ಥಣಿಸಂದ್ರದ ಲ್ಯಾಬ್ ಮೇಲೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ದಾಳಿ: ಪರೀಕ್ಷೆ ನಡೆಸದೇ 138 ಕಂಪನಿಗಳಿಗೆ ನಕಲಿ ಪರಿಸರ ವರದಿ ನೀಡುತ್ತಿದ್ದ ದಂಧೆ ಪತ್ತೆ!
- by Suddi Team
- September 12, 2026
- 9 Views
ಬೆಂಗಳೂರು: ಜನರ ಆರೋಗ್ಯ ಮತ್ತು ಪರಿಸರದ ಜೊತೆ ಚೆಲ್ಲಾಟವಾಡುತ್ತಿದ್ದ ಥಣಿಸಂದ್ರದ ‘ಬೆಂಗಳೂರು ಅನಾಲಿಟಿಕಲ್ ರಿಸರ್ಚ್ ಲ್ಯಾಬ್’ ಮೇಲೆ ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ಅವರು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಅಧಿಕಾರಿಗಳೊಂದಿಗೆ ದಿಢೀರ್ ದಾಳಿ ನಡೆಸಿ, ಭಾರಿ ಅಕ್ರಮವನ್ನು ಪತ್ತೆಹಚ್ಚಿದ್ದಾರೆ.
ಸಚಿವರ ನೇತೃತ್ವದಲ್ಲಿ ನಡೆದ ಈ ಹಠಾತ್ ಜಂಟಿ ಕಾರ್ಯಾಚರಣೆಯ ವೇಳೆ ಲ್ಯಾಬ್‌ನಲ್ಲಿ ನಿಯಮಗಳ ಸಂಪೂರ್ಣ ಉಲ್ಲಂಘನೆ ಮತ್ತು ಗಂಭೀರ ಸ್ವರೂಪದ ವಂಚನೆಗಳು ಬೆಳಕಿಗೆ ಬಂದಿವೆ. ತಕ್ಷಣವೇ ಈ ಲ್ಯಾಬ್‌ಗೆ ನೋಟಿಸ್ ಜಾರಿಗೊಳಿಸಿರುವ ಸಚಿವರು, ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.
ಪರಿಶೀಲನೆ ವೇಳೆ ಪತ್ತೆಯಾದ ಪ್ರಮುಖ ಲೋಪಗಳು:
ನಕಲಿ ವರದಿಗಳ ದಂಧೆ: ಲ್ಯಾಬ್‌ನಲ್ಲಿ ಯಾವುದೇ ರೀತಿಯ ವೈಜ್ಞಾನಿಕ ಪರೀಕ್ಷೆಗಳನ್ನೇ ನಡೆಸದೇ ಬರೋಬ್ಬರಿ 138 ಕಂಪನಿಗಳಿಗೆ ನಕಲಿ ಪರಿಸರ ವರದಿಗಳನ್ನು (Environmental Reports) ವಿತರಿಸಿರುವುದು ಪತ್ತೆಯಾಗಿದೆ.
ಅಕ್ರಮ ಕಾರ್ಯಾಚರಣೆ: ಈ ರಿಸರ್ಚ್ ಲ್ಯಾಬ್‌ನ ಅಧಿಕೃತ ಲೈಸೆನ್ಸ್ ಅವಧಿ ಈಗಾಗಲೇ ಮುಕ್ತಾಯಗೊಂಡಿದೆ. ಆದರೂ ಯಾವುದೇ ಪರವಾನಗಿ ನವೀಕರಣ ಮಾಡಿಕೊಳ್ಳದೆ ಕಾನೂನುಬಾಹಿರವಾಗಿ ಕಾರ್ಯಾಚರಣೆ ಮುಂದುವರಿಸಲಾಗಿತ್ತು.
ತಜ್ಞರ ಗೈರುಹಾಜರಿ: ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ (MoEF) ನಿಯಮಾವಳಿಗಳ ಪ್ರಕಾರ ಲ್ಯಾಬ್‌ನಲ್ಲಿ ಇರಬೇಕಾದ ಕಡ್ಡಾಯ ಅರ್ಹತೆ ಹೊಂದಿರುವ ವಿಶ್ಲೇಷಕರು (Analysts) ಸ್ಥಳದಲ್ಲಿ ಇರಲಿಲ್ಲ.
ಪರಿಸರ ಮಾಲಿನ್ಯ: ಲ್ಯಾಬ್‌ನಿಂದ ಹೊರಬರುವ ಅತ್ಯಂತ ಕಲುಷಿತ ಹಾಗೂ ರಾಸಾಯನಿಕಯುಕ್ತ ನೀರನ್ನು ಸಂಸ್ಕರಿಸದೆ ನೇರವಾಗಿ ತೆರೆದ ಗುಂಡಿಗೆ ಹರಿಸಲಾಗುತ್ತಿತ್ತು.
50ಕ್ಕೂ ಹೆಚ್ಚು ಲ್ಯಾಬ್‌ಗಳ ಮೇಲೆ ನಿಗಾ:
ದಾಳಿಯ ಬಳಿಕ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, “ಸಾರ್ವಜನಿಕರ ಜೀವ ಹಾಗೂ ಪರಿಸರದ ಜೊತೆ ಚೆಲ್ಲಾಟವಾಡುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಬೆಂಗಳೂರಿನಲ್ಲಿ ಇಂತಹ ಸಂಶಯಾಸ್ಪದ ಚಟುವಟಿಕೆ ನಡೆಸುತ್ತಿರುವ 50ಕ್ಕೂ ಹೆಚ್ಚು ಲ್ಯಾಬ್‌ಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಅವುಗಳ ಮೇಲೆ ಕಠಿಣ ನಿಗಾ ವಹಿಸಿ, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ” ಎಂದು ಎಚ್ಚರಿಕೆ ನೀಡಿದ್ದಾರೆ.
Related Articles
Thank you for your comment. It is awaiting moderation.


Comments (0)