ವಿಶೇಷ ಅಭಿಯಾನ 6: ಇಪಿಎಫ್‌ಒನಿಂದ 2.36 ಲಕ್ಷ ಸಾರ್ವಜನಿಕ ದೂರುಗಳ ವಿಲೇವಾರಿ

ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) 2026ರ ಅಕ್ಟೋಬರ್‌ನಲ್ಲಿ ಹಮ್ಮಿಕೊಂಡಿದ್ದ ಒಂದು ತಿಂಗಳ ವಿಶೇಷ ಅಭಿಯಾನ 6ರಲ್ಲಿ ಸಾರ್ವಜನಿಕ ಕುಂದುಕೊರತೆಗಳ ವಿಲೇವಾರಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನಿಗದಿತ ಗುರಿಗಳನ್ನು ಮೀರಿದೆ.

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಪ್ರಕಾರ, 2.05 ಲಕ್ಷ ದೂರುಗಳ ಗುರಿಯ ಎದುರು ಇಪಿಎಫ್‌ಒ ಒಟ್ಟು 2,36,021 ದೂರುಗಳನ್ನು ವಿಲೇವಾರಿ ಮಾಡಿದೆ. ಇವುಗಳಲ್ಲಿ ಇಪಿಎಫ್‌ಐಜಿಎಂಎಸ್ ಮೂಲಕ 2,02,984 ಹಾಗೂ ಸಿಪಿಜಿಆರ್‌ಎಎಂ ಮೂಲಕ 33,037 ದೂರುಗಳು ಸೇರಿವೆ.

ಅಲ್ಲದೆ, 5,758ರ ಗುರಿಗೆ ಪ್ರತಿಯಾಗಿ 10,343 ಸಿಪಿಜಿಆರ್‌ಎಎಂ ಮೇಲ್ಮನವಿಗಳನ್ನು ಇತ್ಯರ್ಥಪಡಿಸಲಾಗಿದೆ. ಪ್ರಧಾನಮಂತ್ರಿ ಕಚೇರಿಗೆ ಸಂಬಂಧಿಸಿದ 747 ದೂರುಗಳ ಗುರಿಯ ಎದುರು 758 ದೂರುಗಳನ್ನು ವಿಲೇವಾರಿ ಮಾಡಲಾಗಿದೆ.

ಸ್ವಚ್ಛತಾ ಅಭಿಯಾನದಡಿ 570ರ ಗುರಿಗೆ ಪ್ರತಿಯಾಗಿ 598 ಘಟಕಗಳನ್ನು ಸುಧಾರಿಸಲಾಗಿದ್ದು, 68,178 ಚದರ ಅಡಿ ಕಚೇರಿ ಸ್ಥಳವನ್ನು ಮುಕ್ತಗೊಳಿಸಲಾಗಿದೆ.

ದಾಖಲೆಗಳ ನಿರ್ವಹಣೆಯಲ್ಲಿ 41,875 ಭೌತಿಕ ಕಡತಗಳನ್ನು ಪರಿಶೀಲಿಸಿ, 1,383 ಕಡತಗಳನ್ನು ರಾಷ್ಟ್ರೀಯ ಆರ್ಕೈವ್ಸ್‌ಗೆ ವರ್ಗಾಯಿಸಲಾಗಿದೆ. 342 ಭೌತಿಕ ಕಡತಗಳನ್ನು ವಿಲೇವಾರಿ ಮಾಡಲಾಗಿದ್ದು, 8,355 ಎಲೆಕ್ಟ್ರಾನಿಕ್ ಕಡತಗಳನ್ನು ಪರಿಶೀಲಿಸಿ 3,106ನ್ನು ಮುಚ್ಚಲಾಗಿದೆ.

ಇಪಿಎಫ್‌ಒ ಪ್ರಧಾನ ಕಚೇರಿ, ತರಬೇತಿ ಅಕಾಡೆಮಿಗಳು, 21 ವಲಯ ಕಚೇರಿಗಳು ಸೇರಿದಂತೆ ಪ್ರಾದೇಶಿಕ ಮತ್ತು ಜಿಲ್ಲಾ ಕಚೇರಿಗಳಲ್ಲಿ ಅಭಿಯಾನ ನಡೆದಿದ್ದು, ಕಚೇರಿ ಸೌಂದರ್ಯೀಕರಣ, ಗಿಡ ನೆಡುವಿಕೆ ಹಾಗೂ ರಕ್ತದಾನ ಶಿಬಿರಗಳನ್ನೂ ಆಯೋಜಿಸಲಾಗಿತ್ತು.

Related Articles

Comments (0)