ರೈತರ ಬಗ್ಗೆ ಮೃದು ಧೋರಣೆ ಇರಲಿ: ಬ್ಯಾಂಕರ್ ಗಳಿಗೆ ಸಿಎಂ ಸಲಹೆ
- by Suddi Team
- June 14, 2019
- 88 Views
ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಸಾಲ ಮನ್ನಾ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ಬ್ಯಾಂಕರುಗಳೊಂದಿಗೆ ಚರ್ಚೆ ನಡೆಸಿದರು. ಈ ಸಭೆಯಲ್ಲಿ 14 ಬ್ಯಾಂಕುಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಸಾಲ ಮನ್ನಾ ಯೋಜನೆಯಡಿ 4 ವರ್ಷಗಳಲ್ಲಿ ಹಂತ ಹಂತವಾಗಿ ಬ್ಯಾಂಕುಗಳಿಗೆ ಮೊತ್ತ ಪಾವತಿಸುವುದಾಗಿ ತಿಳಿಸಲಾಗಿತ್ತು. ಆದರೆ ಒಂದೇ ವರ್ಷದೊಳಗಾಗಿ ಎಲ್ಲ ಅರ್ಹ ಖಾತೆಗಳಿಗೆ ಸರ್ಕಾರದ ಮಾರ್ಗಸೂಚಿಯನ್ವಯ ಸಂಪೂರ್ಣ ಮೊತ್ತ ಪಾವತಿ ಮಾಡಲಾಗಿದೆ. ಆದ್ದರಿಂದ ಈ ರೈತರಿಗೆ ಮತ್ತೆ ಬೆಳೆ ಸಾಲ ಪಡೆಯಲು ಅವಕಾಶ ಕಲ್ಪಿಸಬೇಕು ಎಂದು ಮುಖ್ಯಮಂತ್ರಿಗಳು ಬ್ಯಾಂಕರುಗಳಿಗೆ ತಿಳಿಸಿದರು.
ಕಳೆದ 15 ವರ್ಷಗಳಲ್ಲಿ ಕರ್ನಾಟಕ 12 ವರ್ಷ ಬರ ಪರಿಸ್ಥಿತಿಯನ್ನು ಎದುರಿಸಿದೆ. ರೈತರು ಬಹಳ ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಬ್ಯಾಂಕುಗಳು ರೈತರ ಬಗ್ಗೆ ಸ್ವಲ್ಪ ಮೃದು ಧೋರಣೆಯನ್ನು ಅನುಸರಿಸುವಂತೆ ಮುಖ್ಯಮಂತ್ರಿಗಳು ಬ್ಯಾಂಕರುಗಳಿಗೆ ಸಲಹೆ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಲೀಡ್ಬ್ಯಾಂಕ್ ಮುಖ್ಯಸ್ಥರು, ಬ್ಯಾಂಕುಗಳೂ ರೈತರ ಬಗ್ಗೆ ಕಾಳಜಿ ವಹಿಸುವುದು ಎಂದು ತಿಳಿಸಿದರು.
ಮಾಧ್ಯಮಗಳಲ್ಲಿ ರೈತರ ಸಾಲ ಖಾತೆಯಿಂದ ಮನ್ನಾ ಮೊತ್ತ ಹಿಂಪಡೆದ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಸರ್ಕಾರದ ಮಾರ್ಗಸೂಚಿಯನ್ವಯ ಫಲಾನುಭವಿಗಳನ್ನು ಗುರುತಿಸುವಾಗ ಕೆಲವು ಬ್ಯಾಂಕುಗಳು ತಪ್ಪು ಗ್ರಹಿಕೆಯಿಂದ ಲೋಪವುಂಟಾಗಿದೆ. ಇದನ್ನು ಕೂಡಲೇ ಸರಿಪಡಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.
ಇಂದು ಎನ್ಪಿಎ ಸಾಲಗಳ ಮನ್ನಾ ಮೊತ್ತ ಬಿಡುಗಡೆಗೆ ಸರ್ಕಾರಿ ಆದೇಶ ಹೊರಡಿಸಿದ್ದು, ಈ ತಿಂಗಳೊಳಗಾಗಿ ಎಲ್ಲ ಬ್ಯಾಂಕುಗಳ ಎಲ್ಲ ಅರ್ಹ ಫಲಾನುಭವಿಗಳ ಸಾಲ ಖಾತೆಗೆ ಸಾಲ ಮನ್ನಾ ಮೊತ್ತ ಬಿಡುಗಡೆ ಮಾಡಲು ಕ್ರಮ ವಹಿಸುವಂತೆ ಮನವಿ ಮಾಡಲಾಯಿತು.
ಈ ಯೋಜನೆಯಲ್ಲಿ ಹಗಲು ರಾತ್ರಿ ಶ್ರಮಿಸಿದ, ಅಧಿಕಾರಿಗಳು, ಬ್ಯಾಂಕಿನ ಅಧಿಕಾರಿಗಳು, ಸಿಬ್ಬಂದಿಯನ್ನು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಅಭಿನಂದಿಸಿದರು.
ಸಹಕಾರ ಸಚಿವ ಬಂಡೆಪ್ಪಾ ಕಾಶೆಂಪೂರ, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿ, ಕಾರ್ಯದರ್ಶಿ ಡಾ.ಎಸ್. ಸೆಲ್ವಕುಮಾರ್, ಭೂದಾಖಲೆಗಳು ಮತ್ತು ಭೂಮಾಪನಾ ಇಲಾಖೆ ಆಯುಕ್ತ ಮುನೀಶ್ ಮೌದ್ಗಿಲ್ ಮತ್ತಿತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
Related Articles
Thank you for your comment. It is awaiting moderation.


Comments (0)