ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆ: ಪರಿಷ್ಕೃತ ದರ ಜಾರಿಗೆ ಸರ್ಕಾರದ ಕಟ್ಟುನಿಟ್ಟಿನ ಸೂಚನೆ
- by Suddi Loka
- November 11, 2026
- 3 Views
ಬೆಂಗಳೂರು: ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ (NPPA) ಕ್ಯಾನ್ಸರ್ ಔಷಧಗಳ ಬೆಲೆಯನ್ನು ಪರಿಷ್ಕರಿಸಿರುವ ಹಿನ್ನೆಲೆಯಲ್ಲಿ, ರಾಜ್ಯದ ಎಲ್ಲ ಔಷಧಾಲಯಗಳು, ಆಸ್ಪತ್ರೆಗಳು, ನರ್ಸಿಂಗ್ ಹೋಮ್ಗಳು ಮತ್ತು ಔಷಧ ತಯಾರಕರು ಹೊಸ ದರಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕರ್ನಾಟಕ ಸರ್ಕಾರ ಸೂಚಿಸಿದೆ.
ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ನಡೆಸಿದ ಪರಿಶೀಲನೆಯಲ್ಲಿ 253 ಕ್ಯಾನ್ಸರ್ ಔಷಧಗಳ ಖರೀದಿ ವೆಚ್ಚ ಮತ್ತು ಗರಿಷ್ಠ ಚಿಲ್ಲರೆ ಬೆಲೆ (MRP) ನಡುವೆ ಭಾರಿ ವ್ಯತ್ಯಾಸ ಕಂಡುಬಂದಿತ್ತು. ಈ ಕುರಿತು ರಾಜ್ಯ ಸರ್ಕಾರ ಕೇಂದ್ರದ ಗಮನ ಸೆಳೆದಿತ್ತು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಪರಿಶೀಲನಾ ವರದಿಯ ಆಧಾರದ ಮೇಲೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿರ್ದೇಶನದಂತೆ ಸೆಪ್ಟೆಂಬರ್ 23ರಂದು ಕೇಂದ್ರ ಆರೋಗ್ಯ ಸಚಿವಾಲಯ ಮತ್ತು NPPAಗೆ ಪತ್ರ ಬರೆದು ಕ್ರಮಕ್ಕೆ ಮನವಿ ಮಾಡಲಾಗಿತ್ತು. ಇದರ ಬೆನ್ನಲ್ಲೇ NPPA ಸುಮಾರು 137 ಕ್ಯಾನ್ಸರ್ ಔಷಧಗಳಿಗೆ ಸಂಬಂಧಿಸಿದ 1,366 ಉತ್ಪನ್ನಗಳ ಬೆಲೆಗಳನ್ನು ಪರಿಷ್ಕರಿಸಿದ್ದು, ಹೊಸ ದರಗಳು ನವೆಂಬರ್ 9ರಿಂದ ಜಾರಿಗೆ ಬಂದಿವೆ.

400 ಮಿ.ಗ್ರಾಂ.ನ ಬೆವಾಸಿಜುಮಾಬ್ (Bevacizumab) ಇಂಜೆಕ್ಷನ್ ಬೆಲೆಯನ್ನು ₹42,000ರಿಂದ ₹13,136ಕ್ಕೆ ಇಳಿಸಲಾಗಿದೆ. ಪಾಲ್ಬೋಸಿಕ್ಲಿಬ್ (Palbociclib) ಔಷಧದ ಒಂದು ಚಿಕಿತ್ಸಾ ಚಕ್ರದ ವೆಚ್ಚವನ್ನು ₹9,787ರಿಂದ ₹3,147ಕ್ಕೆ ಕಡಿತಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಪರಿಷ್ಕೃತ MRPಗಿಂತ ಹೆಚ್ಚಿನ ಹಣವನ್ನು ರೋಗಿಗಳಿಂದ ವಸೂಲಿ ಮಾಡಬಾರದು. ಹೆಚ್ಚುವರಿ ಹಣ ಪಡೆದಿದ್ದರೆ ಅದನ್ನು ಕಾನೂನಿನ ಪ್ರಕಾರ ಮರುಪಾವತಿಸಬೇಕು ಎಂದು ಔಷಧ ತಯಾರಕರು, ವಿತರಕರು, ಔಷಧಾಲಯಗಳು ಮತ್ತು ಆಸ್ಪತ್ರೆಗಳಿಗೆ ಸೂಚಿಸಲಾಗಿದೆ. ಔಷಧ ಪೂರೈಕೆಯಲ್ಲಿ ಕೊರತೆಯಾಗದಂತೆ ನೋಡಿಕೊಳ್ಳಲೂ ನಿರ್ದೇಶನ ನೀಡಲಾಗಿದೆ.
ರೋಗಿಗಳಿಗೆ ನೀಡುವ ಬಿಲ್ಗಳಲ್ಲಿ ಔಷಧದ ಖರೀದಿ ವೆಚ್ಚ ಮತ್ತು MRP ನಮೂದಿಸುವುದು ಕಡ್ಡಾಯ. ನಿಯಮ ಉಲ್ಲಂಘಿಸುವವರ ವಿರುದ್ಧ ‘ಔಷಧ (ಬೆಲೆ ನಿಯಂತ್ರಣ) ಆದೇಶ, 2013’ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದವರು ತಿಳಿಸಿದ್ದಾರೆ.
ರೋಗಿಗಳು ‘ಫಾರ್ಮಾ ಸಹಿ ದಾಮ್’ ಆ್ಯಪ್ ಅಥವಾ NPPA ವೆಬ್ಸೈಟ್ನಲ್ಲಿ ಔಷಧಗಳ ಬೆಲೆ ಪರಿಶೀಲಿಸಬಹುದು. ಅಧಿಕ ದರ ವಸೂಲಿ ಅಥವಾ ಔಷಧ ನಿರಾಕರಣೆ ಕುರಿತು NPPA ಸಹಾಯವಾಣಿ 1800-111-255ಕ್ಕೆ ದೂರು ಸಲ್ಲಿಸಬಹುದು ಎಂದು ಸಚಿವರು ತಿಳಿಸಿದ್ದಾರೆ.


Comments (0)