ಪ್ರಮಾಣ ವಚನ ಸ್ವೀಕಾರದ ವೇಳೆ ಎಂ.ಬಿ. ಪಾಟೀಲ್ ಎಡವಟ್ಟು: ನಿಯಮ ಪಾಲಿಸುವಂತೆ ರಾಜ್ಯಪಾಲರಿಂದ ತಕ್ಷಣವೇ ಸೂಚನೆ!
- by Suddi Team
- June 4, 2026
- 4 Views
ಬೆಂಗಳೂರು: ಲೋಕಭವನದ ಗಾಜಿನ ಮನೆಯಲ್ಲಿ ನಡೆದ ನೂತನ ಸರ್ಕಾರದ ಪದಗ್ರಹಣ ಸಮಾರಂಭದಲ್ಲಿ ಹಿರಿಯ ನಾಯಕ ಎಂ.ಬಿ. ಪಾಟೀಲ್ ಅವರು ಪ್ರಮಾಣ ವಚನ ಸ್ವೀಕರಿಸುವ ವೇಳೆ ಸಣ್ಣದೊಂದು ಎಡವಟ್ಟು ಮಾಡಿಕೊಂಡಿದ್ದು, ರಾಜ್ಯಪಾಲರು ತಕ್ಷಣವೇ ಅದನ್ನು ತಿದ್ದಿಕೊಳ್ಳುವಂತೆ ಸೂಚಿಸಿದ ಪ್ರಸಂಗ ನಡೆದಿದೆ.
ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ವೇದಿಕೆಗೆ ಬಂದ ಎಂ.ಬಿ. ಪಾಟೀಲ್ ಅವರು, ರಾಜ್ಯಪಾಲರು ಪ್ರತಿಜ್ಞಾವಿಧಿ ಬೋಧಿಸುತ್ತಿದ್ದಂತೆ ತಮ್ಮ ಆರಾಧ್ಯ ತತ್ವಜ್ಞಾನಿಗಳಾದ ವಿಶ್ವಗುರು ಅಣ್ಣ ಬಸವಣ್ಣ, ಬಸವಾದಿ ಶರಣರು ಹಾಗೂ ಲಿಂಗೈಕ್ಯ ಸಿದ್ದೇಶ್ವರ ಮಹಾಸ್ವಾಮೀಜಿಯವರ ಹೆಸರನ್ನು ಉಲ್ಲೇಖಿಸಿದರು. ಆದರೆ, ಆತುರದಲ್ಲಿ ನಿಗದಿತ ಲಿಖಿತ ಪಠ್ಯದಲ್ಲಿದ್ದ ಸಾಲುಗಳನ್ನು ಪೂರ್ಣವಾಗಿ ಓದದೆ ಮುಂದಿನ ಸಾಲಿಗೆ ಹೋದರು.
ಅಧಿಕೃತ ನಿಯಮಾವಳಿಗಳ ಪ್ರಕಾರ ನಿಗದಿಪಡಿಸಲಾದ ಪಠ್ಯದ ಪ್ರತಿಯೊಂದು ಸಾಲನ್ನು ಸಾಂವಿಧಾನಿಕವಾಗಿ ನಿಖರವಾಗಿ ಓದುವುದು ಕಡ್ಡಾಯವಾಗಿದೆ. ಎಂ.ಬಿ. ಪಾಟೀಲ್ ಅವರು ಸಾಲೊಂದನ್ನು ಕೈಬಿಡುತ್ತಿರುವುದನ್ನು ತಕ್ಷಣವೇ ಗಮನಿಸಿದ ರಾಜ್ಯಪಾಲರು, ನಿಯಮದ ಪ್ರಕಾರ ಪಠ್ಯದಲ್ಲಿರುವ ವಾಕ್ಯವನ್ನು ಪೂರ್ಣವಾಗಿ ಮತ್ತು ಸರಿಯಾಗಿ ಓದುವಂತೆ ಕೈ ಸನ್ನೆ ಮಾಡುವ ಮೂಲಕ ವೇದಿಕೆಯಲ್ಲೇ ನೇರ ಸೂಚನೆ ನೀಡಿದರು. ರಾಜ್ಯಪಾಲರ ಸೂಚನೆಯ ಬೆನ್ನಲ್ಲೇ ತಮ್ಮ ತಪ್ಪನ್ನು ಅರಿತುಕೊಂಡ ಎಂ.ಬಿ. ಪಾಟೀಲ್ ಅವರು, ಮರುಕ್ಷಣವೇ ತಿದ್ದಿಕೊಂಡು ಮೊದಲಿನಿಂದ ಸಾಲುಗಳನ್ನು ಸ್ಪಷ್ಟವಾಗಿ ಓದಿ ಪ್ರಮಾಣ ವಚನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಈ ಘಟನೆಯು ಸಮಾರಂಭದಲ್ಲಿ ಕೆಲಕಾಲ ಸಣ್ಣ ಕುತೂಹಲ ಮೂಡಿಸಿತ್ತು.
Related Articles
Thank you for your comment. It is awaiting moderation.


Comments (0)