ಪೂರೈಕೆ ಸರಪಳಿ ವೈವಿಧ್ಯೀಕರಣ; ಕಾಮನ್ವೆಲ್ತ್ ರಾಷ್ಟ್ರಗಳಿಗೆ ಜೈಶಂಕರ್ ಕರೆ
- by Suddi Loka
- November 6, 2026
- 3 Views
ಸೇಂಟ್ ಜಾನ್ಸ್: ಜಾಗತಿಕ ಪೂರೈಕೆ ಸರಪಳಿಗಳನ್ನು ಬಲಪಡಿಸಿ ವೈವಿಧ್ಯೀಕರಿಸುವ ಮೂಲಕ ಆರ್ಥಿಕ ಪಾಲುದಾರಿಕೆ ವಿಸ್ತರಿಸುವಂತೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಕಾಮನ್ವೆಲ್ತ್ ರಾಷ್ಟ್ರಗಳಿಗೆ ಕರೆ ನೀಡಿದ್ದಾರೆ.
ಆಂಟಿಗುವಾ ಮತ್ತು ಬಾರ್ಬುಡಾದ ಸೇಂಟ್ ಜಾನ್ಸ್ನಲ್ಲಿ ನಡೆದ ಕಾಮನ್ವೆಲ್ತ್ ಶೃಂಗಸಭೆಯ ಅಂಗವಾಗಿ ರಾಷ್ಟ್ರಗಳ ಮುಖ್ಯಸ್ಥರು ಮತ್ತು ಉದ್ಯಮ ನಾಯಕರ ಉಪಾಹಾರ ಸಭೆಯಲ್ಲಿ ಮಾತನಾಡಿದ ಅವರು, ವಿಶ್ವಾಸಾರ್ಹ ಹಾಗೂ ಕಡಿಮೆ ದೂರದ ವ್ಯಾಪಾರ ಮಾರ್ಗಗಳನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ಒತ್ತಿಹೇಳಿದರು.
ಹೆಚ್ಚಿನ ಸಂಪರ್ಕ ಕಾರಿಡಾರ್ಗಳು ವ್ಯಾಪಾರ ವೃದ್ಧಿಗೆ ನೆರವಾಗಲಿದ್ದು, ಸ್ಥಳೀಯ ವಿತರಣಾ ಜಾಲಗಳನ್ನು ಬಲಪಡಿಸಬೇಕು. ವೃತ್ತಿಪರ ತರಬೇತಿ ಮತ್ತು ಕೌಶಲ್ಯಾಭಿವೃದ್ಧಿಗೂ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ವಿಶ್ವದಾದ್ಯಂತ ಹರಡಿರುವ ಭಾರತೀಯ ಉದ್ಯಮ ಸಮುದಾಯ ಕಾಮನ್ವೆಲ್ತ್ಗೆ ಪ್ರಮುಖ ಆಸ್ತಿಯಾಗಿದೆ ಎಂದ ಅವರು, ಡಿಜಿಟಲ್ ತಂತ್ರಜ್ಞಾನವು ಆಡಳಿತದ ದಕ್ಷತೆ ಮತ್ತು ಆರ್ಥಿಕ ಬೆಳವಣಿಗೆಗೆ ವೇಗ ನೀಡಲಿದೆ ಎಂದು ತಿಳಿಸಿದರು.
ಅಂತರರಾಷ್ಟ್ರೀಯ ಸೌರ ಒಕ್ಕೂಟ ಹಾಗೂ ವಿಪತ್ತು ನಿರೋಧಕ ಮೂಲಸೌಕರ್ಯ ಒಕ್ಕೂಟದ ಉಪಕ್ರಮಗಳನ್ನು ಬಳಸಿಕೊಳ್ಳುವ ಮೂಲಕ ಹವಾಮಾನ ಬದಲಾವಣೆ ಎದುರಿಸಲು ಜಂಟಿ ಕ್ರಮಗಳನ್ನು ಬಲಪಡಿಸುವಂತೆಯೂ ಜೈಶಂಕರ್ ಕರೆ ನೀಡಿದರು.


Comments (0)