ಸೌಹಾರ್ದಯುತ ಸಮಾಜ ನಿರ್ಮಾಣವೇ ಪಂಚಪೀಠಗಳ ಮೂಲ ಗುರಿ: ರಂಭಾಪುರಿ ಶ್ರೀ
- by Suddi Team
- March 23, 2026
- 11 Views
ಹಾವೇರಿ: ಜೀವನದ ಸಮೃದ್ಧಿ ಮತ್ತು ಶಾಂತಿಗಾಗಿ ಪ್ರತಿಯೊಬ್ಬರಲ್ಲೂ ದೈವೀ ಗುಣಗಳ ಅವಶ್ಯಕತೆಯಿದೆ. ಸಮಾಜದಲ್ಲಿ ಸಂಘಟನೆಗಳು ನಡೆಯಬೇಕೇ ಹೊರತು ಸಂಘರ್ಷಗಳಲ್ಲ. ಸರ್ವ ಜನಾಂಗದ ಸೌಹಾರ್ದಯುತ ಬದುಕನ್ನು ನಿರ್ಮಿಸುವುದೇ ಪಂಚಪೀಠಗಳ ಪರಮೋಚ್ಛ ಗುರಿಯಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಪ್ರತಿಪಾದಿಸಿದರು.
ತಾಲೂಕಿನ ನೆಗಳೂರು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಗದ್ಗುರು ಪಂಚ ಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ನೂತನ ರಥದ ಲೋಕಾರ್ಪಣೆ ನಿಮಿತ್ತ ಜರುಗಿದ ‘ಜನಜಾಗೃತಿ ಧರ್ಮ ಸಮಾರಂಭ’ದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ನೆಗಳೂರು ಇತಿಹಾಸದಲ್ಲಿ ಸುದಿನ:
“ಲಿಂ. ಶ್ರೀ ಶಿವಾನಂದ ಶಿವಾಚಾರ್ಯರ ಬಹುದಿನದ ಸಂಕಲ್ಪ ಇಂದು ನೆರವೇರಿದೆ. ಈಗಿನ ಪಟ್ಟಾಧ್ಯಕ್ಷರಾದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳ ಅವಿರತ ಶ್ರಮದಿಂದ ಈ ಕಾರ್ಯಕ್ರಮ ಅತ್ಯಂತ ವೈಭವದಿಂದ ಜರುಗುತ್ತಿರುವುದು ಸಂತಸದ ವಿಷಯ. ಇದು ನೆಗಳೂರಿನ ಚಾರಿತ್ರಿಕ ಇತಿಹಾಸದಲ್ಲೇ ಒಂದು ಅವಿಸ್ಮರಣೀಯ ದಿನ” ಎಂದು ಶ್ರೀಗಳು ಹರ್ಷ ವ್ಯಕ್ತಪಡಿಸಿದರು.
ಸಂದೇಶದ ಸಾರ:
ವೀರಶೈವ ಧರ್ಮದ ಪರಂಪರೆಯನ್ನು ಸ್ಮರಿಸಿದ ಶ್ರೀಗಳು, “ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಸ್ಥಾಪಿಸಿದ ಪೀಠಗಳು ಎಂದಿಗೂ ಜಾತಿ-ಮತಗಳ ಗಡಿ ಮೀರಿ ಭಾವೈಕ್ಯತೆಗೆ ಒತ್ತು ನೀಡುತ್ತಾ ಬಂದಿವೆ. ಮನುಷ್ಯ ತನ್ನೊಳಗಿನ ಅಸುರೀ ಗುಣಗಳನ್ನು ಕಿತ್ತೊಗೆದು ಮನಸ್ಸನ್ನು ಪರಿಶುದ್ಧಗೊಳಿಸಿಕೊಂಡಾಗ ಮಾತ್ರ ಅಲ್ಲಿ ಮಹದೇವ ನೆಲೆಸುತ್ತಾನೆ. ಲೋಕದ ಹಿತವನ್ನೇ ಬಯಸುವ ರೇಣುಕಾಚಾರ್ಯರ ತತ್ವಗಳು ಎಂದೆಂದಿಗೂ ಪ್ರಸ್ತುತ” ಎಂದು ಕಿವಿಮಾತು ಹೇಳಿದರು.
ಗುರು ಬೋಧಾಮೃತ ಅವಶ್ಯ – ಉಜ್ಜಯಿನಿ ಶ್ರೀ:
ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ಮಾತನಾಡಿ, “ನಮಗೆ ವಿದ್ಯಾ-ಬುದ್ಧಿ, ಅನ್ನ-ನೀರು, ಗಾಳಿ-ಬೆಳಕು ನೀಡಿದವನು ಆ ಪರಮಾತ್ಮ. ಅಂತಹ ಭಗವಂತನ ಅರಿವು ಮೂಡಲು ಮತ್ತು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಗುರುವಿನ ಬೋಧಾಮೃತ ಅತ್ಯಂತ ಅವಶ್ಯಕ” ಎಂದರು.
ವಿನಯವಂತರಾಗಿ ಬಾಳಿ – ಶ್ರೀಶೈಲ ಶ್ರೀ:
ಶ್ರೀಶೈಲದ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಜಗದ್ಗುರುಗಳು ಮಾತನಾಡಿ, “ಇಂದಿನ ಕಾಲದಲ್ಲಿ ಜನ ಆದರ್ಶಗಳನ್ನು ಮರೆತು ಅಶಾಂತಿಯ ಬದುಕಿಗೆ ಮೊರೆ ಹೋಗುತ್ತಿದ್ದಾರೆ. ಅಧಿಕಾರ ಮತ್ತು ಅಂತಸ್ತು ಬಂದಾಗ ಮನುಷ್ಯ ವಿನಯವಂತನಾಗಿ ಬಾಳಬೇಕು. ನೆಗಳೂರಿನ ಭಕ್ತರ ಶ್ರದ್ಧೆ ಮಾದರಿಯಾದುದು” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಭಕ್ತ-ಭಗವಂತನ ಅವಿನಾಭಾವ ಸಂಬಂಧ – ಕಾಶಿ ಶ್ರೀ:
ಕಾಶಿ ಪೀಠದ ಡಾ. ಚಂದ್ರಶೇಖರ ಜಗದ್ಗುರುಗಳು ಮಾತನಾಡಿ, “ಕಡಲಿಲ್ಲದೆ ಅಲೆ ಇರಲು ಸಾಧ್ಯವಿಲ್ಲ, ಹಾಗೆಯೇ ಭಕ್ತನಿಲ್ಲದೆ ಭಗವಂತನಿಲ್ಲ. ಅನುಭವ ಮತ್ತು ಆದರ್ಶವಿಲ್ಲದ ಬುದ್ಧಿಗೆ ಎಂದಿಗೂ ಬೆಲೆ ಸಿಗದು. ನಿಮ್ಮೆಲ್ಲರ ಧರ್ಮ ಶ್ರದ್ಧೆಯಲ್ಲಿ ನಾನು ಪರಶಿವನ ಸ್ವರೂಪವನ್ನು ಕಾಣುತ್ತಿದ್ದೇನೆ” ಎಂದು ಹರಸಿದರು.
ಮನಸ್ಸನ್ನು ಭಗವಂತನಲ್ಲಿಡಿ – ಕಾಶಿ ನೂತನ ಶ್ರೀ:
ಕಾಶಿ ಪೀಠದ ನೂತನ ಜಗದ್ಗುರುಗಳಾದ ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯರು ಮಾತನಾಡಿ, “ಮರೆಯುವುದು ಮನುಷ್ಯನ ಸಹಜ ಗುಣ, ಆದರೆ ಸರಿಯಾದ ಹಾದಿಯನ್ನು ನೆನಪಿಸುವುದು ಗುರುಧರ್ಮ. ಪ್ರತಿಯೊಬ್ಬರಲ್ಲೂ ದೇವರನ್ನು ಅರಿಯುವ ಶಕ್ತಿಯಿದೆ, ಅದನ್ನು ಚಂಚಲ ಮನಸ್ಸಿನಿಂದ ಸಾಧಿಸಲು ಸಾಧ್ಯವಿಲ್ಲ. ಮನಸ್ಸನ್ನು ಭಗವಂತನಲ್ಲಿ ನೆಲೆಗೊಳಿಸಬೇಕು” ಎಂದರು.
ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು ಸ್ವಾಗತಿಸಿ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಯಾರು ಯಾರನ್ನಾದರೂ ಜರಿಯಲಿ ತೆಗಳಲಿ, ಆದರೆ ಜೀವನದ ಸೂತ್ರಧಾರನಾದವನನ್ನು ಹರಿಯಲು ಸಾಧ್ಯವಾಗಲಾರದು. ಭಗವಂತನ ಧ್ಯಾನ ಜ್ಞಾನದೊಂದಿಗೆ ನಾವಿದ್ದಾಗ ನಮಗೆ ನೆಲೆ ಬೆಲೆ. ಪರಮ ಗುರುವಿನ ದರ್ಶನಾಶೀವಾದದಿಂದ ತಾವೆಲ್ಲಾ ಪಾವನರಾಗಿದ್ದೀರಿ. ಗುರುವಿನ ಆಶೀರ್ವಾಣೆ ಆಲಿಸಿ ಆ ದಾರಿಯಲ್ಲಿ ನಡೆದಾಗ ಜೀವನ ಸಾರ್ಥಕಗೊಳ್ಳುವುದೆಂದರು.
ಕೃತಿ ಲೋಕಾರ್ಪಣೆ:
ಇದೇ ಸಂದರ್ಭದಲ್ಲಿ ಹಾವೇರಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘ಶ್ರೀ ಗುರುಶಾಂತೇಶ್ವರ ಜೀವನ ದರ್ಶನ’ ಕೃತಿಯನ್ನು ಲೋಕಾರ್ಪಣೆಗೊಳಿಸಿದರು. ಕಾರ್ಯಕ್ರಮದಲ್ಲಿ ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ, ಸಂಜೀವ್ ಕುಮಾರ್ ನೀರಲಗಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಸಮಾರಂಭಕ್ಕೂ ಮುನ್ನ ಶ್ರೀ ರಂಭಾಪುರಿ, ಶ್ರೀ ಉಜ್ಜಯಿನಿ, ಶ್ರೀ ಶ್ರೀಶೈಲ ಮತ್ತು ಶ್ರೀ ಕಾಶೀ ಉಭಯ ಜಗದ್ಗುರುಗಳವರ ಸಂಭ್ರಮದ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಿತು. ಇದೇ ಪವಿತ್ರ ಸಂದರ್ಭದಲ್ಲಿ ನೂತನವಾಗಿ ನಿರ್ಮಾಣಗೊಂಡ ನೆಗಳೂರು ಹಿರೇಮಠದ ಕರ್ತೃ ಗುರುಶಾಂತೇಶ್ವರರ ಭವ್ಯ ರಥವನ್ನು ಶ್ರೀ ಜಗದ್ಗುರು ಪಂಚ ಪೀಠಾಧೀಶ್ವರರು ಮಂಗಲಾಕ್ಷತೆ ಹಾಕಿ ಲೋಕಾರ್ಪಣೆಗೊಳಿಸಿದರು. ನೆರೆದ ಸಕಲ ಸದ್ಭಕ್ತರು ಅತ್ಯಂತ ಭಕ್ತಿ ಭಾವನೆಯಿಂದ ತೇರನ್ನು ಎಳೆದ ದೃಶ್ಯ ಅಪೂರ್ವವಾಗಿತ್ತು. ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು. ಆಗಮಿಸಿದ ಸಕಲ ಸದ್ಭಕ್ತರಿಗೆ ನಿರಂತರ ಅನ್ನ ದಾಸೋಹ ಜರುಗಿತು.
Related Articles
Thank you for your comment. It is awaiting moderation.


Comments (0)