ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಜೂನ್ 3 ರಂದು ಡಿ.ಕೆ. ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ
- by Suddi Team
- May 30, 2026
- 6 Views
ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಮತ್ತೊಂದು ಪ್ರಮುಖ ಅಧ್ಯಾಯ ಆರಂಭವಾಗಿದ್ದು, ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಡಿ.ಕೆ. ಶಿವಕುಮಾರ್ ಅವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅಧಿಕೃತವಾಗಿ ಆಹ್ವಾನ ನೀಡಿದ್ದಾರೆ. ಶನಿವಾರ ಬೆಂಗಳೂರಿನ ರಾಜಭವನದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳ ಬೆನ್ನಲ್ಲೇ ಈ ಮಹತ್ವದ ಆದೇಶ ಹೊರಬಿದ್ದಿದೆ.
ರಾಜ್ಯದಲ್ಲಿ ನೂತನ ಸರ್ಕಾರ ರಚಿಸಲು ತಮಗೆ ಸಂಖ್ಯಾಬಲವಿದ್ದು, ಅವಕಾಶ ನೀಡಬೇಕು ಎಂದು ಕೋರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯಪಾಲರಿಗೆ ಅಧಿಕೃತ ಪತ್ರ ಬರೆದು ಹಕ್ಕು ಮಂಡಿಸಿದ್ದರು. ಈ ಪತ್ರವನ್ನು ಪರಿಶೀಲಿಸಿ ಪುರಸ್ಕರಿಸಿದ ರಾಜ್ಯಪಾಲರು, ಸರ್ಕಾರ ರಚನೆಗೆ ಹಸಿರು ನಿಶಾನೆ ತೋರಿಸಿದ್ದಾರೆ. ಜೂನ್ 3 ರಂದು ಮಧ್ಯಾಹ್ನ ನಂತರ ನೂತನ ಸಚಿವರ ತಂಡದೊಂದಿಗೆ ಪ್ರಮಾಣ ವಚನ ಸ್ವೀಕರಿಸುವಂತೆ ರಾಜ್ಯಪಾಲರು ತಮ್ಮ ಆಹ್ವಾನ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಮಾಣ ವಚನ ಕಾರ್ಯಕ್ರಮದ ಸಂಪೂರ್ಣ ವಿವರಗಳು:
ದಿನಾಂಕ: ಜೂನ್ 3, 2026
ಸಮಯ: ಸಂಜೆ ಭರ್ತಿ 04:05 ಕ್ಕೆ
ಸ್ಥಳ: ಲೋಕಭವನದ ಆವರಣ, ಬೆಂಗಳೂರು
ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಇದಾದ ನಂತರ ಹೊಸ ಸರ್ಕಾರ ರಚನೆಯ ಪ್ರಕ್ರಿಯೆಗಳು ತೀವ್ರಗೊಂಡಿದ್ದವು.
ರಾಜ್ಯಪಾಲರು ಕಳುಹಿಸಿರುವ ಈ ಅಧಿಕೃತ ಆಹ್ವಾನ ಪತ್ರದ ಪ್ರತಿಗಳನ್ನು ಡಿ.ಕೆ. ಶಿವಕುಮಾರ್ ಅವರಿಗೆ ಶಾಸಕಾಂಗ ಪಕ್ಷದ ನಾಯಕರಾಗಿ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಅಧ್ಯಕ್ಷರಾಗಿ ಜವಾಬ್ದಾರಿ ಹೊಂದಿರುವುದರಿಂದ ಎರಡೂ ಹುದ್ದೆಗಳ ಹೆಸರಿಗೂ ಪ್ರತ್ಯೇಕವಾಗಿ ರವಾನಿಸಲಾಗಿದೆ. ಈ ಮೂಲಕ ರಾಜ್ಯದಲ್ಲಿ ಹೊಸ ಸಚಿವ ಸಂಪುಟ ಅಸ್ತಿತ್ವಕ್ಕೆ ಬರಲು ದಿನಗಣನೆ ಆರಂಭವಾಗಿದೆ. ಹೊಸ ಸಂಪುಟದಲ್ಲಿ ಯಾರೆಲ್ಲಾ ಸಚಿವರಾಗಲಿದ್ದಾರೆ ಎಂಬ ಕುತೂಹಲ ಈಗ ಜನರಲ್ಲಿ ಮನೆಮಾಡಿದೆ.
Related Articles
Thank you for your comment. It is awaiting moderation.


Comments (0)