ಶಾಸಕ ಜಯಚಂದ್ರ ರೈತ ವಿರೋಧಿ: ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಗಿರೀಶ್ ಬಿ.ಟಿ. ಆಕ್ರೋಶ
- by Suddi Team
- March 7, 2026
- 200 Views
ಶಿರಾ: ತಾಲ್ಲೂಕಿನಲ್ಲಿ ದಶಕಗಳಿಂದ ಭೂಮಿ ನಂಬಿ ಬದುಕುತ್ತಿರುವ ರೈತರನ್ನು ಒಕ್ಕಲೆಬ್ಬಿಸುವ ಮೂಲಕ ಶಾಸಕ ಟಿ.ಬಿ. ಜಯಚಂದ್ರ ಅವರು ರೈತ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷ ಗಿರೀಶ್ ಬಿ.ಟಿ. ಕಿಡಿಕಾರಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿರಾ ನಗರ ವ್ಯಾಪ್ತಿಯಲ್ಲಿ ಸುಮಾರು 50-60 ವರ್ಷಗಳಿಂದ ರೈತರು ಜಮೀನು ಉಳುಮೆ ಮಾಡುತ್ತಿದ್ದಾರೆ. ಬಗರ್ ಹುಕುಂ ಸಾಗುವಳಿ ಮಂಜೂರಾತಿಗಾಗಿ ಫಾರಂ ನಂ. 50, 53 ಹಾಗೂ 57ರ ಅಡಿ ಅರ್ಜಿ ಸಲ್ಲಿಸಿ, ಟಿ.ಟಿ ದಂಡವನ್ನೂ ಪಾವತಿಸಿದ್ದಾರೆ. ಆದರೆ, ಇವುಗಳನ್ನು ಮಂಜೂರು ಮಾಡುವ ಬದಲು ಸರ್ಕಾರವು ತಾಂತ್ರಿಕ ನೆಪವೊಡ್ಡಿ ರೈತರನ್ನು ಜಮೀನಿನಿಂದ ಹೊರಹಾಕುವ ಸಂಚು ರೂಪಿಸುತ್ತಿದೆ ಎಂದು ದೂರಿದರು.
ರಾತ್ರೋರಾತ್ರಿ ಪಹಣಿ ಬದಲಾವಣೆ:
ರೈತರು ಸಾಗುವಳಿ ಮಾಡುತ್ತಿರುವ ಜಮೀನುಗಳ ಪಹಣಿಯನ್ನು ರಾತ್ರೋರಾತ್ರಿ ಬದಲಾಯಿಸಿ, ಅನ್ಯ ಉದ್ದೇಶಗಳಿಗೆ ಕಾಯ್ದಿರಿಸಲಾಗುತ್ತಿದೆ. ಈ ಬಗ್ಗೆ ಸ್ಥಳೀಯ ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಿ ರೈತರಿಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡುತ್ತಿಲ್ಲ. ಬದಲಾಗಿ, ಬಗರ್ ಹುಕುಂ ಜಮೀನುಗಳನ್ನು ಮಂಜೂರು ಮಾಡದೆ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಗಿರೀಶ್ ಆರೋಪಿಸಿದರು.
ಸಮಿತಿಯ ನಿರ್ಲಕ್ಷ್ಯ:
2013ರಲ್ಲಿ ಭೂವನಹಳ್ಳಿ ಗ್ರಾಮದ ರೈತರು ಹೈಕೋರ್ಟ್ ಮೊರೆ ಹೋದಾಗ, ನ್ಯಾಯಾಲಯದ ನಿರ್ದೇಶನದಂತೆ ಬಗರ್ ಹುಕುಂ ಸಮಿತಿ ರಚಿಸಲಾಗಿತ್ತು. ಅಂದಿನ ಕಾನೂನು ಸಚಿವರಾಗಿದ್ದ ಟಿ.ಬಿ. ಜಯಚಂದ್ರ ಅವರೇ ಈ ಸಮಿತಿಯ ಅಧ್ಯಕ್ಷರಾಗಿದ್ದರು. ಆದರೆ, ನಗರಸಭೆ ವ್ಯಾಪ್ತಿಯಲ್ಲಿ ಜಮೀನು ಮಂಜೂರಾತಿಗೆ ಅವಕಾಶವಿಲ್ಲ ಎಂಬ ಕಾರಣ ನೀಡಿ ಅರ್ಜಿಗಳನ್ನು ವಜಾ ಮಾಡಲಾಗಿದೆ. ತಲೆಮಾರುಗಳಿಂದ ಉಳುಮೆ ಮಾಡುತ್ತಿರುವ ರೈತರಿಗೆ ಸೂಕ್ತ ಪರಿಹಾರ ನೀಡುವಲ್ಲಿಯೂ ಸರ್ಕಾರ ವಿಫಲವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕೂಡಲೇ ಸರ್ಕಾರ ರೈತರ ಪರ ನಿಂತು ಮಂಜೂರಾತಿ ಪ್ರಕ್ರಿಯೆ ಆರಂಭಿಸದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ
ಅರ್ಜಿಗಳ ವಿಲೇವಾರಿ ಎಷ್ಟು?:
“ತಾಲ್ಲೂಕಿನಲ್ಲಿ ಈವರೆಗೆ ಎಷ್ಟು ಬಗರ್ ಹುಕುಂ ಸಾಗುವಳಿ ಅರ್ಜಿಗಳನ್ನು ವಿಲೇವಾರಿ ಮಾಡಿದ್ದೀರಿ? ನಗರ ವ್ಯಾಪ್ತಿಯಲ್ಲಿ ಉಳುಮೆ ಮಾಡುತ್ತಿದ್ದ ಎಷ್ಟು ರೈತರಿಗೆ ಈವರೆಗೆ ನ್ಯಾಯಯುತ ಪರಿಹಾರ ನೀಡಲಾಗಿದೆ? ರೈತರು ಎದುರಿಸುತ್ತಿರುವ ಈ ಗಂಭೀರ ಸಮಸ್ಯೆಗಳ ಬಗ್ಗೆ ತಾವು ಎಷ್ಟು ಬಾರಿ ಸದನದಲ್ಲಿ ಪ್ರಸ್ತಾಪಿಸಿದ್ದೀರಿ ಎಂಬುದನ್ನು ಜನತೆಗೆ ಸ್ಪಷ್ಟಪಡಿಸಿ” ಎಂದು ಗಿರೀಶ್ ಆಗ್ರಹಿಸಿದರು.
ಭರವಸೆ ಮರೆತ KIADB ಮತ್ತು ಕಂಪನಿಗಳು:
ಕೈಗಾರಿಕಾ ವಲಯ ಅಭಿವೃದ್ಧಿ ಮಂಡಳಿ (KIADB) ರೈತರ ಜಮೀನು ವಶಪಡಿಸಿಕೊಳ್ಳುವಾಗ ನೀಡಿದ್ದ ಭರವಸೆಗಳು ಕೇವಲ ಕಾಗದಕ್ಕಷ್ಟೇ ಸೀಮಿತವಾಗಿವೆ. ಕೈಗಾರಿಕಾ ಬೈಲಾದ ಪ್ರಕಾರ ಸ್ಥಳೀಯ ರೈತ ಕುಟುಂಬದ ಮಕ್ಕಳಿಗೆ ಮತ್ತು ದಿನಗೂಲಿ ಕಾರ್ಮಿಕರಿಗೆ ಉದ್ಯೋಗ ನೀಡಬೇಕು. ಆದರೆ, ಇಂದು ಖಾಸಗಿ ಕಂಪನಿಗಳು ಸ್ಥಳೀಯರನ್ನು ಕಡೆಗಣಿಸಿ ಹೊರರಾಜ್ಯದ ಗುತ್ತಿಗೆದಾರರನ್ನು ಮತ್ತು ಕಾರ್ಮಿಕರನ್ನು ಕರೆತಂದು ಆಡಳಿತ ನಡೆಸುತ್ತಿವೆ. ಈ ಮೂಲಕ ಶಿರಾದ ನೆಲದ ಮಕ್ಕಳ ಹಕ್ಕನ್ನು ಕದಿಯಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಬರಪೀಡಿತ ತಾಲ್ಲೂಕಿನ ಯುವಕರ ಗೋಳು:
ಶಿರಾ ತಾಲ್ಲೂಕು ಗಡಿ ಭಾಗದ ಬರಪೀಡಿತ ಪ್ರದೇಶವಾಗಿದ್ದು, ಇಲ್ಲಿನ ಸಾವಿರಾರು ಐಟಿಐ, ಡಿಪ್ಲಮೋ ಹಾಗೂ ಪದವೀಧರ ಯುವಕರು ಉದ್ಯೋಗಕ್ಕಾಗಿ ಬೆಂಗಳೂರಿನತ್ತ ವಲಸೆ ಹೋಗುತ್ತಿದ್ದಾರೆ. ಸ್ಥಳೀಯವಾಗಿ ಕೈಗಾರಿಕೆಗಳಿದ್ದರೂ ಉದ್ಯೋಗ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಸಕರು ಮತ್ತು ಅಧಿಕಾರಿಗಳು ಈ ಕೂಡಲೇ ಎಚ್ಚೆತ್ತುಕೊಂಡು ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಕಂಪನಿಗಳ ಮೇಲೆ ಒತ್ತಡ ಹೇರಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕಳೆದ ಒಂದು ದಶಕದಿಂದ ಭದ್ರಾ ಮೇಲ್ದಂಡೆ ಹಾಗೂ ಎತ್ತಿನಹೊಳೆ ಯೋಜನೆಯ ಹೆಸರಿನಲ್ಲಿ ರಾಜಕೀಯ ಮಾಡುತ್ತಾ ರೈತರಿಗೆ ಸುಳ್ಳು ಭರವಸೆ ನೀಡಲಾಗುತ್ತಿದೆ ಆದರೆ”ಕಳೆದ 12-13 ವರ್ಷಗಳಿಂದ ನೀರು ತರುತ್ತೇವೆಂಬ ಭರವಸೆ ಈಡೇರಿಲ್ಲ. ಮಳೆ ಅಭಾವದಿಂದ ತಾಲ್ಲೂಕಿನ ತೆಂಗು, ಅಡಿಕೆ ತೋಟಗಳು ಒಣಗುತ್ತಿವೆ. ಅಳಿದುಳಿದ ತೋಟ ಉಳಿಸಿಕೊಳ್ಳಲು ರೈತರು ಸಾಲ ಮಾಡಿ ಹತ್ತಾರು ಬೊರವೆಲ್ ಕೊರೆಸುತ್ತಿದ್ದಾರೆ. ಹವಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಮುಂದಿನ ವರ್ಷವೂ ಮಳೆ ಕಡಿಮೆಯಾದರೆ ರೈತರ ಬದುಕು ಅಕ್ಷರಶಃ ನರಕವಾಗಲಿದೆ. ಈ ವರ್ಷದ ಅಂತ್ಯದೊಳಗೆ ಕಾಮಗಾರಿ ಮುಗಿಸಿ ಕೆರೆಗಳನ್ನು ತುಂಬಿಸಲೇಬೇಕು” ಎಂದು ಅವರು ಆಗ್ರಹಿಸಿದರು.
ಕಳಪೆ ವಿದ್ಯುತ್ ಪೂರೈಕೆ – ಬೆಸ್ಕಾಂ ವಿರುದ್ಧ ದೂರು:
ತಾಲ್ಲೂಕಿನಲ್ಲಿ ವಿದ್ಯುತ್ ಸಮಸ್ಯೆ ಗಂಭೀರವಾಗಿದ್ದು, ರಾತ್ರಿ ವೇಳೆ ಅತ್ಯಂತ ಕಳಪೆ ಗುಣಮಟ್ಟದ ವಿದ್ಯುತ್ ನೀಡಲಾಗುತ್ತಿದೆ. ಈ ಬಗ್ಗೆ ಇಲಾಖೆಯನ್ನು ಪ್ರಶ್ನಿಸಿದರೆ, “ರೈತರು ಕಂಡೆನ್ಸರ್ ಹಾಕುತ್ತಾರೆ, ಹಾಗಾಗಿ ಗುಣಮಟ್ಟ ಕಡಿತಗೊಳಿಸಿದ್ದೇವೆ” ಎಂಬ ಉಡಾಫೆ ಉತ್ತರ ಸಿಗುತ್ತಿದೆ. ಬರಪೀಡಿತ ತಾಲ್ಲೂಕಿನಲ್ಲಿ ತರಕಾರಿ ಬೆಳೆಯಲು ರೈತರು ಅನಿವಾರ್ಯವಾಗಿ ಇಂತಹ ಕ್ರಮಗಳಿಗೆ ಮುಂದಾಗುತ್ತಿದ್ದಾರೆ. ರೈತ ಬೆಳೆದ ಬೆಳೆ ಸಮಾಜಕ್ಕೆ ಅನ್ನ ನೀಡುತ್ತದೆಯೇ ಹೊರತು ಆತ ಒಬ್ಬನೇ ತಿನ್ನುವುದಿಲ್ಲ. ಅಧಿಕಾರಿಗಳು ಈ ವಾಸ್ತವ ಅರಿತು ಈ ಕೂಡಲೇ ಗುಣಮಟ್ಟದ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿದರು.
Related Articles
Thank you for your comment. It is awaiting moderation.


Comments (0)