ಸಾವಳಗಸಂಗದಲ್ಲಿ ‘ಶ್ರೀ ಸಿದ್ದೇಶ್ವರ ಸ್ವಾಮೀಜಿ ವೃಕ್ಷೋದ್ಯಾನ’ ಲೋಕಾರ್ಪಣೆ ಮಾಡಿದ ಅರಣ್ಯ ಸಚಿವ ರಾಮಲಿಂಗಾರೆಡ್ಡಿ
- by Suddi Team
- August 31, 2026
- 10 Views
ಇಂಡಿ: “ಸಾವಳಗಸಂಗ ಪ್ರದೇಶವನ್ನು ಈ ಭಾಗದ ಪ್ರಮುಖ ಪ್ರವಾಸಿ ತಾಣವನ್ನಾಗಿ ಹಾಗೂ ಇಂಡಿ ತಾಲ್ಲೂಕನ್ನು ಪ್ರವಾಸಿಗರ ಆಕರ್ಷಣೆಯ ‘ಮಡಿಕೇರಿ’ಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯಿಂದ ವಿಶೇಷ ಅನುದಾನ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು” ಎಂದು ರಾಜ್ಯದ ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಭರವಸೆ ನೀಡಿದರು.
ತಾಲ್ಲೂಕಿನ ಸಾವಳಗಸಂಗದಲ್ಲಿ ನೂತನವಾಗಿ ಸಿದ್ಧಗೊಂಡಿರುವ ‘ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ವೃಕ್ಷೋದ್ಯಾನ’ವನ್ನು ಸಚಿವ ರಾಮಲಿಂಗಾರೆಡ್ಡಿ ಸಾರ್ವಜನಿಕ ಲೋಕಾರ್ಪಣೆಗೊಳಿಸಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಶ್ರೀ ಬಸಲಿಂಗ ಸ್ವಾಮೀಜಿ ಹಾಗೂ ತಾಳಿಕೋಟಿಯ ಪರಮಪೂಜ್ಯ ಶ್ರೀ ಸಿದ್ದಲಿಂಗ ದೇವರು ವಹಿಸಿದ್ದರು.
ಬರಡು ಗುಡ್ಡದಲ್ಲಿ ಅರಳಿದ ನಂದನವನ:
ಈ ವೇಳೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, “ಪ್ರಕೃತಿಯಲ್ಲಿಯೇ ದೇವರನ್ನು ಕಾಣಬೇಕು” ಎಂಬ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ದಿವ್ಯ ನುಡಿಯು ಇಂದಿನ ಕಾಲಘಟ್ಟಕ್ಕೆ ಅತ್ಯಂತ ಪ್ರಸ್ತುತವಾಗಿದೆ. ಮರ-ಗಿಡಗಳನ್ನು ಬೆಳೆಸುವುದು ಎಂದರೆ ಕೇವಲ ಪರಿಸರ ಸಂರಕ್ಷಣೆಯಲ್ಲ, ಅದು ಮುಂದಿನ ಪೀಳಿಗೆಯ ಬದುಕನ್ನು ಸುರಕ್ಷಿತಗೊಳಿಸುವ ಕಾರ್ಯ. ಸಿದ್ದೇಶ್ವರ ಸ್ವಾಮೀಜಿಯವರ ಆಶಯದಂತೆ ಸಾವಳಗಸಂಗದ ಬರಡು ಗುಡ್ಡವನ್ನು ಹಸಿರು ಪ್ರದೇಶವನ್ನಾಗಿ ಮಾರ್ಪಡಿಸಲು ಶಾಸಕ ಶ್ರೀ ಯಶವಂತರಾಯಗೌಡ ಪಾಟೀಲರು ಕೈಗೊಂಡಿರುವ ದೃಢ ಸಂಕಲ್ಪ ಮತ್ತು ಶ್ರಮ ನಿಜಕ್ಕೂ ಶ್ಲಾಘನೀಯ ಎಂದು ಸಚಿವರು ಬಣ್ಣಿಸಿದರು.
“ಸಂತರು ಆಡಿದ ಮಾತು ವ್ಯರ್ಥವಾಗಬಾರದು. ಈ ಬರಡು ಗುಡ್ಡಕ್ಕೆ ನೀರು ಬಂದರೆ, ಒಂದು ದಿನ ಇಲ್ಲಿ ಹಸಿರು ಲೋಕ ನಿರ್ಮಾಣವಾಗಬೇಕು” ಎಂಬ ಶ್ರೀಗಳ ಮಾತನ್ನು ಶಾಸಕರು ಸಾಕಾರಗೊಳಿಸಿದ್ದಾರೆ. ಶ್ರೀ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯ ಮೂಲಕ ಆಲಮಟ್ಟಿ-ಕೃಷ್ಣಾ ನದಿಯಿಂದ ಪೈಪ್ಲೈನ್ ಮೂಲಕ ನೀರು ಹರಿಸಿದ್ದರಿಂದಲೇ ಇಂದು ಅರಣ್ಯ ಇಲಾಖೆಯ ಸಹಕಾರದೊಂದಿಗೆ ಇಲ್ಲಿನ 100 ಹೆಕ್ಟೇರ್ ವಿಸ್ತೀರ್ಣದ ಪ್ರದೇಶದಲ್ಲಿ ಸುಮಾರು 33,500 ಸಸಿಗಳನ್ನು ನೆಟ್ಟು ಬೆಳೆಸಲು ಸಾಧ್ಯವಾಗಿದೆ. ವಿಜಯಪುರದಂತಹ ಕಡಿಮೆ ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆಗೆ ಇಂತಹ ಹಸಿರೀಕರಣದ ಯೋಜನೆಗಳು ಅತ್ಯಂತ ಅಗತ್ಯ ಎಂದರು.
ಕೇವಲ ವೃಕ್ಷೋದ್ಯಾನವಲ್ಲ, ಸರ್ವರಿಗೂ ಸುಂದರ ತಾಣ:
ಲೋಕಾರ್ಪಣೆಗೊಂಡಿರುವ ಈ ವೃಕ್ಷೋದ್ಯಾನದ ವಿಶೇಷತೆಗಳನ್ನು ಶ್ಲಾಘಿಸಿದ ಸಚಿವರು, “ಇದು ಕೇವಲ ಗಿಡ-ಮರಗಳ ತಾಣವಲ್ಲ. ಇಲ್ಲಿ ಮಕ್ಕಳಿಗೆ ಆಟದ ಮೈದಾನ, ವಿದ್ಯಾರ್ಥಿಗಳಿಗೆ ವಿಜ್ಞಾನ ವನ ಮತ್ತು ಸೈನ್ಸ್ ಪಾರ್ಕ್, ಯುವಕರಿಗಾಗಿ ಜಿಪ್ ಲೈನ್ (Zip Line) ಸಾಹಸ ಕ್ರೀಡೆ, ವೀಕ್ಷಣಾ ಗೋಪುರ (Watch Tower) ಹಾಗೂ ವಿಶ್ರಾಂತಿ ಸ್ಥಳಗಳು ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಹೀಗಾಗಿ ಇದು ಮಕ್ಕಳಿಗೆ ಆಟದ ತಾಣ, ವಿದ್ಯಾರ್ಥಿಗಳಿಗೆ ಕಲಿಕೆಯ ತಾಣ, ಯುವಕರಿಗೆ ಸಾಹಸದ ತಾಣ ಹಾಗೂ ಎಲ್ಲರಿಗೂ ಪ್ರಕೃತಿಯೊಂದಿಗೆ ಬೆರೆಯುವ ಸುಂದರ ತಾಣವಾಗಿ ಮೂಡಿಬಂದಿದೆ” ಎಂದು ಬಣ್ಣಿಸಿದರು. ಸಜ್ಜನರ ಕೈಗೆ ಅಧಿಕಾರ ಸಿಕ್ಕರೆ ಸಮಾಜಕ್ಕೆ ಹೇಗೆ ಒಳಿತಾಗುತ್ತದೆ ಎಂಬುದಕ್ಕೆ ಶಾಸಕರ ಈ ಜನಪರ ಕಾರ್ಯಗಳೇ ಸಾಕ್ಷಿ ಎಂದು ಸಚಿವರು ಶ್ಲಾಘಿಸಿದರು.
ರೈತರಿಗೆ ರಿಯಾಯಿತಿ ದರದಲ್ಲಿ ಸಸಿ ವಿತರಣೆ:
ಅರಣ್ಯ ಇಲಾಖೆಯಿಂದ ರೈತರಿಗೆ ರಿಯಾಯಿತಿ ದರದಲ್ಲಿ ವಿಭಿನ್ನ ಜಾತಿಯ ಸಸಿಗಳನ್ನು ವಿತರಿಸಲಾಗುತ್ತಿದೆ. ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಂಡು ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಹಸಿರಾಗಿಸಬೇಕು ಎಂದು ಕರೆ ನೀಡಿದ ಸಚಿವರು, ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಹೆಸರಿನಲ್ಲಿ ನಿರ್ಮಾಣಗೊಂಡಿರುವ ಈ ವೃಕ್ಷೋದ್ಯಾನವು ಅವರ ಪರಿಸರ ಪ್ರೀತಿಯ ಶಾಶ್ವತ ಸ್ಮಾರಕವಾಗಿ ಬೆಳೆಯಲಿ ಹಾಗೂ ವಿಜಯಪುರ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿ ಅಭಿವೃದ್ಧಿಯಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ, ಸ್ಥಳೀಯ ಜನಪ್ರತಿನಿಧಿಗಳು, ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಉಪಸ್ಥಿತರಿದ್ದರು.
Related Articles
Thank you for your comment. It is awaiting moderation.


Comments (0)