ಕೆಎಸ್ಆರ್ಟಿಸಿ ಮತ್ತು ಬಿಎಂಆರ್ಸಿ ನೌಕರರ ಅವಲಂಬಿತರಿಗೆ ಕೋಟಿ ರೂ. ವಿಮಾ ಪರಿಹಾರ ಚೆಕ್ ವಿತರಣೆ
- by Suddi Team
- August 14, 2026
- 27 Views
ಬೆಂಗಳೂರು: ಸೇವೆಯಲ್ಲಿದ್ದಾಗ ಅಪಘಾತ ಹಾಗೂ ಸಹಜ ಮರಣ ಹೊಂದಿದ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳ ಕುಟುಂಬಗಳಿಗೆ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಜಂಟಿಯಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಒಟ್ಟು 65 ಸಿಬ್ಬಂದಿಗಳ ಅವಲಂಬಿತರಿಗೆ ಗುಂಪು ವಿಮಾ ಪರಿಹಾರ ಹಾಗೂ ಕಾರ್ಪೊರೇಟ್ ಸ್ಯಾಲರಿ ಪ್ಯಾಕೇಜ್ ವಿಮಾ ಚೆಕ್ಗಳನ್ನು ವಿತರಿಸಲಾಯಿತು.
ಸಾರಿಗೆ ಸಚಿವರು, ಬಿಎಂಟಿಸಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಸಮ್ಮುಖದಲ್ಲಿ ಈ ಪರಿಹಾರದ ಚೆಕ್ಗಳನ್ನು ಹಸ್ತಾಂತರಿಸಲಾಯಿತು.
ಈ ವೇಳೆ ಮಾತನಾಡಿದ ಸಾರಿಗೆ ಸಚಿವ ಬೈರತಿ ಸುರೇಶ್, “ಮೃತಪಟ್ಟ ಸಿಬ್ಬಂದಿಗಳನ್ನು ಮರಳಿ ತರಲು ಸಾಧ್ಯವಿಲ್ಲ. ಆದರೆ ಅವರ ಕುಟುಂಬದವರು ಈ ಪರಿಹಾರದ ಹಣವನ್ನು ಬ್ಯಾಂಕಿನಲ್ಲಿ ಸುರಕ್ಷಿತವಾಗಿಟ್ಟುಕೊಂಡು, ಮಕ್ಕಳ ವಿದ್ಯಾಭ್ಯಾಸ ಹಾಗೂ ಮುಂದಿನ ಜೀವನಕ್ಕೆ ಆಸರೆಯಾಗಿ ಬಳಸಿಕೊಳ್ಳಬೇಕು” ಎಂದು ಕರೆ ನೀಡಿದರು. ಅಲ್ಲದೆ, ಅನುಕಂಪದ ಆಧಾರದ ನೌಕರಿಗಾಗಿ ಅರ್ಜಿ ಸಲ್ಲಿಸಲು ತಿಳಿಸಿ, ನಿಗಮವು ಸದಾ ನೌಕರರ ಕುಟುಂಬದವರ ಹಿತರಕ್ಷಣೆಗೆ ಬದ್ಧವಾಗಿದೆ ಎಂದರು.
ವಿವಿಧ ವಿಮಾ ಯೋಜನೆಗಳ ವಿವರ ಹಾಗೂ ವಿತರಣೆ:
₹1.00 ಕೋಟಿ ವೈಯಕ್ತಿಕ ಅಪಘಾತ ವಿಮಾ ಯೋಜನೆ: ಕರ್ತವ್ಯದಲ್ಲಿರಲಿ ಅಥವಾ ಇಲ್ಲದಿರಲಿ, ಅಪಘಾತದಿಂದ ಮೃತಪಡುವ ಸಿಬ್ಬಂದಿಯ ಕುಟುಂಬಕ್ಕೆ ₹1 ಕೋಟಿ ಒದಗಿಸುವ ಯೋಜನೆಯಡಿ, ಈ ದಿನ 6 ಪ್ರಕರಣಗಳಲ್ಲಿ ಮೃತರ ಅವಲಂಬಿತರಿಗೆ ತಲಾ ₹1 ಕೋಟಿಯಂತೆ ಒಟ್ಟು ₹6.00 ಕೋಟಿ ವಿತರಿಸಲಾಯಿತು. (ಇದುವರೆಗೆ ಒಟ್ಟು 34 ಪ್ರಕರಣಗಳಲ್ಲಿ ₹34.00 ಕೋಟಿ ನೀಡಲಾಗಿದೆ). ಕರ್ತವ್ಯ ನಿರತ ಅಪಘಾತದಲ್ಲಿ ಅಂಗವಿಕಲತೆಗೊಂಡ 1 ಪ್ರಕರಣಕ್ಕೆ ₹25.00 ಲಕ್ಷ ಪರಿಹಾರ ನೀಡಲಾಯಿತು.
ಬಿಎಂಟಿಸಿ ಗುಂಪು ವಿಮಾ ಯೋಜನೆ: ನವೀಕೃತ ಯೋಜನೆಯಡಿ ಇಂದು ಸಹಜ ಹಾಗೂ ಇನ್ನಿತರೆ ಕಾರಣಗಳಿಂದ ಮೃತಪಟ್ಟ 17 ಬಿಎಂಟಿಸಿ ನೌಕರರ ನಾಮನಿರ್ದೇಶಿತರಿಗೆ ತಲಾ ₹12.00 ಲಕ್ಷದಂತೆ ಒಟ್ಟು ₹2.40 ಕೋಟಿ ಪರಿಹಾರ ಚೆಕ್ ವಿತರಿಸಲಾಯಿತು. (ಈ ಯೋಜನೆಯಡಿ ಇದುವರೆಗೆ ಒಟ್ಟು 171 ನೌಕರರ ಕುಟುಂಬಗಳಿಗೆ ₹17.88 ಕೋಟಿ ಹಾಗೂ ಅಪಘಾತದಿಂದ ಮೃತಪಟ್ಟ 12 ನೌಕರರ ಕುಟುಂಬಗಳಿಗೆ ತಲಾ ₹50.00 ಲಕ್ಷದಂತೆ ₹6.00 ಕೋಟಿ ವಿತರಿಸಲಾಗಿದೆ).
ನೌಕರರ ಕುಟುಂಬ ಕಲ್ಯಾಣ ಯೋಜನೆ: ಹೃದಯಾಘಾತ, ಕ್ಯಾನ್ಸರ್, ಸ್ಟ್ರೋಕ್ ಮುಂತಾದ ಕಾಯಿಲೆಗಳಿಂದ ಮರಣ ಹೊಂದುವ ನೌಕರರ ಕುಟುಂಬಕ್ಕೆ ನೀಡಲಾಗುವ ಪರಿಹಾರವನ್ನು ₹10 ಲಕ್ಷದಿಂದ ₹14 ಲಕ್ಷಕ್ಕೆ ಹೆಚ್ಚಿಸಿ ಪರಿಷ್ಕರಿಸಲಾಗಿದೆ. ಇಂದಿನ ಕಾರ್ಯಕ್ರಮದಲ್ಲಿ 37 ಪ್ರಕರಣಗಳ ಮೃತರ ಅವಲಂಬಿತರಿಗೆ ತಲಾ ₹14.00 ಲಕ್ಷದಂತೆ ಒಟ್ಟು ₹5.18 ಕೋಟಿ ಹಾಗೂ 5 ಪ್ರಕರಣಗಳ ಅವಲಂಬಿತರಿಗೆ ತಲಾ ₹10.00 ಲಕ್ಷದಂತೆ ಒಟ್ಟು ₹50.00 ಲಕ್ಷ ವಿತರಿಸಲಾಯಿತು.
ಈ ಉನ್ನತ ಮಟ್ಟದ ವಿತರಣಾ ಕಾರ್ಯಕ್ರಮದಲ್ಲಿ ಬಿಎಂಟಿಸಿ ಅಧ್ಯಕ್ಷ ಎ.ಎಸ್. ಆರಾಧ್ಯ, ಉಪಾಧ್ಯಕ್ಷ ನಿಕೇತ್ ರಾಜ್ ಎಂ., ಸಾರಿಗೆ ಇಲಾಖೆಯ ಕಾರ್ಯದರ್ಶಿ ದೀಪಾ ಚೋಳನ್ (IAS), ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ್ ಕೆ.ಬಿ. (IAS), ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಘುನಂದನ್ ಮೂರ್ತಿ (IAS), ಬಿಎಂಟಿಸಿ ನಿರ್ದೇಶಕ ಅಬ್ದುಲ್ ಅಹದ್ (IPS) ಮತ್ತು ಕೆಎಸ್ಆರ್ಟಿಸಿ ನಿರ್ದೇಶಕರಾದ ಗಾಯಿತ್ರಿ ಕೆ.ಎಂ. (IAS) ಸೇರಿದಂತೆ ಎರಡೂ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Related Articles
Thank you for your comment. It is awaiting moderation.


Comments (0)