ಮಾಲ್ಗುಡಿ ದಿನಗಳ ನೆನಪು ಮರುಕಳಿಸಿತು: 40 ವರ್ಷಗಳ ಬಳಿಕ ಆಗುಂಬೆಗೆ ಮರಳಿದ ‘ಸ್ವಾಮಿ’ ಖ್ಯಾತಿಯ ಮಾಸ್ಟರ್ ಮಂಜುನಾಥ್!

ವಿಶೇಷ ವರದಿ

ಬೆಂಗಳೂರು/ಆಗುಂಬೆ: ಕನ್ನಡ ದೃಶ್ಯಕಾವ್ಯದ ಇತಿಹಾಸದಲ್ಲೇ ಮರೆಯಲಾಗದ ‘ಮಾಲ್ಗುಡಿ ಡೇಸ್’ (Malgudi Days) ಸರಣಿಯ ನೆನಪುಗಳು ಮತ್ತೆ ಮರುಕಳಿಸಿವೆ. ಮಾಲ್ಗುಡಿಯ ಮುಗ್ಧ ಬಾಲಕ ‘ಸ್ವಾಮಿ’ ಪಾತ್ರದ ಮೂಲಕ ಇಡೀ ದೇಶದ ಜನರ ಹೃದಯ ಗೆದ್ದಿದ್ದ ಮಾಸ್ಟರ್ ಮಂಜುನಾಥ್ (Manjunath Nayaker) ಅವರು, ಬರೋಬ್ಬರಿ 40 ವರ್ಷಗಳ ನಂತರ ತಮ್ಮ ಇಬ್ಬರು ಆಪ್ತ ಸ್ನೇಹಿತರೊಂದಿಗೆ ಸರಣಿಯ ಚಿತ್ರೀಕರಣ ನಡೆದಿದ್ದ ಪುಣ್ಯಭೂಮಿ ಆಗುಂಬೆಗೆ ಮರಳಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿರುವ ಅವರು, ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದ್ದಾರೆ.

ಮತ್ತೆ ಬರುತ್ತಿದೆ ಮಾಲ್ಗುಡಿಯ ಕಥೆ!

“40 ವರ್ಷಗಳು. ಮೂವರು ಸ್ನೇಹಿತರು. ಒಂದು ಮರೆಯಲಾಗದ ಪೌರಾಣಿಕ ಸ್ಥಳ. ನಾವು ಮತ್ತೆ ಆಗುಂಬೆಗೆ ಮರಳಿದ್ದೇವೆ. ಹಳೆಯ ನೆನಪುಗಳ ನಡುವೆ ನಡೆದಾಡಿದೆವು, ಒಮ್ಮೆ ನಮ್ಮ ಬದುಕಿನ ಭಾಗವಾಗಿದ್ದ ಸ್ಥಳಗಳನ್ನು ಮತ್ತೊಮ್ಮೆ ಕಣ್ಣುಂಬಿಕೊಂಡೆವು. ಕೆಲವು ನೆನಪುಗಳು ಎಂದಿಗೂ ನಮ್ಮನ್ನು ಬಿಟ್ಟು ಹೋಗುವುದಿಲ್ಲ ಎಂಬುದನ್ನು ಮತ್ತೊಮ್ಮೆ ಅರಿತುಕೊಂಡೆವು” ಎಂದು ಮಾಸ್ಟರ್ ಮಂಜುನಾಥ್ ಬರೆದುಕೊಂಡಿದ್ದಾರೆ. ಇದರೊಂದಿಗೆ, “ಮಾಲ್ಗುಡಿಯಿಂದ ಮತ್ತೊಂದು ಕಥೆ ಮತ್ತೆ ಬರುತ್ತಿದೆ. ಈ ಬಾರಿ ಈ ಪಯಣದಲ್ಲಿ ನೀವೂ ನಮ್ಮೊಂದಿಗೆ ಇರಬೇಕೆಂದು ಬಯಸುತ್ತೇವೆ. ಅಧಿಕೃತ ಘೋಷಣೆ ಶೀಘ್ರದಲ್ಲೇ ಹೊರಬೀಳಲಿದೆ” ಎಂದು ಹೇಳುವ ಮೂಲಕ ಹೊಸ ಪ್ರಾಜೆಕ್ಟ್‌ನ ಮುನ್ಸೂಚನೆ ನೀಡಿದ್ದಾರೆ.

ಶಂಕರ್ ನಾಗ್ ನೆನೆದ ಅಭಿಮಾನಿಗಳು

ದಿಗ್ಗಜ ನಟ, ನಿರ್ದೇಶಕ ಶಂಕರ್ ನಾಗ್ (Shankar Nag) ಅವರ ಅದ್ಭುತ ನಿರ್ದೇಶನದಲ್ಲಿ ಮೂಡಿಬಂದಿದ್ದ ‘ಮಾಲ್ಗುಡಿ ಡೇಸ್’ ಧಾರಾವಾಹಿಗೆ ಶಿವಮೊಗ್ಗ-ಉಡುಪಿ ಗಡಿಯ ಮಲೆನಾಡಿನ ಸುಂದರ ತಾಣ ‘ಆಗುಂಬೆ’ಯೇ ಮಾಲ್ಗುಡಿ ಹಳ್ಳಿಯಾಗಿ ಮಾರ್ಪಟ್ಟಿತ್ತು. ಸದ್ಯ ಮಾಸ್ಟರ್ ಮಂಜುನಾಥ್ ಅವರು ಹಂಚಿಕೊಂಡಿರುವ ಈ ಪೋಸ್ಟ್ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಶಂಕರ್ ನಾಗ್ ಅವರ ಅಭಿಮಾನಿಗಳು ಹಾಗೂ 90ರ ದಶಕದ ಪ್ರೇಕ್ಷಕರಲ್ಲಿ ಹಳೆಯ ಸುವರ್ಣ ದಿನಗಳ ರೋಮಾಂಚನವನ್ನು ಉಂಟುಮಾಡಿದೆ. ಸ್ವಾಮಿ ಮತ್ತು ಆತನ ಗೆಳೆಯರ ಗ್ಯಾಂಗ್ ಮತ್ತೊಮ್ಮೆ ತೆರೆಮೇಲೆ ಯಾವ ರೂಪದಲ್ಲಿ ಬರಲಿದೆ ಎಂಬ ನಿರೀಕ್ಷೆ ಈಗ ಎಲ್ಲೆಡೆ ಮನೆಮಾಡಿದೆ.

 

 

Related Articles

Comments (0)

Leave a Comment