ಯಾದಗಿರಿ: ಕಡೇಚೂರು ಕೈಗಾರಿಕಾ ತ್ಯಾಜ್ಯ ಭೀಮಾ ನದಿಗೆ ಸೇರ್ಪಡೆ; ಕಟ್ಟುನಿಟ್ಟಿನ ಕ್ರಮಕ್ಕೆ ಸಚಿವ ರಾಮಲಿಂಗಾರೆಡ್ಡಿ ಆದೇಶ
- by Suddi Team
- September 28, 2026
- 284 Views
ಯಾದಗಿರಿ: ಜಿಲ್ಲೆಯ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವ ರಾಸಾಯನಿಕ ಕಾರ್ಖಾನೆಗಳಿಂದ ಸಂಸ್ಕರಿಸದ ಕಲುಷಿತ ತ್ಯಾಜ್ಯ ನೀರನ್ನು ನದಿಗೆ ಬಿಡುತ್ತಿರುವ ಘಟನೆಯನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಕಲುಷಿತ ನೀರು ನೇರವಾಗಿ ಭೀಮಾ ನದಿಯನ್ನು ಸೇರುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ಬೆನ್ನಲ್ಲೇ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ಅವರು ತಕ್ಷಣವೇ ಕಠಿಣ ಕ್ರಮ ಕೈಗೊಳ್ಳುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
ಅಧಿಕಾರಿ ತಕ್ಷಣ ಅಮಾನತು:
ಕೈಗಾರಿಕೆಗಳ ಈ ಬೇಜಾಬ್ದಾರಿ ತನಕ್ಕೆ ಮತ್ತು ಕರ್ತವ್ಯ ಲೋಪಕ್ಕೆ ಕಾರಣರಾದ ಸಂಬಂಧಪಟ್ಟ ಅಧಿಕಾರಿಯನ್ನು ಈ ಕೂಡಲೇ ಸೇವೆಯಿಂದ ಅಮಾನತುಗೊಳಿಸಿ, ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಚಿವರು ಸೂಚಿಸಿದ್ದಾರೆ.
ಸ್ಥಳ ಪರಿಶೀಲನೆ ಹಾಗೂ ಮಾದರಿ ಸಂಗ್ರಹಕ್ಕೆ ಸೂಚನೆ:
ಕೈಗಾರಿಕೆಗಳಿಂದ ಹೊರಬರುವ ವಿಷಕಾರಿ ತ್ಯಾಜ್ಯವನ್ನು ಸೂಕ್ತವಾಗಿ ಸಂಸ್ಕರಿಸದೇ ಜಲಮೂಲಗಳಿಗೆ ಹರಿಸುವುದರಿಂದ ಜನ-ಜಾನುವಾರುಗಳ ಆರೋಗ್ಯ, ಕೃಷಿ ಭೂಮಿ ಹಾಗೂ ಒಟ್ಟಾರೆ ಪರಿಸರದ ಮೇಲೆ ತೀವ್ರ ಸ್ವರೂಪದ ದುಷ್ಪರಿಣಾಮ ಬೀರುತ್ತಿದೆ. ಜಲಮಾಲಿನ್ಯ ತಡೆಯುವುದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (KSPCB) ಪ್ರಮುಖ ಹೊಣೆಯಾಗಿದೆ.
ಹೀಗಾಗಿ, ಮಂಡಳಿಯ ಸದಸ್ಯ ಕಾರ್ಯದರ್ಶಿ ಆರ್. ಗೋಕುಲ್ (ಐಎಫ್ಎಸ್) ಅವರಿಗೆ ತುರ್ತು ನಿರ್ದೇಶನ ನೀಡಿರುವ ಸಚಿವರು, ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶಕ್ಕೆ ತಕ್ಷಣವೇ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸುವಂತೆ ತಿಳಿಸಿದ್ದಾರೆ. ಅಲ್ಲದೆ, ನದಿಗೆ ಹರಿಯ ಬಿಡಲಾಗುತ್ತಿರುವ ನೀರಿನ ಮಾದರಿಗಳನ್ನು ಸಂಗ್ರಹಿಸಿ, ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿ, ನಿಯಮ ಉಲ್ಲಂಘಿಸಿರುವ ಕಾರ್ಖಾನೆಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಾನೂನುಬದ್ಧ ಹಾಗೂ ಕಠಿಣ ಕ್ರಮ ಜರುಗಿಸಲು ಆದೇಶಿಸಿದ್ದಾರೆ.
ಮುಂದಿನ ದಿನಗಳಲ್ಲಿ ಇಂತಹ ಗಂಭೀರ ಪರಿಸರ ಮಾಲಿನ್ಯದ ಘಟನೆಗಳು ರಾಜ್ಯದ ಯಾವುದೇ ಭಾಗದಲ್ಲೂ ಮರುಕಳಿಸದಂತೆ ಮಾಲಿನ್ಯ ನಿಯಂತ್ರಣ ಮಂಡಳಿಯ ವತಿಯಿಂದ ಕಟ್ಟುನಿಟ್ಟಿನ ನಿಗಾ ವಹಿಸಬೇಕು ಎಂದು ಸಚಿವರು ಸೂಚಿಸಿದ್ದಾರೆ.
Related Articles
Thank you for your comment. It is awaiting moderation.


Comments (0)