ಹೆಂಡತಿಯ ದೇಹ ನಜ್ಜುಗುಜ್ಜಾದರೂ ಕಣ್ಣುಗಳನ್ನು ಜೀವಂತವಾಗಿಟ್ಟ ಪತಿ! ದುಬಾರೆ ದುರಂತದ ನಡುವೆ ಮಾನವೀಯತೆ ಮೆರೆದ ಜೋಯೆಲ್

ಮಡಿಕೇರಿ: ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣವಾದ ದುಬಾರೆ ಆನೆ ಶಿಬಿರದಲ್ಲಿ ಸಾಕಾನೆಗಳ ಹಠಾತ್ ಜಗಳಕ್ಕೆ ಸಿಲುಕಿ ತಮಿಳುನಾಡು ಮೂಲದ ಪ್ರವಾಸಿ ಮಹಿಳೆ ಜಿನ್ಶು (33) ದಾರುಣವಾಗಿ ಸಾವನ್ನಪ್ಪಿದ ಬೆನ್ನಲ್ಲೇ, ಅವರ ಪತಿ ಜೋಯೆಲ್ ಇಡೀ ಸಮಾಜವೇ ಹೆಮ್ಮೆ ಪಡುವಂತಹ ಭಾವುಕ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಹೆಂಡತಿಯನ್ನು ಕಳೆದುಕೊಂಡ ತೀವ್ರ ಆಘಾತ ಮತ್ತು ಕಣ್ಣೀರಿನ ನಡುವೆಯೂ, ಅವರು ಪತ್ನಿಯ ಕಣ್ಣುಗಳನ್ನು ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ನನ್ನ ಪತ್ನಿ ಬೇರೆಯವರ ಕಣ್ಣಿನ ಮೂಲಕ ಜಗತ್ತು ನೋಡಲಿ!

ದುರಂತದ ಬಳಿಕ ಆಸ್ಪತ್ರೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಪತಿ ಜೋಯೆಲ್, “ನನ್ನ ಪತ್ನಿಯನ್ನು ಆನೆಗಳ ದಾಳಿಯಿಂದ ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆನೆಯ ಭೀಕರ ತುಳಿತಕ್ಕೆ ಆಕೆಯ ಇಡೀ ದೇಹ ನಜ್ಜುಗುಜ್ಜಾಗಿತ್ತು. ವೈದ್ಯರ ಬಳಿ ಚರ್ಚಿಸಿದಾಗ ದೇಹದ ಇತರ ಪ್ರಮುಖ ಅಂಗಾಂಗಗಳನ್ನು ದಾನ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಇರುವುದಾಗಿ ತಿಳಿಸಿದರು. ಆ ಕಾರಣಕ್ಕಾಗಿ ಕನಿಷ್ಠ ಆಕೆಯ ಕಣ್ಣುಗಳನ್ನಾದರೂ ದಾನ ಮಾಡಲು ಒಪ್ಪಿಗೆ ನೀಡಿದೆ. ನನ್ನ ಪತ್ನಿ ಇನ್ನು ಮುಂದೆ ನಮ್ಮೊಂದಿಗಿಲ್ಲದಿದ್ದರೂ, ಬೇರೆಯವರ ಕಣ್ಣುಗಳ ಮೂಲಕ ಈ ಪ್ರಪಂಚವನ್ನು ನೋಡುತ್ತಾ ಬದುಕಿರಲಿ” ಎಂದು ಭಾವುಕರಾಗಿ ನುಡಿದಿದ್ದಾರೆ.

ಸುರಕ್ಷತಾ ಲೋಪದ ವಿರುದ್ಧ ಪತಿಯ ಆಕ್ರೋಶ

ಇದೇ ವೇಳೆ ಕಾವೇರಿ ನದಿ ತೀರದ ಭದ್ರತಾ ವ್ಯವಸ್ಥೆಯ ಬಗ್ಗೆ ಜೋಯೆಲ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ. “ಆನೆಗಳ ಕಾದಾಟ ನಡೆದು ನನ್ನ ಪತ್ನಿ ಕೆಳಗೆ ಬಿದ್ದ ತಕ್ಷಣ ರಕ್ಷಿಸಲು ಅಲ್ಲಿನ ಸಿಬ್ಬಂದಿ ಸಕಾಲದಲ್ಲಿ ಸ್ಪಂದಿಸಲಿಲ್ಲ. ಆಕೆಯ ಸ್ಥಿತಿ ಗಂಭೀರವಾಗಿದ್ದರೂ ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ವ್ಯವಸ್ಥೆಯನ್ನೂ ಕಲ್ಪಿಸಲಿಲ್ಲ. ಅಲ್ಲಿನ ನಿರ್ಲಕ್ಷ್ಯವೇ ನನ್ನ ಹೆಂಡತಿಯ ಸಾವಿಗೆ ಕಾರಣ” ಎಂದು ಆರೋಪಿಸಿದ್ದಾರೆ.

ಸದ್ಯ ಸರ್ಕಾರ ಮೃತರ ಕುಟುಂಬಕ್ಕೆ 20 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದು, ಇಲಾಖೆಯ ಲೋಪದೋಷಗಳ ಕುರಿತು ಉನ್ನತ ಮಟ್ಟದ ತನಿಖೆ ಪ್ರಗತಿಯಲ್ಲಿದೆ.

 

Related Articles

Comments (0)

Leave a Comment