ಪರಿಸರ ಸ್ನೇಹಿ ದೀಪಾವಳಿಗೆ ಸಚಿವ ರಾಮಲಿಂಗಾ ರೆಡ್ಡಿ ಕರೆ: ರಾತ್ರಿ 8ರಿಂದ 10 ಗಂಟೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ, ಹಸಿರು ಪಟಾಕಿ ಕಡ್ಡಾಯ

ಬೆಂಗಳೂರು: ದೇಶಾದ್ಯಂತ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಮನೆಮಾಡಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರ ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ‘ಪರಿಸರ ಸ್ನೇಹಿ ದೀಪಾವಳಿ-2026’ ಆಚರಿಸುವಂತೆ ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ರಾಮಲಿಂಗಾ ರೆಡ್ಡಿ ಅವರು ರಾಜ್ಯದ ಜನತೆಯಲ್ಲಿ ಮನವಿ ಮಾಡಿದ್ದಾರೆ. ಹಬ್ಬದ ಸಂದರ್ಭದಲ್ಲಿ ವಾಯು ಮತ್ತು ಶಬ್ದ ಮಾಲಿನ್ಯ ತಡೆಗಟ್ಟಲು ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳನ್ನು ರಾಜ್ಯಾದ್ಯಂತ ಕಟ್ಟುನಿಟ್ಟಾಗಿ ಜಾರಿಗೊಳಿಸಲು ವಿವಿಧ ಇಲಾಖೆಗಳು ಹಾಗೂ ಪ್ರಾಧಿಕಾರಗಳಿಗೆ ಕಠಿಣ ಆದೇಶ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾತ್ರಿ 8 ರಿಂದ 10 ಗಂಟೆಯವರೆಗೆ ಮಾತ್ರ ಅವಕಾಶ:

ಸರ್ವೋಚ್ಛ ನ್ಯಾಯಾಲಯದ ಆದೇಶದ ಅನ್ವಯ ದೀಪಾವಳಿ ಹಬ್ಬದ ದಿನಗಳಲ್ಲಿ ಕೇವಲ ರಾತ್ರಿ 8.00 ಗಂಟೆಯಿಂದ ರಾತ್ರಿ 10.00 ಗಂಟೆಯವರೆಗೆ ಮಾತ್ರ ಪಟಾಕಿಗಳನ್ನು ಸಿಡಿಸಲು ಅವಕಾಶವಿರುತ್ತದೆ. ಉಳಿದ ಸಮಯದಲ್ಲಿ ಪಟಾಕಿಗಳ ಸ್ಫೋಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆಸ್ಪತ್ರೆಗಳು, ಶಾಲೆಗಳು, ವೃದ್ಧಾಶ್ರಮಗಳು ಹಾಗೂ ಇತರೆ ಸೂಕ್ಷ್ಮ ಪ್ರದೇಶಗಳ ಸಮೀಪ ಯಾವುದೇ ಕಾರಣಕ್ಕೂ ಪಟಾಕಿ ಸಿಡಿಸಬಾರದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಹಸಿರು ಪಟಾಕಿಗಳಿಗೆ ಮಾತ್ರ ಅನುಮತಿ – ಕ್ಯೂಆರ್ ಕೋಡ್ ಪರಿಶೀಲಿಸಿ:

ರಾಜ್ಯದಲ್ಲಿ ಸಾಂಪ್ರದಾಯಿಕ ಹಾಗೂ ಅತಿ ಹೆಚ್ಚು ಮಾಲಿನ್ಯ ಉಂಟುಮಾಡುವ ಪಟಾಕಿಗಳ ಉತ್ಪಾದನೆ, ಸಂಗ್ರಹಣೆ, ಸಾಗಾಣಿಕೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕೇವಲ ಪರಿಸರ ಸ್ನೇಹಿ ‘ಹಸಿರು ಪಟಾಕಿ’ಗಳ (Green Crackers) ಮಾರಾಟ ಮತ್ತು ಬಳಕೆಗೆ ಮಾತ್ರ ಮುಕ್ತ ಅವಕಾಶ ನೀಡಲಾಗಿದೆ. ಸಾರ್ವಜನಿಕರು ಅಧಿಕೃತ ಮಾರಾಟಗಾರರಿಂದಲೇ ಪಟಾಕಿ ಖರೀದಿಸಬೇಕು ಹಾಗೂ ಪ್ಯಾಕೆಟ್‌ಗಳ ಮೇಲಿರುವ ಹಸಿರು ಪಟಾಕಿಗಳ ಅಧಿಕೃತ ಗುರುತು ಮತ್ತು ಕ್ಯೂಆರ್ ಕೋಡ್ (QR Code) ಅನ್ನು ಪರಿಶೀಲಿಸುವುದು ಕಡ್ಡಾಯವಾಗಿದೆ. ಹಸಿರು ಪಟಾಕಿಗಳ ಹೆಸರಿನಲ್ಲಿ ನಕಲಿ ಪಟಾಕಿ ಮಾರಾಟ ಮಾಡುವ ಮಳಿಗೆಗಳ ಮೇಲೆ ದಾಳಿ ನಡೆಸಿ ಕಾನೂನು ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಠಿಣ ನಿಗಾ ಮತ್ತು ಜಾಗೃತಿ:

ನಿಯಮ ಉಲ್ಲಂಘಿಸುವವರ ವಿರುದ್ಧ ದಂಡಾತ್ಮಕ ಹಾಗೂ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು, ಪೊಲೀಸ್ ಇಲಾಖೆ ಮತ್ತು ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನ ನೀಡಲಾಗಿದೆ. ಜಿಲ್ಲಾ ಮಟ್ಟದಲ್ಲಿ ‘ಜಿಲ್ಲಾ ಪರಿಸರ ಸಂರಕ್ಷಣಾ ಪ್ರಾಧಿಕಾರ’ ಶಬ್ದ ಮಾಲಿನ್ಯ ನಿಯಂತ್ರಣದ ಜವಾಬ್ದಾರಿ ಹೊರಲಿದ್ದು, ಕ್ರಿಯಾ ಯೋಜನೆಗಳನ್ನು ರೂಪಿಸಲಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ‘ಪಟಾಕಿ ರಹಿತ ದೀಪಾವಳಿ’ ಕುರಿತು ವ್ಯಾಪಕ ಜಾಗೃತಿ ಮೂಡಿಸಲಾಗುತ್ತಿದೆ.

“ಪಟಾಕಿಗಳಿಂದ ಉಂಟಾಗುವ ಮಾಲಿನ್ಯವು ಮಕ್ಕಳು, ವೃದ್ಧರು, ಅನಾರೋಗ್ಯ ಪೀಡಿತರು ಹಾಗೂ ಮೂಕ ಪ್ರಾಣಿಗಳ ಮೇಲೆ ತೀವ್ರ ಜೈವಿಕ ಪರಿಣಾಮ ಬೀರುತ್ತದೆ. ಈ ದೀಪಾವಳಿಯನ್ನು ಜವಾಬ್ದಾರಿಯುತವಾಗಿ ಆಚರಿಸೋಣ. ಹಸಿರು ಪಟಾಕಿಗಳನ್ನು ಮಾತ್ರ ಬಳಸಿ ವಾಯು ಮತ್ತು ಶಬ್ದ ಮಾಲಿನ್ಯ ಮುಕ್ತವಾದ ಆರೋಗ್ಯಕರ ಪರಿಸರವನ್ನು ಕಾಪಾಡೋಣ” ಎಂದು ಸಚಿವ ರಾಮಲಿಂಗಾ ರೆಡ್ಡಿ ಅವರು ತಮ್ಮ ಸಂದೇಶದಲ್ಲಿ ಕೋರಿದ್ದಾರೆ.

 

 

Related Articles

Comments (0)

Leave a Comment