದೆ.
Related Articles
Thank you for your comment. It is awaiting moderation.


Comments (0)