ಮಲಬದ್ಧತೆಗೆ ರಾಮಬಾಣವಾದ ಸಜ್ಜೆ!
- by Suddi Team
 - July 1, 2018
 - 281 Views
 
ಸಜ್ಜೆಯು ಪ್ರಮುಖ ಸಿರಿ ಧಾನ್ಯಗಳಲ್ಲೊಂದು. ರುಚಿಯಾದ ಆಹಾರದ ಜೊತೆ ಉತ್ತಮ ಆರೋಗ್ಯದ ಗುಟ್ಟನ್ನು ಹೊಂದಿದೆ. ಕ್ಯಾಲ್ಸಿಯಂ ಆಗರವಾಗಿರುವ ಸಜ್ಜೆ ಸೇವನೆಯಿಂದ ಮಲಬದ್ಧತೆ ನಿವಾರಣೆ ಯಾಗುತ್ತದೆ.
ಬೆಳೆಯುವ ವಿಧಾನ
ಸಜ್ಜೆಗೆ ಹೆಚ್ಚು ನೀರಿನ ಅಗತ್ಯವಿಲ್ಲ. ಮಳೆಯಾಶ್ರಿತ ಪ್ರದೇಶದಲ್ಲಿ ಬೆಳೆಯಬಹುದಾಗಿದೆ. ಬಿತ್ತಿದ ಮೂರುವರೆ ತಿಂಗಳಿಂದ ನಾಲ್ಕು ತಿಂಗಳೊಳಗೆ ಫಸಲು ಕೈಗೆ ಬರುತ್ತದೆ. ಸಾಮಾನ್ಯವಾಗಿ ಎಲ್ಲ ವಿಧದ ಮಣ್ಣಿನಲ್ಲೂ ಬೆಳೆಯಬಹುದಾಗಿದ್ದು. ಅದರಲ್ಲೂ ಮುಖ್ಯವಾಗಿ ಕಡಿಮೆ ಫಲವತ್ತತೆ ಇರುವ ಮಣ್ಣಿನಲ್ಲಿ ಬೆಳೆಯಬಹುದಾಗಿದೆ.
ಉಪಯೋಗ
ಸಜ್ಜೆಯಲ್ಲಿ ಬಹಳಷ್ಟು ಔಷಧಿಯ ಗುಣಗಳಿದ್ದು, ಮುಖ್ಯವಾಗಿ ಮಲಬದ್ಧತೆ ನಿವಾರಣೆಗೆ ಸಜ್ಜೆ ಅತ್ಯುತ್ತಮ ಔಷಧಿಯಾಗಿದೆ. ಅಲ್ಲದೆ, ಸಕ್ಕರೆ ಕಾಯಿಲೆ, ರಕ್ತದೊತ್ತಡ ನಿಯಂತ್ರಣಕ್ಕೂ ಸಹಕಾರಿಯಾಗಿದೆ. ಪ್ರೊಟೀನ್, ನಾರು ಮತ್ತು ಕನಿಜಾಂಶಗಳ ಆಗರವಾಗಿದ್ದು ಬೊಜ್ಜನ್ನು ನಿಯಂತ್ರಿಸುವಲ್ಲಿ ಬಹಳ ಪರಿಣಾಮಕಾರಿಯಾಗಿದೆ. ಮಹಿಳೆ ಮತ್ತು ಮಕ್ಕಳಲ್ಲಿ ಕಾಣುವ ನಿತ್ರಾಣ ಮತ್ತು ರಕ್ತಹೀನತೆಗೆ ಇದು ರಾಮಬಾಣವಾಗಿದೆ.
ಸಜ್ಜೆಯಿಂದ ತಯಾರಿಸುವ ಆಹಾರಗಳಲ್ಲಿ ಪ್ರಮುಖವಾದದ್ದು ರೊಟ್ಟಿ ಮತ್ತು ಇಡ್ಲಿ.
ಸಜ್ಜೆ ರೊಟ್ಟಿ ಮಾಡಲು ಬೇಕಾಗುವ ಪದಾರ್ಥಗಳು
ಸಜ್ಜೆ ಹಿಟ್ಟು – 2 ಕಪ್
ನೀರು – 2 ಕಪ್
ಉಪ್ಪು – 1/4 ಚಮಚ
ಅರಿಶಿಣ – 1/4 ಚಮಚ
ಕರಿ ಮತ್ತು ಬಿಳಿ ಎಳ್ಳು – 1 ಟೀ ಚಮಚ
ಮಾಡುವ ವಿಧಾನ
ಅಗಲವಾದ ಪಾತ್ರೆಯಲ್ಲಿ ಒಂದೂವರೆ ಕಪ್ ನಷ್ಟು ಸಜ್ಜೆ ಹಿಟ್ಟನ್ನು ತೆಗೆದುಕೊಳ್ಳಿ. ಅರ್ಧ ಕಪ್ ನೀರನ್ನು ಕುದಿಯಲು ಇಡಿ. ಕುದಿ ಬಂದ ಮೇಲೆ ಹಿಟ್ಟಿನ ನಡುವೆ ಜಾಗ ಮಾಡಿ ನೀರು ಹಾಕಿ, ಒಂದು ತಟ್ಟೆ ಮುಚ್ಚಿ ಸ್ವಲ್ಪ ಹೊತ್ತು ಇಡಿ. ಆಮೇಲೆ ಉದ್ದ ಚಮಚದಿಂದ ಹಿಟ್ಟು ನೀರು ಒಂದಾಗುವಂತೆ ತಿರುಗಿಸಿ, ಮುದ್ದೆಯ ಹಾಗೆ ಬರುತ್ತೆ. ಇದಕ್ಕೆ ಸ್ವಲ್ಪ ಒಣ ಹಿಟ್ಟು ಮತ್ತು ಸ್ವಲ್ಪ ತಣ್ಣೀರು ಸೇರಿಸಿ. ಉಪ್ಪು ಮತ್ತು ಅರಿಶಿಣ ಹಾಕಿ ಚೆನ್ನಾಗಿ ನಾದಿ, ರೊಟ್ಟಿ ತಟ್ಟಿರಿ. ಮೇಲೆ ಎಳ್ಳು ಉದುರಿಸಿ ಇನ್ನೊಮ್ಮೆ ತಟ್ಟಿ, ಬಿಸಿ ತವೆ ಮೇಲೆ ಹಾಕಿ. ಒಂದು ಬಟ್ಟೆ ತುಂಡನ್ನು ತಣ್ಣೀರಿನಲ್ಲಿ ಅದ್ದಿ ರೊಟ್ಟಿಯ ಮೇಲೆ ಸವರಿ, ನೀರು ಆರಿದ ನಂತರ ತಿರುವಿ ಹಾಕಿ ಎರಡೂ ಬದಿ ಬೇಯಿಸಿರಿ. ಈಗ ಸಜ್ಜೆ ರೊಟ್ಟಿ ತಯಾರು.
ಸಜ್ಜೆ ರೊಟ್ಟಿಯನ್ನು ಬದನೆಕಾಯಿ ಎಣ್ಣೆಗಾಯಿ ಅಥವಾ ಯಾವುದೇ ಪಲ್ಯ, ಮೊಸರು ಚಟ್ನಿ ಪುಡಿಯೊಂದಿಗೆ ಸವಿಯಬಹುದು.
Related Articles
                            Thank you for your comment. It is awaiting moderation.
                        
                                        
                    
                    
                
                            
                                            
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
Comments (0)