ಆರ್‌ಎಸ್‌ಎಸ್‌ಗೆ ಪರೋಕ್ಷ ಬ್ರೇಕ್? ಸಾರ್ವಜನಿಕ ಆಸ್ತಿ ನಿಯಂತ್ರಣ ವಿಧೇಯಕದ ಹಿಂದೆ ಅಡಗಿದೆಯಾ ‘ಕೈ’ ರಾಜಕೀಯ ತಂತ್ರ!
- by Suddi Team
- August 13, 2026
- 5 Views
ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟವು ಒಪ್ಪಿಗೆ ನೀಡಿರುವ ‘ಕರ್ನಾಟಕ ಸರ್ಕಾರಿ ಆವರಣ ಮತ್ತು ಸಾರ್ವಜನಿಕ ಆಸ್ತಿ ಬಳಕೆ ನಿಯಂತ್ರಣ ವಿಧೇಯಕ, 2026’ ಈಗ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಮೇಲ್ನೋಟಕ್ಕೆ ಇದು ಸಾರ್ವಜನಿಕ ಆಸ್ತಿ ಸಂರಕ್ಷಣೆಯ ಕಾನೂನು ಎಂದು ಸರ್ಕಾರ ಹೇಳುತ್ತಿದೆಯಾದರೂ, ಇದರ ಅಸಲಿ ಗುರಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಎಂಬ ಚರ್ಚೆ ರಾಜಕೀಯ ವಲಯದಲ್ಲಿ ದಟ್ಟವಾಗಿದೆ.
ಆರ್‌ಎಸ್‌ಎಸ್ ‘ಶಾಖಾ’ ಚಟುವಟಿಕೆಗಳಿಗೆ ಹೊಸ ಕಾನೂನಿನ ಬೇಲಿ?
ರಾಜ್ಯಾದ್ಯಂತ ಸರ್ಕಾರಿ ಶಾಲೆಗಳು, ಆಟದ ಮೈದಾನಗಳು ಹಾಗೂ ಸಾರ್ವಜನಿಕ ಉದ್ಯಾನವನಗಳಲ್ಲಿ ದಶಕಗಳಿಂದ ನಡೆಯುತ್ತಿರುವ ಆರ್‌ಎಸ್‌ಎಸ್ ಶಾಖೆಗಳು ಮತ್ತು ಪಥಸಂಚಲನಗಳಿಗೆ ಬ್ರೇಕ್ ಹಾಕಲು ಡಿ.ಕೆ. ಶಿವಕುಮಾರ್ ಸರ್ಕಾರ ಈ ತಂತ್ರ ಹೂಡಿದೆ ಎನ್ನಲಾಗುತ್ತಿದೆ. ಹೊಸ ವಿಧೇಯಕದ ಅನ್ವಯ, ಯಾವುದೇ ಖಾಸಗಿ ಸಂಘಟನೆ ಅಥವಾ ಸೊಸೈಟಿ ಸಾರ್ವಜನಿಕ ಆಸ್ತಿ ಬಳಸಬೇಕಾದರೆ ಸರ್ಕಾರದ ಕಠಿಣ ನಿಯಮಾವಳಿಗಳನ್ನು ಪಾಲಿಸಬೇಕಾಗುತ್ತದೆ ಮತ್ತು ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಲಿದೆ.
ಹೈಕೋರ್ಟ್ ತಡೆಗೆ ಕೌಂಟರ್ ಕೊಟ್ಟ ಡಿಕೆಶಿ ಸರ್ಕಾರ:
ಸರ್ಕಾರಿ ಶಾಲಾ ಆವರಣಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ನಿಷೇಧಿಸುವಂತೆ ಈ ಹಿಂದೆ ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದರು. ಅದರ ಬೆನ್ನಲ್ಲೇ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿತ್ತು. ಕೇವಲ ಆಡಳಿತಾತ್ಮಕ ಆದೇಶಗಳ ಮೂಲಕ ಸಂಘಟನೆಯನ್ನು ಕಟ್ಟಿಹಾಕಲು ಸಾಧ್ಯವಿಲ್ಲ ಎಂಬುದನ್ನು ಅರಿತ ಡಿ.ಕೆ. ಶಿವಕುಮಾರ್ ಸರ್ಕಾರ, ಈಗ ನೇರವಾಗಿ ಶಾಸನಾತ್ಮಕ ವಿಧೇಯಕ ತರುವ ಮೂಲಕ ಕಾನೂನು ಚೌಕಟ್ಟನ್ನು ಮತ್ತಷ್ಟು ಗಟ್ಟಿಗೊಳಿಸಿದೆ.
ಕಾಂಗ್ರೆಸ್ ವರ್ಸಸ್ ಬಿಜೆಪಿ ಹೈವೋಲ್ಟೇಜ್ ಫೈಟ್:
ಮುಂಬರುವ ದಿನಗಳಲ್ಲಿ ಈ ವಿಧೇಯಕವು ಸದನದಲ್ಲಿ ತೀವ್ರ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗುವುದು ನಿಶ್ಚಿತವಾಗಿದೆ. “ಸಾರ್ವಜನಿಕ ಸ್ವತ್ತಿನ ರಕ್ಷಣೆ ನಮ್ಮ ಉದ್ದೇಶ” ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೆ, “ಇದು ಕೇವಲ ಹಿಂದೂ ಸಂಘಟನೆಗಳನ್ನು ಗುರಿಯಾಗಿಸಿಕೊಂಡು ಮಾಡುತ್ತಿರುವ ರಾಜಕೀಯ ದ್ವೇಷದ ಪರಮಾವಧಿ” ಎಂದು ಬಿಜೆಪಿ ತಿರುಗಿಬೀಳುವ ಸಾಧ್ಯತೆಯಿದೆ. ಒಟ್ಟಾರೆಯಾಗಿ, ಆಡಳಿತ ಪಕ್ಷವು ಈ ವಿಧೇಯಕದ ಮೂಲಕ ಆರ್‌ಎಸ್‌ಎಸ್ ನಡೆಗೆ ಪರೋಕ್ಷವಾಗಿ ಬ್ರೇಕ್ ಹಾಕಲು ಮುಂದಾಗಿರುವುದು ಸದ್ಯದ ಹೈಲೈಟ್.
Related Articles
Thank you for your comment. It is awaiting moderation.


Comments (0)