ಆಸಿಯಾನ್-ಭಾರತ, ಪೂರ್ವ ಏಷ್ಯಾ ಶೃಂಗಸಭೆ: ನ.16ರಿಂದ ಪ್ರಧಾನಿ ಮೋದಿ ಮನಿಲಾ ಪ್ರವಾಸ
- by Suddi Loka
- November 13, 2026
- 7 Views
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 16 ಮತ್ತು 17ರಂದು ಫಿಲಿಪೈನ್ಸ್ ರಾಜಧಾನಿ ಮನಿಲಾಗೆ ಭೇಟಿ ನೀಡಲಿದ್ದು, 23ನೇ ಆಸಿಯಾನ್-ಭಾರತ ಶೃಂಗಸಭೆ ಹಾಗೂ 21ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.
ಫಿಲಿಪೈನ್ಸ್ ಅಧ್ಯಕ್ಷ ಫರ್ಡಿನಾಂಡ್ ಆರ್. ಮಾರ್ಕೋಸ್ ಜೂನಿಯರ್ ಅವರ ಆಹ್ವಾನದ ಮೇರೆಗೆ ಮೋದಿ ಈ ಪ್ರವಾಸ ಕೈಗೊಳ್ಳುತ್ತಿದ್ದಾರೆ. 2026ರಲ್ಲಿ ಆಸಿಯಾನ್ ಅಧ್ಯಕ್ಷತೆ ವಹಿಸಿರುವ ಫಿಲಿಪೈನ್ಸ್ ನವೆಂಬರ್ 17ರಂದು ಎರಡೂ ಶೃಂಗಸಭೆಗಳನ್ನು ಆಯೋಜಿಸಿದೆ.
ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಉಭಯ ದೇಶಗಳ ನಡುವಿನ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಪ್ರಗತಿ ಪರಿಶೀಲನೆಯಾಗಲಿದೆ. 2026-2030ರ ಅವಧಿಯ ಕ್ರಿಯಾ ಯೋಜನೆ ಅನುಷ್ಠಾನ ಹಾಗೂ ಭವಿಷ್ಯದ ಸಹಕಾರದ ಮಾರ್ಗಸೂಚಿ ಕುರಿತು ಚರ್ಚೆ ನಡೆಯಲಿದೆ.

ಭಾರತದ ‘ಆಕ್ಟ್ ಈಸ್ಟ್’ ನೀತಿ ಮತ್ತು ಇಂಡೋ-ಪೆಸಿಫಿಕ್ ದೃಷ್ಟಿಕೋನದಲ್ಲಿ ಆಸಿಯಾನ್ ಪ್ರಮುಖ ಪಾತ್ರ ವಹಿಸಿದೆ. 2026ನೇ ವರ್ಷವನ್ನು ಆಸಿಯಾನ್-ಭಾರತ ಕಡಲ ಸಹಕಾರ ವರ್ಷವಾಗಿ ಆಚರಿಸಲಾಗುತ್ತಿದೆ.
2027ರಲ್ಲಿ ಭಾರತ ಮತ್ತು ಆಸಿಯಾನ್ ನಡುವಿನ ಸಂವಾದ ಸಂಬಂಧಕ್ಕೆ 35 ವರ್ಷ ಹಾಗೂ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಗೆ ಐದು ವರ್ಷ ಪೂರ್ಣಗೊಳ್ಳಲಿವೆ.
ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅವರು ಆಸಿಯಾನ್ ನಾಯಕರು ಹಾಗೂ ಇತರ ಭಾಗವಹಿಸುವ ರಾಷ್ಟ್ರಗಳ ಪ್ರತಿನಿಧಿಗಳೊಂದಿಗೆ ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಕುರಿತು ಚರ್ಚಿಸಲಿದ್ದಾರೆ.


Comments (0)