ಮಾನವ ಧರ್ಮ ಪರಿಪಾಲನೆಯಿಂದ ಜಗತ್ಕಲ್ಯಾಣ : ಶ್ರೀ ರಂಭಾಪುರಿ ಜಗದ್ಗುರುಗಳು
- by Suddi Team
- May 17, 2026
- 19 Views
ಶಿವಮೊಗ್ಗ:ಮಾನವ ಜೀವನದ ಉನ್ನತಿಗೆ ಮತ್ತು ಶ್ರೇಯಸ್ಸಿಗೆ ಧರ್ಮ ಮುಖ್ಯ. ತಾನು ಎಲ್ಲರಿಗಾಗಿ ಅನ್ನುವುದೇ ನಿಜವಾದ ಧರ್ಮ, ತತ್ವವನ್ನು ಅರಿತವನಿಗೆ ಸತ್ಯದ ಬೆಳಕು ಗೋಚರವಾಗುತ್ತದೆ. ಮಾನವ ಧರ್ಮ ಪರಿಪಾಲನೆಯಿಂದ ಎಲ್ಲ ಧರ್ಮಗಳು ಉಳಿದು ಬೆಳೆಯಲು ಸಾಧ್ಯ. ಜಗತ್ಕಲ್ಯಾಣಕ್ಕೆ ಮಾನವ ಧರ್ಮ ಪರಿಪಾಲನೆ ಅವಶ್ಯಕವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಭಾನುವಾರ ನಗರದ ಅಲ್ಲಮಪ್ರಭು ಮಾನವ ಧರ್ಮ ಮಂಟಪದಲ್ಲಿ ಬೃಹತ್ ಜಾಗೃತಿ ಸಮಾವೇಶ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕೃತಜ್ಞತಾ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು,ಯಾವಾಗಲೂ ನಾಶವಾಗದೇ ಇರುವುದು ನಿಜವಾದ ಧರ್ಮ. ಇದನ್ನು ನಾಶ ಮಾಡುವ ಶಕ್ತಿ ಯಾರಿಗೂ ಇರುವುದಿಲ್ಲ. ಪರಿಶುದ್ಧವಾದ ಮತ್ತು ಪವಿತ್ರವಾದ ಜೀವನ ರೂಪಿತಗೊಳ್ಳಲು ಧರ್ಮಪ್ರಜ್ಞೆ ಅವಶ್ಯಕ. ಜಾತಿ ಜನಾಂಗಗಳ ಗಡಿ ಮೀರಿ ವಿಶ್ವ ಬಂಧುತ್ವ ಸಾರಿದ ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ದಶಧರ್ಮ ಸೂತ್ರಗಳು ಸಕಲರಿಗೂ ಹಿತಕಾರಿ. ವೈಚಾರಿಕತೆ ಹೆಸರಿನಲ್ಲಿ ಭಾರತೀಯ ಉತ್ಕೃಷ್ಟ ಸಂಸ್ಕೃತಿ ನಾಶಗೊಳ್ಳಬಾರದು. ವೀರಶೈವ ಧರ್ಮದ ರಾಷ್ಟ್ರೀಯ ಗುರು ಪೀಠಗಳೆಂದು ಪ್ರಖ್ಯಾತಿ ಪಡೆದ ಪಂಚ ಪೀಠಗಳು ಸಾಮರಸ್ಯ ಸೌಹಾರ್ದತೆ ಬೆಳೆಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಾ ಬಂದಿವೆ. ರಾಜ್ಯ ಕಂಡ ಧೀಮಂತ ಜನ ನಾಯಕ ಬಿ.ಎಸ್.ಯಡಿಯೂರಪ್ಪನವರು 50 ವರುಷಗಳ ಕಾಲ ಶ್ರಮಿಸಿ ನಾಡು ನುಡಿ ಕಟ್ಟಿ ಬೆಳೆಸಿರುವುದು ಅವರಲ್ಲಿರುವ ಸಾಮಾಜಿಕ ಕಳಕಳಿಯನ್ನು ಕಾಣಬಹುದಾಗಿದೆ. ರಾಜ್ಯದ ಸರ್ವರಿಗೂ ಪ್ರಗತಿಗೆ ಮತ್ತು ವಿಶೇಷವಾಗಿ ಶಿವಮೊಗ್ಗ ನಗರಕ್ಕೆ ಬಹು ದೊಡ್ಡ ಕೊಡುಗೆ ಕೊಟ್ಟಿದ್ದನ್ನು ಮರೆಯಲಾಗದು. ಅವರು ಸಲ್ಲಿಸಿದ ಸೇವೆ ಕಂಡು ಶಿವಮೊಗ್ಗ ನಗರದ ಜನತೆ ಕೃತಜ್ಞತಾ ಸಮಾರಂಭ ಹಮ್ಮಿಕೊಂಡಿರುವುದು ತಮಗೆ ಅಪಾರ ಸಂತೋಷ ತಂದಿದೆ ಎಂದರು.
ಸಾನ್ನಿಧ್ಯ ವಹಿಸಿದ ಉಜ್ಜಯಿನಿ ಸಿದ್ದಲಿಂಗ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ ಪರಿಪಕ್ವ ಸಮಾಜ ನಿರ್ಮಾಣ ಕಾರ್ಯವೇ ನಿಜವಾದ ಧರ್ಮ, ಸತ್ಯ ಸೈದ್ಧಾಂತಿಕ ತಳಹದಿಯ ಮೇಲೆ ಮಾನವ ಜೀವನ ರೂಪಿತಗೊಳ್ಳಬೇಕಾಗಿದೆ. ಬಿ.ಎಸ್.ಯಡಿಯೂರಪ್ಪನವರ ರೈತ ಪರ ಹೋರಾಟ ಮತ್ತು ಸಾಮರಸ್ಯ ಜನರ ಬಗ್ಗೆ ಅವರಿಗಿರುವ ಕಳಕಳಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ. ಆದ್ಭುತವಾದ ಧರ್ಮ ಸಮಾರಂಭ ಹಮ್ಮಿಕೊಂಡಿರುವುದು ತಮ್ಮೆಲ್ಲರ ಸ್ವಾಭಿಮಾನಕ್ಕೆ ಸಮಾರಂಭ ಸಾಕ್ಷಿಯಾಗಿದೆ ಎಂದರು.
ಸಾನ್ನಿಧ್ಯ ವಹಿಸಿ ಶ್ರೀಶೈಲ ಪೀಠದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ ಮೂಲ ನಂಬಿಕೆಗಳನ್ನು ಕೆಲವರು ಮೂಢ ನಂಬಿಕೆಗಳೆಂದು ಅಸತ್ಯದ ಮಾತು ಹೇಳುವವರನ್ನು ಕಾಣುತ್ತೇವೆ. ಸತ್ಯವೇ ಒಂದು ಧರ್ಮ. ಇದು ಧರ್ಮವನ್ನು ರಕ್ಷಿಸುವ ರಕ್ಷಾ ಕವಚ. ಧರ್ಮದ ರಕ್ಷಾ ಕವಚ ಕಳಚಿದರೆ ಈ ನಾಡಿನಲ್ಲಿ ಏನೊಂದು ಉಳಿಯದು. ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ಮೂಲವನ್ನು ಮರೆಯಬಾರದೆಂದರು.
ಸಾನ್ನಿಧ್ಯ ವಹಿಸಿದ ಕಾಶೀ ಪೀಠದ ಡಾ.ಚಂದ್ರಶೇಖರ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ ಮನುಷ್ಯನ ಬದುಕಿನಲ್ಲಿ ಮೌಲ್ಯಯುತವಾದ ಆಯುಷ್ಯದ ಒಂದು ಕ್ಷಣವನ್ನು ಸಾವಿರ ಸುವರ್ಣ ಮುದ್ರೆಗಳಿಂದಲೂ ಸಹ ಖರೀದಿ ಮಾಡಲು ಸಾಧ್ಯವಿಲ್ಲ. ಇಂತಹ ಅಮೂಲ್ಯವಾದ ತನ್ನ ಆಯುಷ್ಯದ 50 ವರ್ಷಗಳನ್ನು ಸಮಾಜ ಸೇವೆಯಲ್ಲಿ ಕಳೆದ ಅಪೂರ್ವ ವ್ಯಕ್ತಿಯೇ ಬಿ ಎಸ್ ಯಡಿಯೂರಪ್ಪನವರು. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಸಾಮಾಜಿಕ ಘೋಷ ವಾಕ್ಯವನ್ನು ಆಚರಣೆಯಲ್ಲಿ ತಂದು ಸರ್ವಧರ್ಮೀಯರನ್ನು ಸಮಾನವಾಗಿ ಕಂಡವರು, ಇಂದು ಪಂಚಪೀಠಗಳ ದಿವ್ಯ ಸಾನಿಧ್ಯದಲ್ಲಿ ಅವರು ಸಮಾಜದಿಂದ ಕೃತಜ್ಞತಾ ಗೌರವವನ್ನು ಪಡೆದುಕೊಳ್ಳುತ್ತಿರುವುದು ಸರ್ವರಿಗೂ ಸಂತೋಷವನ್ನುಂಟು ಮಾಡುತ್ತಿದೆ. ಇವರ ಈ ಸಮಾಜ ಸೇವೆಯು ಸರ್ವರಿಗೂ ಆದರ್ಶಪ್ರಾಯವಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ ಕಾಶೀ ಪೀಠದ ನೂತನ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯರು ತಮ್ಮ ಆಶೀರ್ವಚನದಲ್ಲಿ ನಮ್ಮ ಬದುಕು ಇನ್ನೊಬ್ಬರಿಗೆ ಮಾದರಿಯಾಗಬೇಕಲ್ಲದೇ ಮಾರಕವಾಗಬಾರದು. ವಿಜ್ಞಾನ ತಂತ್ರಜ್ಞಾನ ಬೆಳೆದಂತೆ ಮನುಷ್ಯನ ಭಾವನೆಗಳು ಬೆಳೆಯುತ್ತಿಲ್ಲ. ಪೂರ್ವಜರ ಅನುಭವದ ನುಡಿಗಳು ಬದುಕಿ ಬಾಳುವ ಜನಾಂಗಕ್ಕೆ ಆಶಾ ಕಿರಣ, ಪುಟ ಪುಸ್ತಕ ಬದಲಿಸಬಹುದು. ಆದರೆ ಇತಿಹಾಸವನ್ನು ಬದಲಿಸಲು ಯಾರಿಂದಲೂ ಸಾಧ್ಯವಾಗದೆಂದರು. ಎಡೆಯೂರು ರೇಣುಕ ಶಿವಾಚಾರ್ಯರು, ಮುಕ್ತಿಮಂದಿರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು, ಸಿಂದಗಿ ಪ್ರಭು ಸಾರಂಗದೇವ ಶಿವಾಚಾರ್ಯರು ಸೇರಿದಂತೆ ಹೊನ್ನಾಳಿ, ಬೆಳಕಿ, ಮಳಲಿ, ತೊಗರ್ಸಿ, ತಾವರೆಕೆರೆ, ತೊಗರ್ಸಿ, ಕಣಸೋಗಿ, ಶಿರಾಳಕೊಪ್ಪ, ವೀರಾಪುರ, ಹಿರೇಮಾಗಡಿ, ಕೆಳದಿ, ಸಾಲೂರು, ಜಡೆ, ತಾಳಗುಪ್ಪ, ದಿಂಡದಹಳ್ಳಿ, ಕವಲೇದುರ್ಗ, ಗೊಗ್ಗಿಹಳ್ಳಿ, ಮೂಡಿ, ಕೋಣಂದೂರು, ಹಾರನಹಳ್ಳಿ, ಕಡೇನಂದಿಹಳ್ಳಿ, ಶಾಂತಪುರ ಮಠ ಸೇರಿದಂತೆ ಜಿಲ್ಲೆ ಹೊರ ಜಿಲ್ಲೆಗಳ 70ಕ್ಕೂ ಹೆಚ್ಚು ಮಠಾಧೀಶರು ಉಪಸ್ಥಿತರಿದ್ದರು. ಮಾಜಿ ಸಂಸದ ಆಯನೂರು ಮಂಜುನಾಥ ಪ್ರಾಸ್ತಾವಿಕ ಮಾತನಾಡಿದರು.
ಇದೇ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪನವರ 50 ವರ್ಷದ ರಾಜಕೀಯ ಸೇವೆಯನ್ನು ಪರಿಗಣಿಸಿ ಕೃತಜ್ಞತಾ ಗೌರವ ಸನ್ಮಾನ ನೀಡಲಾಯಿತು.
ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಶಾಸಕ ಬಿ.ಕೆ.ಸಂಗಮೇಶ, ಎಸ್.ರುದ್ರೇಗೌಡ, ಎಸ್.ಕೆ.ಮರಿಯಪ್ಪ, ಹಾಲಪ್ಪ ಹರತಾಳ, ಎಸ್.ಪಿ.ದಿನೇಶ್, ಟಿ.ವಿ.ಶ್ರೀನಿವಾಸ, ತೇಜೋಮೂರ್ತಿ ಸಿ.ಎಸ್.ದೇವರಾಜ, ಎಸ್.ಎಸ್.ಜ್ಯೋತಿಪ್ರಕಾಶ, ಬಳ್ಳೇಕೆರೆ ಸಂತೋಷ, ಮಾಜಿ ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ರುದ್ರಮುನಿ ಸಜ್ಜನ್, ಹೆಚ್.ಎಂ.ಚಂದ್ರಶೇಖರಪ್ಪ, ವಿರೂಪಾಕ್ಷಪ್ಪ ಜವಳಿ, ಹೆಚ್.ವಿ.ಮಹೇಶ್ವರಪ್ಪ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.ಶಾಸಕ ಎಸ್.ಎನ್.ಚನ್ನಬಸಪ್ಪ ಸರ್ವರನ್ನೂ ಸ್ವಾಗತಿಸಿದರು. ಸಿ.ಎಸ್.ಷಡಕ್ಷರಿ ನಿರೂಪಿಸಿದರು.
Related Articles
Thank you for your comment. It is awaiting moderation.


Comments (0)