ಹಾರ್ಮುಜ್ ಜಲಸಂಧಿಯಲ್ಲಿ ಹಡಗು ಸಂಚಾರಕ್ಕೆ ಇರಾನ್–ಒಮನ್ ಕಸರತ್ತು

ಟೆಹರಾನ್: ಹಾರ್ಮುಜ್ ಜಲಸಂಧಿಯಲ್ಲಿ ಹಡಗು ಸಂಚಾರ ಪುನರಾರಂಭಿಸುವ ಕುರಿತು ಇರಾನ್ ಮತ್ತು ಒಮನ್ ಮಾತುಕತೆ ನಡೆಸಿವೆ. ಒಮನ್ ವಿದೇಶಾಂಗ ಸಚಿವ ಬದರ್ ಬಿನ್ ಹಮದ್ ಅಲ್ ಬುಸೈದಿ ಹಾಗೂ ಇರಾನ್ ಸಚಿವ ಅಬ್ಬಾಸ್ ಅರಘ್ಚಿ ದೂರವಾಣಿ ಮೂಲಕ ಚರ್ಚಿಸಿ, ಸುರಕ್ಷಿತ ನೌಕಾಯಾನ ಮತ್ತು ಪ್ರಾದೇಶಿಕ ಉದ್ವಿಗ್ನತೆ ತಗ್ಗಿಸುವ ಮಾರ್ಗಗಳ ಬಗ್ಗೆ ಸಮಾಲೋಚಿಸಿದ್ದಾರೆ.

ಅಂತರರಾಷ್ಟ್ರೀಯ ವ್ಯಾಪಾರ ಮತ್ತು ಇಂಧನ ಸಾಗಣೆಗೆ ಅಡೆತಡೆಯಿಲ್ಲದ ಸಮುದ್ರ ಮಾರ್ಗ ಕಲ್ಪಿಸುವುದು ಮಾತುಕತೆಯ ಉದ್ದೇಶವಾಗಿದೆ.

ಇದೇ ವೇಳೆ, ಹಾರ್ಮುಜ್ ಜಲಸಂಧಿಯಲ್ಲಿ ಎರಡು ಸೂಪರ್‌ಟ್ಯಾಂಕರ್‌ಗಳು ಸೇರಿದಂತೆ ಮೂರು ಹಡಗುಗಳಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಇರಾನ್ ರೆವಲ್ಯೂಷನರಿ ಗಾರ್ಡ್ ತಿಳಿಸಿದೆ. ಅನುಮತಿಯಿಲ್ಲದ ಮಾರ್ಗದಲ್ಲಿ ಸಾಗುತ್ತಿದ್ದ ತೈಲ ಟ್ಯಾಂಕರ್ ನೌಕಾ ಮೈನ್‌ಗೆ ಡಿಕ್ಕಿಯಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಆರೋಪಿಸಿದೆ.

ಬೆಂಕಿ ನಂದಿಸಲು ತೆರಳಿದ್ದ ಟಗ್‌ಬೋಟ್‌ನಲ್ಲೂ ಬೆಂಕಿ ಕಾಣಿಸಿಕೊಂಡಿದೆ. ಎರಡು ಡ್ರೋನ್‌ಗಳನ್ನು ನಿಯಂತ್ರಣಕ್ಕೆ ಪಡೆದು ಸುರಕ್ಷಿತವಾಗಿ ಇಳಿಸಲಾಗಿದೆ ಎಂದು ಇರಾನ್ ಹೇಳಿದೆ. ಮೈನ್ ಅಳವಡಿಸಿರುವ ಮಾರ್ಗದಲ್ಲಿ ಹಡಗು ಸಂಚಾರಕ್ಕೆ ಪ್ರೇರೇಪಿಸುವ ಮೂಲಕ ಅಮೆರಿಕ ವಿಮಾ ವೆಚ್ಚ ಹೆಚ್ಚಿಸುತ್ತಿದೆ ಎಂದೂ ಆರೋಪಿಸಿದೆ.

 

Related Articles

Comments (0)