ಸಂಸ್ಕೃತಿಯ ರಕ್ಷಣೆಯಲ್ಲಿ ಮಹಿಳೆಯರ ಪಾತ್ರ ಅನನ್ಯ: ರಂಭಾಪುರಿ ಜಗದ್ಗುರು
- by Suddi Team
- March 2, 2026
- 12 Views
ಬಾಳೆಹೊನ್ನೂರು: ಆಧುನಿಕತೆಯ ಈ ಯುಗದಲ್ಲಿ ಭೌತಿಕ ಅಭಿವೃದ್ಧಿ ಎಷ್ಟೇ ಆದರೂ ಮನುಷ್ಯನಿಗೆ ಮಾನಸಿಕ ಶಾಂತಿ ಮರೀಚಿಕೆಯಾಗುತ್ತಿದೆ. ಜಾಗತೀಕರಣ ಮತ್ತು ಖಾಸಗೀಕರಣದ ನಡುವೆ ಮಾನವೀಯ ಅಂತಃಕರಣಗಳು ಬೆಳೆಯುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಇಲ್ಲಿನ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಸೋಮವಾರ ಆಯೋಜಿಸಲಾಗಿದ್ದ ‘ಧರ್ಮ ಮತ್ತು ಮಹಿಳೆ’ ಚಿಂತನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಈ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮಹಿಳೆಯೇ ಸಂಸ್ಕೃತಿಯ ಆಧಾರಸ್ತಂಭ:
ಧರ್ಮ ಸಂಸ್ಕೃತಿಯ ಅಳಿವು ಮತ್ತು ಉಳಿವು ಮಹಿಳೆಯರ ಮೇಲೆ ಅವಲಂಬಿತವಾಗಿದೆ. ವೀರಶೈವ ಧರ್ಮವು ಮಹಿಳೆಯರಿಗೆ ಸಮಾಜದಲ್ಲಿ ಅತ್ಯುನ್ನತ ಮತ್ತು ಗೌರವದ ಸ್ಥಾನವನ್ನು ನೀಡಿದೆ. ಸಂಸ್ಕಾರಯುತ ಮಹಿಳೆಯಿಂದ ಮಾತ್ರ ಸದೃಢ ಮನೆ ಹಾಗೂ ಸಮಾಜ ನಿರ್ಮಾಣವಾಗಲು ಸಾಧ್ಯ. ಭಾರತೀಯ ಸಂಸ್ಕೃತಿಯು ‘ಮಾತೃ ದೇವೋ ಭವ’ ಎಂಬ ಉನ್ನತ ತತ್ವವನ್ನು ಸದಾ ಎತ್ತಿ ಹಿಡಿದಿದೆ ಎಂದು ಶ್ರೀಗಳು ಮಾರ್ಮಿಕವಾಗಿ ನುಡಿದರು.
ಪಂಚಪೀಠಗಳ ಕೊಡುಗೆ:
ವೀರಶೈವ ಧರ್ಮದ ಸಂಪ್ರದಾಯದಲ್ಲಿ ಮಹಿಳೆಯರಿಗೆ ಹಸಿರು ಬಳೆ, ಕುಂಕುಮ, ಮಾಂಗಲ್ಯ ಹಾಗೂ ಕರಿಮಣಿಯಂತಹ ಮುತ್ತೈದೆಯರ ಲಾಂಛನಗಳನ್ನು ನೀಡುವ ಮೂಲಕ ಗೌರವಿಸಿದ ಕೀರ್ತಿ ಪಂಚಪೀಠಗಳಿಗೆ ಸಲ್ಲುತ್ತದೆ. ಜೀವನದ ನಾಲ್ಕು ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳಲ್ಲಿ ಧರ್ಮಬದ್ಧವಾದ ಜೀವನವೇ ಶ್ರೇಷ್ಠವಾದುದು ಎಂದು ಅವರು ತಿಳಿಸಿದರು.
ಸನ್ಮಾರ್ಗದ ನಡಿಗೆಯಿಂದ ಮಹಿಳೆಯರ ಭವಿಷ್ಯ ಉಜ್ವಲ:
ಶ್ರೀ ರಂಭಾಪುರಿ ಪೀಠದಲ್ಲಿ ಜರುಗಿದ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ‘ಧರ್ಮ ಮತ್ತು ಮಹಿಳೆ’ ವಿಚಾರ ಮಂಥನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆಯರು ಪುರುಷರಿಗಿಂತಲೂ ಮಿಗಿಲಾದ ಸಾಧನೆ ಮಾಡುತ್ತಿದ್ದಾರೆ. ಧರ್ಮ, ಪರಂಪರೆ ಮತ್ತು ಶ್ರೇಷ್ಠ ಆದರ್ಶಗಳನ್ನು ಪಾಲಿಸುವ ಮೂಲಕ ಕೌಟುಂಬಿಕ ಶಾಂತಿ ಹಾಗೂ ನೆಮ್ಮದಿಯನ್ನು ಕಾಪಾಡುವಲ್ಲಿ ಮಹಿಳೆಯರ ಪಾತ್ರ ಬಹಳ ದೊಡ್ಡದಿದೆ ಎಂದರು.
ಆತಂಕದ ನಡುವೆಯೂ ಸನ್ಮಾರ್ಗದ ಅಗತ್ಯ:
ಪ್ರಸ್ತುತ ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅನ್ಯಾಯ, ಅತ್ಯಾಚಾರ ಮತ್ತು ದ್ರೋಹದಂತಹ ಘಟನೆಗಳು ನೆಮ್ಮದಿಯನ್ನು ಕದಡುತ್ತಿವೆ. ಇದು ಅತ್ಯಂತ ನೋವಿನ ಸಂಗತಿ. ಇಂತಹ ಆತಂಕದ ವಾತಾವರಣದ ನಡುವೆಯೂ ಮಹಿಳೆಯರು ಸತ್ಯವನ್ನು ಅರಿತು, ಧರ್ಮದ ಹಾದಿಯಲ್ಲಿ ಮುನ್ನಡೆದರೆ ದುರ್ಘಟನೆಗಳನ್ನು ತಡೆಗಟ್ಟಲು ಸಾಧ್ಯ. ಮಹಿಳೆಯರ ಉಜ್ವಲ ಭವಿಷ್ಯವು ಧರ್ಮದ ಆಚರಣೆಯಲ್ಲೇ ಅಡಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಶಾಸಕ ಟಿ.ಡಿ.ರಾಜೇಗೌಡರು ಮಾತನಾಡಿ ಶ್ರೀ ರಂಭಾಪುರಿ ಪೀಠ ಕೇವಲ ಒಂದು ಜನಾಂಗಕ್ಕೆ ಸೀಮಿತವಾಗಿಲ್ಲ ಎಂದರು.
ಹುಬ್ಬಳ್ಳಿ ಶ್ರೀ ಪಾರ್ವತಿ ಮಹಿಳಾ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಇಂಧುಮತಿ ಮಾನ್ವಿ, ಅಂಶುಮಂತ ಭಾಗವಹಿಸಿದ್ದರು.
ಕೊಟ್ಟೂರು ಚಾನುಕೋಟಿಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಸ್ನೇಹ ಸೌಹಾರ್ದಗಳು ಭಾವೈಕ್ಯದ ಪ್ರತೀಕ. ಬಾಳೆಂಬ ಜ್ಯೋತಿಗೆ ಸ್ನೇಹ ಎಂಬ ತೈಲವನ್ನೆರೆದರೆ ಬಾಳೆಲ್ಲ ಬಂಧುರ. ಯಾರಿಂದಲೂ ನಿಂದಿಸಿಕೊಳ್ಳದ ಬಾಳ್ವೆಯೇ ನಿಜವಾದ ಬಾಳುವೆ ಎಂದು ನೃಪತುಂಗ ಕವಿ ಹೇಳಿದ್ದುಂಟು ಎಂದರು. ವಿಭೂತಿಪುರಮಠದ ಡಾ.ಮಹಾಂತ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಇಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ರಾಜ್ಯ ಸರ್ಕಾರದಿಂದ ನಾಡಿನೆಲ್ಲೆಡೆ ಆಚರಿಸುತ್ತಿರುವುದು ಪ್ರತಿಯೊಬ್ಬ ವೀರಶೈವರಿಗೆ ಹೆಮ್ಮೆಯ ಸಂಗತಿಯಾಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ತತ್ವಸಿದ್ಧಾಂತಗಳು ಮಾನವ ಜೀವನದ ವಿಕಾಸಕ್ಕೆ ಅಡಿಪಾಯವಾಗಿವೆ. ಅರಿವಿನ ದಾರಿಯಲ್ಲಿ ಮುನ್ನಡೆಯಲು ಶ್ರೀಗುರುವಿನ ಮಾರ್ಗದರ್ಶನ ಅವಶ್ಯಕ. ಜಗದ ಕತ್ತಲೆ ಸೂರ್ಯ ಕಳೆದರೆ, ಮನದ ಕತ್ತಲೆ ಕಳೆಯಲು ಗುರು ಬೇಕು. ಶಿವ ಪಥವನರಿಯಲು ಗುರುವೇ ಮೂಲ ಎಂಬುದನ್ನು ಮರೆಯಬಾರದು ಎಂದರು.
ಶಿರಕೋಳದ ಗುರುಸಿದ್ದೇಶ್ವರ ಶಿವಾಚಾರ್ಯರು, ಮೈಸೂರಿನ ಡಾ| ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯರು. ಸಂಗೊಳ್ಳಿಯ ಗುರುಲಿಂಗ ಶಿವಾಚಾರ್ಯರು, ಅಮ್ಮಿನಬಾವಿ ಅಭಿನವ ಶಾಂತಲಿಂಗ ಶಿವಾಚಾರ್ಯರು, ಸಹಭಾಗಿತ್ವ ವಹಿಸಿದ್ದರು. ಬೇರುಗಂಡಿಮಠದ ರೇಣುಕ ಮಹಾಂತ ಶಿವಾಚಾರ್ಯರು, ಶಾಂತಪುರದ ಶಿವಾನಂದ ಶಿವಾಚಾರ್ಯರು. ನೆಗಳೂರಿನ ಗುರುಶಾಂತೇಶ್ವರ ಶಿವಾಚಾರ್ಯರು, ದೋರನಹಳ್ಳಿ ಶಿವಲಿಂಗ ರಾಜೇಂದ್ರ ಶಿವಾಚಾರ್ಯರು, ಅಮ್ಮ ಫೌಂಡೇಶನ್ ಅಧ್ಯಕ್ಷ ಸುಧಾಕರ ಶೆಟ್ಟಿ, ಮೆಣಸುಕೂಡಿಗೆ ಎಂ.ಆರ್. ವೆಂಕಪ್ಪಗೌಡರು, ಅನ್ನಪೂರ್ಣಮ್ಮ ಶಿವರಾಮೇಗೌಡ, ಬಾಳೆಹೊನ್ನೂರಿನ ವಿದ್ಯಾನಂದ ಭಟ್, ಚಾರ್ಲ್ಸ್ ಮಸ್ಕರೆನಿಸ್ಸ, ಅಬ್ದುಲ್ ವಹೀದ್ ಬೈರೇಗುಡ್ಡ, ನಾಗರನವಿಲೆ ಶಿವಾನುಗ್ರಹ ಸೇವಾ ಪ್ರತಿಷ್ಠಾನದ ಪದಾಧಿಕಾರಿಗಳು, ಅಜ್ಜಂಪುರದ ಹೆಜ್.ಆರ್.ಕುಮಾರ್ ಇವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು. ಕೂಡಗೆರೆ ಎಸ್.ಎಸ್.ಹಾಲೇಶ್ ಸ್ವಾಗತಿಸಿದರು. ಹಾವೇರಿಯ ಶಿವಬಸವ ಬಣಕಾರ ಇವರಿಂದ ಪ್ರಾರ್ಥನೆ, ಶ್ರೀ ಪೀಠದ ಕುಮಾರಿ ವಂದನಾ ಹಿರೇಮಠ, ಅನಿತಾ ಸಿ.ಜಿ., ನೇಹಾ ಜೆ. ಧನ್ಯಾ ಇವರಿಂದ ಭರತ ನಾಟ್ಯ ಜರುಗಿತು.
ಮುಖ್ಯೋಪಾಧ್ಯಾಯ ವೀರೇಶ ಕುಲಕರ್ಣಿ ನಿರೂಪಿಸಿದರು. ಬೆಳಿಗ್ಗೆ ಶಯನೋತ್ಸವ, ಶ್ರೀ ಜಗದ್ಗುರು ಶಿವಾನಂದ ಎಸ್ಟೇಟಿನಲ್ಲಿ ಪೂಜಾ-ಪ್ರಸಾದ, ಸಂಜೆ ಗೋವಿನಕೋವಿ ಬಸವಣ್ಣ ದೇವರ ದೇವಸ್ಥಾನದಲ್ಲಿ ಕೆಂಡಾರ್ಚನೆ ನಡೆದವು.
ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಧರ್ಮ ಮತ್ತು ಮಹಿಳೆ ವಿಚಾರ ಮಂಥನ ಸಮಾರಂಭವನ್ನು ಉದ್ಘಾಟಿಸಿದರು.
ಶ್ರೀ ಜಗದ್ಗುರು ರಂಭಾಪುರಿ ಪೀಠದ ಶ್ರೀ ಜಗದ್ಗುರು ಶಿವಾನಂದ ಎಸ್ಟೇಟಿನಲ್ಲಿರುವ ವನದುರ್ಗ ದೇವಸ್ಥಾನದ ಪರಿಸರದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳೊಂದಿಗೆ ಶಿವಾಚಾರ್ಯರ ಬಳಗದವರು ಉಪಸ್ಥಿತರಿದ್ದರು.
ಬಸವನಕೂಗು ಬಸವಣ್ಣನ ದೇವಸ್ಥಾನದ ಪರಿಸರದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಕೆಂಡಾರ್ಚನೆ ನಡೆಯಿತು.
Related Articles
Thank you for your comment. It is awaiting moderation.


Comments (0)