ಎಸ್ ಐಆರ್ ಬಗ್ಗೆ ಎಚ್ಚರವಿರಲಿ; ಕೆಲಸ ಮಾಡಿದವರಿಗೆ ಪಾಲಿಕೆ ಟಿಕೆಟ್: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
- by Suddi Team
- June 3, 2026
- 8 Views
ಬೆಂಗಳೂರು:”ಕಾಂಗ್ರೆಸ್ ಕಾರ್ಯಕರ್ತರು ಎಸ್ ಐಆರ್ ಬಗ್ಗೆ ಗಮನ ಹರಿಸಬೇಕು. ಇದರಿಂದ ಸಮಸ್ಯೆಯಿದೆ. ಬಂಗಾಳ, ಅಸ್ಸಾಂ ಸೇರಿದಂತೆ ಅನೇಕ ಕಡೆ ಏನಾಗಿದೆ ಎಂದು ತಿಳಿದಿದೆ. ಎಲ್ಲರೂ ಸಭೆ ನಡೆಸಿ ಅರಿವು ಮೂಡಿಸಬೇಕು. ಮತ ಇಲ್ಲ ಎಂದರೆ ಗೃಹಲಕ್ಷ್ಮೀ ಸೇರಿದಂತೆ ಸರ್ಕಾರದ ಸೌಲಭ್ಯಗಳು ಸಿಗುವುದಿಲ್ಲ” ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಎಚ್ಚರಿಸಿದರು.
ನಗರದ ಕಾಂಗ್ರೆಸ್ ಕಚೇರಿಯ ಭಾರತ್ ಜೋಡೋ ಸಭಾಂಗಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರನ್ನು ಉದ್ದೇಶಿಸಿ ಮಾತನಾಡಿದರು.
“ಮೂರು- ನಾಲ್ಕು ವಾರ್ಡ್ ಗಳನ್ನು ಸೇರಿ ಶಾಸಕರನ್ನು ಒಳಗೊಂಡ ಸಮಿತಿ ಮಾಡಲಾಗುವುದು. ಅವರು ಎಸ್ ಐಆರ್ ಬಗ್ಗೆ ಸಭೆ ಮಾಡಲಿದ್ದಾರೆ. ನಂತರ ಪಾಲಿಕೆ ಚುನಾವಣೆಗೂ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದಾರೆ. ತಳಮಟ್ಟದಲ್ಲಿ ಕೆಲಸ ಮಾಡಬೇಕು. ಹಿಂದೆ ತಿರುಗಿದರೆ ಟಿಕೆಟ್ ಸಿಗಲ್ಲ. ಜನರ ನಡುವೆ ಕೆಲಸ ಮಾಡಬೇಕು” ಎಂದರು.
“ಎಸ್ ಐಆರ್ ಬಗೆಗಿನ ಸಭೆಗೆ ಬರದ ಕಾರ್ಯದರ್ಶಿಗಳನ್ನು ಎಐಸಿಸಿ ಅವರು ವಜಾ ಮಾಡಿದ್ದಾರೆ. ಇದರ ಬಗ್ಗೆ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರಬೇಕು” ಎಂದರು.
“ಕಾಂಗ್ರೆಸ್ ಕಚೇರಿ ನಮಗೆ ದೇವಾಲಯ ಇದ್ದಂತೆ. ನಾನು ಅದಕ್ಕಾಗಿ ಕಚೇರಿಗೆ ಬಂದಿದ್ದೇನೆ. ಮಹಾತ್ಮ ಗಾಂಧಿ ಅವರ ನೆನಪಿನಲ್ಲಿ ನೂರು ಕಚೇರಿಗಳಿಗೆ ಅಡಿಪಾಯ ಹಾಕಲಾಗಿದೆ. ಮುಖ್ಯಮಂತ್ರಿ ಆದ ತಕ್ಷಣ ಕಾಂಗ್ರೆಸ್ ಕಚೇರಿ ಬಿಡುವವನಲ್ಲ. ಕಾರ್ಯಕರ್ತರೇ ನನ್ನ ಉಸಿರು. ವಿದ್ಯಾರ್ಥಿ ನಾಯಕನಾಗಿ ರಾಜಕೀಯಕ್ಕೆ ಬಂದವನು. ಜಿಲ್ಲಾ ವಿದ್ಯಾರ್ಥಿ ಕಾಂಗ್ರೆಸ್ ಅಧ್ಯಕ್ಷನಾಗಿದ್ದೆ. ಕಾರ್ಯಕರ್ತನಿಗೆ ಒಂದಲ್ಲ ಒಂದು ಅವಕಾಶ ಸಿಗುತ್ತದೆ. ನಾನು ಕುಳಿತಿರುವ ಕುರ್ಚಿ ಈ ರಾಜ್ಯದ ಜನರನದ್ದು” ಎಂದರು.
ಹರಿಪ್ರಸಾದ್ ಅವರಿಗೆ ಅಭಿನಂದನೆಗಳು
“ಪಕ್ಷದ ನೂತನ ಅಧ್ಯಕ್ಷರಾಗಿ ಬಿ.ಕೆ.ಹರಿಪ್ರಸಾದ್ ಅವರು ಚುಕ್ಕಾಣಿ ಹಿಡಿದಿದ್ದಾರೆ. ಅವರು ಪಕ್ಷದ ಹಿರಿಯ ನಾಯಕರು. 5 ಬಾರಿ ರಾಜ್ಯಸಭಾ ಸದಸ್ಯರಾಗಿದ್ದರು. ಈ ಎರಡನೇ ಬಾರಿಗೆ ವಿಧಾನಪರಿಷತ್ ಸದಸ್ಯರಾಗುತ್ತಿದ್ದಾರೆ. ಸಾಮಾನ್ಯ ಕಾರ್ಯಕರ್ತನಿಗೆ 36 ವರ್ಷಗಳ ಕಾಲ ಪಕ್ಷವು ಅಧಿಕಾರ ನೀಡಿದೆ” ಎಂದರು.
“ಅಧಿಕಾರ ಹಸ್ತಾಂತರ ಅಷ್ಟೇ ಅಗುತ್ತಾ ಇರುವುದು ಆದರೆ ಕಾರ್ಯಕರ್ತರು ಹೊಸ ಸರ್ಕಾರ ಬಂದಷ್ಟು ಖುಷಿಯಲ್ಲಿದ್ದಾರೆ ಎಂದು ವಿಪಕ್ಷದವರು ಮಾತನಾಡುತ್ತಿದ್ದಾರೆ. ನಿಮ್ಮ ಉತ್ಸಾಹ ನನಗೆ ಶಕ್ತಿ ನೀಡಿದೆ” ಎಂದರು.
“ರೈತರ ಪರವಾಗಿ ಮುಂದಿನ ದಿನಗಳಲ್ಲಿ ಒಂದಷ್ಟು ಉತ್ತಮ ತೀರ್ಮಾನ ಮಾಡುತ್ತೇವೆ. “ಹೊಸ ಕೆಲಸಗಳನ್ನು ಮಾಡಲು ಹೊಸ ಅವಕಾಶ ಸಿಕ್ಕಿದೆ. ನಾನು ಹೊಸ ಅವಕಾಶವನ್ನು ಹುಡುಕುವವನು. ಕೊರೋನಾ ಸಮಯದಲ್ಲಿ ಅನೇಕ ಹೋರಾಟಗಳನ್ನು ಮಾಡಿದೆವು. ಯಡಿಯೂರಪ್ಪ ಅವರು ಕೊಡಲು ಆಗಲ್ಲ ಎಂದಿದ್ದನ್ನು ನಾವು ಕೊಟ್ಟೆವು. ರೈತರಿಂದ ತರಕಾರಿ ಖರೀದಿಸಿ ನೀಡಿದೆವು. ಕಾರ್ಮಿಕರ ಪರವಾಗಿ ನಿಂತೆವು” ಎಂದರು.
“ನಾನು ಹಾಗೂ ಸಿದ್ದರಾಮಯ್ಯ ಅವರು ಸೇರಿ ಚರ್ಚಿಸಿ ವಿಧಾನಸೌಧದ ಮುಂದೆ ಅಥವಾ ದೊಡ್ಡ ಮೈದಾನದಲ್ಲಿ ಪ್ರಮಾಣವಚನ ಸ್ವೀಕಾರ ಮಾಡಬೇಕು ಎನ್ನುವ ಆಲೋಚನೆಯಿತ್ತು. ಬೆಂಗಳೂರು ಸುತ್ತಲಿನ ಪ್ರದೇಶಗಳಿಂದಲೇ ಕಾಂಗ್ರೆಸ್ ಕಾರ್ಯಕರ್ತರನ್ನು ಕರೆಸಲು 1,200 ಕ್ಕೂ ಹೆಚ್ಚು ಬಸ್ ಗಳನ್ನು ಬಾಡಿಗೆಗೆ ನಿಗದಿ ಮಾಡಲಾಗಿತ್ತು. ಆದರೆ ಹೈಕಮಾಂಡ್ ದೊಡ್ಡದಾಗಿ ಮಾಡುವುದು ಬೇಡ ಸರಳವಾಗಿರಲಿ ಎಂದು ಹೇಳಿದರು. ಆದ ಕಾರಣಕ್ಕೆ ಲೋಕಭವನದಲ್ಲಿ ನಡೆಸಲಾಯಿತು” ಎಂದು ಹೇಳಿದರು.
“ರೇಸ್ ಕೋರ್ಸ್ ರಸ್ತೆ ಬಳಿ ದೊಡ್ಡ ಕಾಂಗ್ರೆಸ್ ಭವನಕ್ಕೆ ಇಂದು ಅಡಿಪಾಯ ಹಾಕಬೇಕಿತ್ತು. ಆದರೆ ರಾಹುಲ್ ಗಾಂಧಿ ಅವರು ಬೇರೊಂದು ದಿನ ಮಾಡೋಣ ಎಂದು ಸಲಹೆ ನೀಡಿದರು. ನಾನು ಅಧ್ಯಕ್ಷನಾಗಿದ್ದಾಗಲೇ ಅಡಿಪಾಯ ಹಾಕಬೇಕು ಎಂದು ಇಚ್ಚಿಸಿದ್ದೆ. ಅದಕ್ಕೆ ರಾಹುಲ್ ಗಾಂಧಿ ಅವರು ನಿನ್ನ ಹೆಸರನ್ನೇ ಹಾಕೋಣ ಎಂದು ಹೇಳಿದರು” ಎಂದರು.
ಸೀಟ್ ಗಾಗಿ ಫೈಟ್ ಮಾಡುತ್ತಿದ್ದೇವೆ:
“ಸೀಟ್ ಗಾಗಿ ನಾವು ಫೈಟ್ ಮಾಡುತ್ತಿದ್ದೇವೆ. ವೇದಿಕೆಯ ಮುಂಭಾಗ ನಿಂತಿರುವವರು ಕುರ್ಚಿಯಿದ್ದ ಕಡೆ ಕುಳಿತುಕೊಳ್ಳಬೇಕು” ಎಂದು ಹಾಸ್ಯ ಚಟಾಕಿ ಹಾರಿಸಿದರು.
Related Articles
Thank you for your comment. It is awaiting moderation.


Comments (0)