ಚಿರತೆ ದಾಳಿಗೆ ಬಲಿಯಾದ ಮಾಗಡಿ ವೃದ್ಧೆ ಕುಟುಂಬಕ್ಕೆ 7.5 ಲಕ್ಷ ರೂ. ಪರಿಹಾರ ಪತ್ರ ವಿತರಿಸಿದ ಡಾ. ಅಶ್ವತ್ಥನಾರಾಯಣ
- by Suddi Team
- May 22, 2020
- 139 Views
ರಾಮನಗರ: ಮಾಗಡಿ ತಾಲೂಕಿನಲ್ಲಿ ಚಿರತೆ ದಾಳಿಗೆ ಬಲಿಯಾದ ಗಂಗಮ್ಮ (68) ಅವರ ಕುಟುಂಬದವರಿಗೆ ಸಾಂತ್ವನ ಹೇಳಿರುವ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ, 7.5 ಲಕ್ಷ ರೂ. ಪರಿಹಾರದ ಆದೇಶ ಪತ್ರವನ್ನು ಅವರಿಗೆ ಹಸ್ತಾಂತರಿಸಿದರು.
ಮಾಗಡಿಯ ಕೊತ್ತಗೊಂಡನಹಳ್ಳಿಯ ಗಂಗಮ್ಮ ಅವರ ಮನೆಗೆ ಶುಕ್ರವಾರ ಭೇಟಿ ನೀಡಿದ ಡಾ. ಅಶ್ವತ್ಥನಾರಾಯಣ, ಅವರ ಕುಟುಂಬ ಸದಸ್ಯರೊಂದಿಗೆ ಮಾತನಾಡಿ ಸಮಾಧಾನ ಹೇಳಿದರು. ಪರಿಹಾರ ಹಣ ಬಿಡುಗಡೆ ಸಂಬಂಧ ಅರಣ್ಯ ಇಲಾಖೆಯ ಜ್ಞಾಪನಾ ಪತ್ರವನ್ನು ವಿತರಿಸಿ, ಎರಡು ಮೂರು ದಿನದೊಳಗೆ ಹಣ ಆನ್‌ಲೈನ್ ಮೂಲಕ ಖಾತೆಗೆ ಜಮೆ ಆಗಲಿದೆ ಎಂದು ಕುಟುಂಬದವರಿಗೆ ಭರವಸೆ ನೀಡಿದರು.
ಗಂಗಮ್ಮ ಅವರನ್ನು ಚಿರತೆ ಕೊಂದುಹಾಕಿದ ಸ್ಥಳಕ್ಕೆ ಭೇಟಿ ನೀಡಿದ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದರು. ಜತೆಯಲ್ಲಿದ್ದ ಪರಿಸರ ತಜ್ಞ ಸಂಜಯ್ ಗುಬ್ಬಿ ಚಿರತೆಯ ಚಲನ ವಲನದ ಬಗ್ಗೆ ಹೆಚ್ಚಿನ ಮಾಹಿತಿ ಒದಗಿಸಿದರು.
“ಗಂಗಮ್ಮ ಮೇಲೆ ದಾಳಿ ಮಾಡಿದ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತ ಎಲ್ಲಾ ಪ್ರಯತ್ನ ಮಾಡುತ್ತಿದೆ. ಈಗಾಗಲೇ 15 ಬೋನುಗಳನ್ನು ಇಟ್ಟು ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಸನ್ನದ್ಧ ಸ್ಥಿತಿಯಲ್ಲಿ ಇದ್ದಾರೆ. ಚಿರತೆಯ ಚಲನವಲನ ಗಮನಿಸಲು ಡ್ರೋಣ್ ಬಳಕೆ ಮಾಡಲಾಗುವುದು. ಜನತೆ ಆತಂಕ ಪಡುವ ಅಗತ್ಯವಿಲ್ಲ,” ಎಂದು ಡಾ. ಅಶ್ವತ್ಥನಾರಾಯಣ ಹೇಳಿದರು.
Related Articles
Thank you for your comment. It is awaiting moderation.


Comments (0)