ಆರ್‌ಸಿಬಿ ದಿಗ್ವಿಜಯ: ಗುಜರಾತ್ ತಂಡವನ್ನು ಮಣಿಸಿ ಹೆಮ್ಮೆಯಿಂದ ಐಪಿಎಲ್ ಫೈನಲ್‌ಗೆ ಲಗ್ಗೆ ಇಟ್ಟ ಬೆಂಗಳೂರು!
- by Suddi Team
- May 26, 2026
- 131 Views
ಕ್ರೀಡಾ ಡೆಸ್ಕ್: ಕ್ರಿಕೆಟ್ ಪ್ರೇಮಿಗಳ ಬಹುದಿನಗಳ ಕನಸು ನನಸಾಗುವ ಸಮಯ ಹತ್ತಿರ ಬಂದಿದೆ. ಐಪಿಎಲ್ 2026ರ ಅತ್ಯಂತ ರೋಚಕ ಕ್ವಾಲಿಫೈಯರ್ 1 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಗುಜರಾತ್ ಟೈಟನ್ಸ್ ವಿರುದ್ಧ 92 ರನ್‌ಗಳ ಬೃಹತ್ ಜಯ ದಾಖಲಿಸಿ, ಹೆಮ್ಮೆಯಿಂದ ನೇರವಾಗಿ ಮಹಾ ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆದುಕೊಂಡಿದೆ. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲೂ ಸಾಂಘಿಕ ಪ್ರದರ್ಶನ ನೀಡುವ ಮೂಲಕ ಎದುರಾಳಿ ತಂಡವನ್ನು ಧೂಳೀಪಟ ಮಾಡಿತು.
ಇದರೊಂದಿಗೆ ಮೇ 31ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪ್ರಶಸ್ತಿ ಜಿದ್ದಾಜಿದ್ದಿನ ಫೈನಲ್ ಸಮರಕ್ಕೆ ಆರ್‌ಸಿಬಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.
ಪಾಟಿದಾರ್ ಸಿಡಿಲಬ್ಬರ: ಬೆಂಗಳೂರಿಗೆ 254 ರನ್‌ಗಳ ಹಿಮಾಲಯದ ಮೊತ್ತ!
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಸವಾಲು ಪಡೆದ ಆರ್‌ಸಿಬಿ ಆರಂಭದಿಂದಲೇ ಅಬ್ಬರಿಸಿತು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಜತ್ ಪಾಟಿದಾರ್ ಗುಜರಾತ್ ಬೌಲರ್‌ಗಳನ್ನು ಮೈದಾನದ ಮೂಲೆ ಮೂಲೆಗೂ ಅಟ್ಟಿದರು. ಕೇವಲ 33 ಎಸೆತಗಳನ್ನು ಎದುರಿಸಿದ ಪಾಟಿದಾರ್ 9 ಭೀಕರ ಸಿಕ್ಸರ್ ಹಾಗೂ 5 ಬೌಂಡರಿಗಳ ನೆರವಿನಿಂದ ಅಜೇಯ 93 ರನ್ ಚಚ್ಚಿದರು. ಪ್ಲೇ-ಆಫ್‌ನ ಅತ್ಯಂತ ಒತ್ತಡದ ಪಂದ್ಯದಲ್ಲಿ ಇಂತಹ ಸ್ಫೋಟಕ ಪ್ರದರ್ಶನ ನೀಡುವ ಮೂಲಕ ಪಾಟಿದಾರ್ ಪಂದ್ಯದ ಚಿತ್ರಣವನ್ನೇ ಬದಲಿಸಿದರು.
ಇದಕ್ಕೂ ಮುನ್ನ ಆರಂಭಿಕರಾಗಿ ಬಂದ ವಿರಾಟ್ ಕೊಹ್ಲಿ 25 ಎಸೆತಗಳಲ್ಲಿ 43 ರನ್ (5 ಬೌಂಡರಿ, 1 ಸಿಕ್ಸರ್) ಗಳಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರೆ, ದೇವದತ್ ಪಡಿಕ್ಕಲ್ 30 ರನ್ ಕೊಡುಗೆ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ಕೃಣಾಲ್ ಪಾಂಡ್ಯ 28 ಎಸೆತಗಳಲ್ಲಿ 43 ರನ್ ಸಿಡಿಸಿ ಪಾಟಿದಾರ್ ಅವರಿಗೆ ಅತ್ಯುತ್ತಮ ಸಾಥ್ ನೀಡಿದರು. ಇದರ ಫಲವಾಗಿ ಬೆಂಗಳೂರು ತಂಡವು ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ nಷ್ಟಕ್ಕೆ 254 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು.
ತತ್ತರಿಸಿದ ಗುಜರಾತ್ ಬ್ಯಾಟಿಂಗ್; ಬೆಂಗಳೂರು ಬೌಲರ್‌ಗಳ ದರ್ಬಾರ್!
255 ರನ್‌ಗಳ ದೈತ್ಯ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟನ್ಸ್ ತಂಡಕ್ಕೆ ಬೆಂಗಳೂರು ಬೌಲರ್‌ಗಳು ಪವರ್‌ಪ್ಲೇನಲ್ಲೇ ಮರಣಶಾಸನ ಬರೆದರು. ನಿಖರ ಲೈನ್ ಅಂಡ್ ಲೆಂತ್ ದಾಳಿಗೆ ತತ್ತರಿಸಿದ ಗುಜರಾತ್, ಪವರ್‌ಪ್ಲೇ ಮುಕ್ತಾಯದ ವೇಳೆಗೆ ಕೇವಲ 51 ರನ್‌ಗಳಿಗೆ ತನ್ನ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡು ಭಾರೀ ಆಘಾತ ಅನುಭವಿಸಿತು.
ಪೆವಿಲಿಯನ್ ಪರೇಡ್: ನಾಯಕ ಶುಭಮನ್ ಗಿಲ್ (2 ರನ್) ಅವರನ್ನು ಭುವನೇಶ್ವರ್ ಕುಮಾರ್ ಕ್ಲೀನ್ ಬೌಲ್ಡ್ ಮಾಡಿದರೆ, ಜೋಸ್ ಬಟ್ಲರ್ (29 ರನ್) ಜಾಕೋಬ್ ಡಫಿಗೆ ವಿಕೆಟ್ ಒಪ್ಪಿಸಿದರು. ಸಾಯ್ ಸುದರ್ಶನ್ (14 ರನ್) ವಿಚಿತ್ರ ರೀತಿಯಲ್ಲಿ ಹಿಟ್ ವಿಕೆಟ್ ಆಗಿ ಔಟಾದರು.
ತೇವಾಟಿಯಾ ಏಕಾಂಗಿ ಹೋರಾಟ: ಮಧ್ಯಮ ಕ್ರಮಾಂಕದಲ್ಲಿ ರಾಹುಲ್ ತೇವಾಟಿಯಾ 43 ಎಸೆತಗಳಲ್ಲಿ 68 ರನ್ (8 ಬೌಂಡರಿ, 4 ಸಿಕ್ಸರ್) ಚಚ್ಚಿ ತಂಡಕ್ಕೆ ಆಸರೆಯಾಗಲು ಯತ್ನಿಸಿದರಾದರೂ, ಉಳಿದ ಆಟಗಾರರಿಂದ ಯಾವುದೇ ಬೆಂಬಲ ಸಿಗಲಿಲ್ಲ.
ಬೆಂಗಳೂರು ಪರ ಘಾತಕ ಬೌಲಿಂಗ್ ಪ್ರದರ್ಶಿಸಿದ ಜಾಕೋಬ್ ಡಫಿ 3 ವಿಕೆಟ್ ಪಡೆದು ಮಿಂಚಿದರೆ, ಭುವನೇಶ್ವರ್ ಕುಮಾರ್, ರಸಿಖ್ ಸಲಾಮ್ ಮತ್ತು ಕೃಣಾಲ್ ಪಾಂಡ್ಯ ತಲಾ 2 ವಿಕೆಟ್ ಕಸಿದು ಗುಜರಾತ್ ತಂಡವನ್ನು 19.3 ಓವರ್‌ಗಳಲ್ಲಿ 162 ರನ್‌ಗಳಿಗೆ ಆಲೌಟ್ ಮಾಡಿದರು. 92 ರನ್‌ಗಳ ಈ ಐತಿಹಾಸಿಕ ಜಯದೊಂದಿಗೆ ಬೆಂಗಳೂರು ತಂಡವು ರಾಜಾರೋಷವಾಗಿ ಫೈನಲ್ ಅಖಾಡಕ್ಕೆ ಪ್ರವೇಶ ಪಡೆದಿದೆ.
Related Articles
Thank you for your comment. It is awaiting moderation.


Comments (0)