ಸಾರಿಗೆ ಸಿಬ್ಬಂದಿಗಳೇ ಗಮನಿಸಿ: ಸುಡುವ ಬಿಸಿಲಿನಿಂದ ಪಾರಾಗಲು ಕೆಎಸ್‌ಆರ್‌ಟಿಸಿ ನೀಡಿದೆ ‘ಆರೋಗ್ಯ ಸೂತ್ರ’

ಬೆಂಗಳೂರು: ರಾಜ್ಯಾದ್ಯಂತ ಸೂರ್ಯನ ಪ್ರಖರತೆ ದಿನದಿಂದ ದಿನಕ್ಕೆ ಏರುತ್ತಿದ್ದು, ಕಡು ಬಿಸಿಲಿನಲ್ಲೇ ಕರ್ತವ್ಯ ನಿರ್ವಹಿಸುವ ಸಾರಿಗೆ ಸಂಸ್ಥೆಯ ಚಾಲಕರು ಮತ್ತು ನಿರ್ವಾಹಕರು ತೀವ್ರ ಆರೋಗ್ಯ ಸಮಸ್ಯೆಗಳನ್ನು ಎದುರಿಸುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್‌ಆರ್‌ಟಿಸಿ) ತನ್ನ ಸಿಬ್ಬಂದಿಗಳ ಸುರಕ್ಷತೆಗಾಗಿ ವಿಶೇಷ ಆರೋಗ್ಯ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ‘ಬಿಸಿಲಿನ ಬೇಗೆಯಿಂದ ಪಾರಾಗಲು ಮುನ್ನೆಚ್ಚರಿಕೆ ವಹಿಸಿ’ ಎಂದು ಕರೆ ನೀಡಿದೆ.

ಸಾರಿಗೆ ಕೆಲಸವು ದೈಹಿಕವಾಗಿ ಮತ್ತು ಮಾನಸಿಕವಾಗಿ ಅತ್ಯಂತ ಶ್ರಮದಾಯಕವಾದುದು. ಅದರಲ್ಲೂ ಬೇಸಿಗೆಯ ಶಾಖದ ಅಲೆಯು ಚಾಲನಾ ಸಿಬ್ಬಂದಿಗಳಲ್ಲಿ ಸುಸ್ತು, ತಲೆಸುತ್ತು ಮತ್ತು ನಿರ್ಜಲೀಕರಣದಂತಹ ಸಮಸ್ಯೆಗಳನ್ನು ಉಂಟುಮಾಡುತ್ತಿದೆ. ಇದನ್ನು ಮನಗಂಡ ವ್ಯವಸ್ಥಾಪಕ ನಿರ್ದೇಶಕರಾದ ಅಕ್ರಂ ಪಾಷ ಅವರು, ಸಿಬ್ಬಂದಿಗಳು ತಮ್ಮ ಕರ್ತವ್ಯದ ನಡುವೆಯೂ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವಂತೆ ಸೂಚಿಸಿದ್ದಾರೆ.

ಮಾರ್ಗಸೂಚಿಯ ಪ್ರಮುಖ ಅಂಶಗಳು:

ಆಹಾರ ಮತ್ತು ಪಾನೀಯ: ಕರ್ತವ್ಯದ ಅವಧಿಯಲ್ಲಿ ದೇಹದ ತೇವಾಂಶ ಕಾಪಾಡಿಕೊಳ್ಳುವುದು ಅತಿ ಮುಖ್ಯ. ಆದ್ದರಿಂದ ಸಿಬ್ಬಂದಿಗಳು ಸದಾ ಕಾಲ ಶುದ್ಧ ಕುಡಿಯುವ ನೀರನ್ನು ಜೊತೆಯಲ್ಲಿಟ್ಟುಕೊಳ್ಳಬೇಕು. ಎಳನೀರು, ಮಜ್ಜಿಗೆ, ಕಲ್ಲಂಗಡಿ, ಸೌತೆಕಾಯಿ ಹಾಗೂ ಪುದೀನಾದಂತಹ ತಂಪುಕಾರಕ ಪದಾರ್ಥಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಹೆಚ್ಚಿನ ತೇವಾಂಶವಿರುವ ಹಣ್ಣುಗಳು ಮತ್ತು ಮೊಳಕೆಕಾಳುಗಳ ಸೇವನೆಗೆ ಆದ್ಯತೆ ನೀಡಬೇಕು.

ತ್ಯಜಿಸಬೇಕಾದ ಅಭ್ಯಾಸಗಳು: ದೇಹದ ಉಷ್ಣತೆಯನ್ನು ಹೆಚ್ಚಿಸುವ ಮತ್ತು ನಿರ್ಜಲೀಕರಣಕ್ಕೆ ಕಾರಣವಾಗುವ ಚಹಾ, ಕಾಫಿ ಹಾಗೂ ಅನಿಲ ಮಿಶ್ರಿತ ಪಾನೀಯಗಳನ್ನು ತಪ್ಪಿಸುವುದು ಒಳಿತು. ಅಲ್ಲದೆ, ಧೂಮಪಾನ, ಮದ್ಯಪಾನ ಮತ್ತು ರಸ್ತೆ ಬದಿಯ ಅಶುಚಿಯಾದ ಆಹಾರ ಸೇವನೆಯಿಂದ ದೂರವಿರುವಂತೆ ತಿಳಿಸಲಾಗಿದೆ.

ದೈಹಿಕ ಜಾಗೃತಿ: ದಿನಕ್ಕೆ ಕನಿಷ್ಠ 4-5 ಬಾರಿ ತಣ್ಣೀರಿನಿಂದ ಮುಖ ತೊಳೆಯುವುದರಿಂದ ದಣಿವು ಕಡಿಮೆಯಾಗುತ್ತದೆ. ಬಿಸಿಲಿನಲ್ಲಿ ನಿಲ್ಲಿಸಿರುವ ಬಸ್‌ಗಳ ಒಳಗೆ ಹೆಚ್ಚು ಹೊತ್ತು ಕುಳಿತುಕೊಳ್ಳಬಾರದು, ಇದು ಉಸಿರಾಟದ ಮೇಲೆ ಪರಿಣಾಮ ಬೀರಬಹುದು. ತುರ್ತು ಸಂದರ್ಭಗಳಿಗಾಗಿ ಪ್ರತಿಯೊಬ್ಬ ಸಿಬ್ಬಂದಿಯೂ ತಮ್ಮ ಬಳಿ ORS ಪ್ಯಾಕೆಟ್‌ಗಳು ಮತ್ತು ಅಗತ್ಯವಾದ ಪ್ರಥಮ ಚಿಕಿತ್ಸಾ ಔಷಧಿಗಳನ್ನು ಇರಿಸಿಕೊಳ್ಳುವುದು ಅನಿವಾರ್ಯವಾಗಿದೆ.

ಒಂದೊಮ್ಮೆ ಕರ್ತವ್ಯದ ವೇಳೆ ಅತಿಯಾದ ಆಯಾಸ ಅಥವಾ ಅಸ್ವಸ್ಥತೆ ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಸಾರ್ವಜನಿಕರಿಗೆ ಸುರಕ್ಷಿತ ಪ್ರಯಾಣ ಒದಗಿಸುವ ಜವಾಬ್ದಾರಿಯ ಜೊತೆಗೆ ತಮ್ಮ ಸ್ವಂತ ಆರೋಗ್ಯ ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ಸಿಬ್ಬಂದಿಯ ಕರ್ತವ್ಯವಾಗಿದೆ ಎಂದು ನಿಗಮವು ತಿಳಿಸಿದೆ.

 

Related Articles

Comments (0)

Leave a Comment