ಮಲೆನಾಡ ಮಡಿಲಲ್ಲಿ ಅಧ್ಯಾತ್ಮದ ವಿರಾಟ ರೂಪ: ಬಾಳೆಹೊನ್ನೂರಿನಲ್ಲಿ ಮೈದಳೆಯುತ್ತಿದೆ ಜಗದ್ಗುರು ರೇಣುಕರ ಭವ್ಯ ಮಂಗಳಮೂರ್ತಿ!

ವರದಿ:ಪ್ರಶಾಂತ್ ಬಸವಾಪಟ್ಟಣ

ಬಾಳೆಹೊನ್ನೂರು:ಗಿರಿಶಿಖರಗಳ ಸಾಲು, ಭೋರ್ಗರೆವ ಭದ್ರಾ ನದಿಯ ನಾದ, ಮಂಜಿನ ಮುಸುಕಿನ ನಡುವೆ ಕೇಳಿಬರುವ ವೇದಘೋಷ… ಇಂತಹ ಪ್ರಕೃತಿ ಮತ್ತು ಸಂಸ್ಕೃತಿಯ ಸಂಗಮ ತಾಣವಾದ ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠವೀಗ ಮತ್ತೊಂದು “ಅಧ್ಯಾತ್ಮಿಕ ಅದ್ಭುತ”ಕ್ಕೆ ಸಾಕ್ಷಿಯಾಗುತ್ತಿದೆ. ಯುಗಯುಗಾಂತರಗಳಿಂದ ಕೋಟಿ ಕೋಟಿ ಭಕ್ತರ ಆರಾಧ್ಯ ದೈವವಾಗಿರುವ ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರ 51 ಅಡಿ ಎತ್ತರದ ವಿರಾಟ ಮಂಗಳಮೂರ್ತಿ ಸದ್ಯದಲ್ಲೇ ಭಕ್ತರ ಕಣ್ಮನ ತಣಿಸಲಿದೆ.

ಭಕ್ತಿಯ ಶಿಖರವಾಗಿ ನಿಲ್ಲಲಿರುವ ರೇಣುಕ:

ಕೈಯಲ್ಲಿ ಅಭಯ ಹಸ್ತ, ಮುಖದಲ್ಲಿ ಮಂದಹಾಸ, ಕಣ್ಣುಗಳಲ್ಲಿ ಕರುಣೆಯ ಕಡಲನ್ನು ಹೊತ್ತ ಜಗದ್ಗುರುಗಳ ಈ ಬೃಹತ್ ಪ್ರತಿಮೆಯನ್ನು ನೋಡುತ್ತಿದ್ದರೆ, ಸಾಕ್ಷಾತ್ ರೇಣುಕಾಚಾರ್ಯರೇ ಕೈಲಾಸದಿಂದ ಇಳಿದು ಬಂದು ಮಲೆನಾಡ ಮಡಿಲಲ್ಲಿ ಕುಳಿತಿದ್ದಾರೆಯೇನೋ ಎಂಬ ಭಾಸವಾಗುತ್ತದೆ. ಈ 51 ಅಡಿ ಎತ್ತರದ ಮೂರ್ತಿಯು ಕೇವಲ ಕಲ್ಲಿನ ಅಥವಾ ಲೋಹದ ಪ್ರತಿಮೆಯಲ್ಲ; ಇದು ಕೋಟ್ಯಂತರ ವೀರಶೈವ ಭಕ್ತರ ಅಚಲ ನಂಬಿಕೆಯ ಪ್ರತಿರೂಪ.

ಸೋಮೇಶ್ವರ ಲಿಂಗದಿಂದ ಉದ್ಭವಿಸಿದ ಶಕ್ತಿಯ ನೆನಪು:

ಪುರಾಣಗಳ ಪ್ರಕಾರ, ಶ್ರೀ ರೇಣುಕಾಚಾರ್ಯರು ಸೋಮೇಶ್ವರ ಲಿಂಗದಿಂದ ಉದ್ಭವಿಸಿದವರು.ನಂತರ ಬಾಳೆಹೊನ್ನೂರಿನಲ್ಲಿ ಪೀಠ ಸ್ಥಾಪಿಸಿದರು. ತಮ್ಮ ಆರಾಧ್ಯ ದೈವ ನೆಲೆಸಿದ ಪವಿತ್ರ ಮಣ್ಣಿನಲ್ಲಿಯೇ ಇಷ್ಟು ಎತ್ತರದ ಮಂಗಳಮೂರ್ತಿ ನಿರ್ಮಾಣವಾಗುತ್ತಿರುವುದು ಭಕ್ತರಲ್ಲಿ ಭಕ್ತಿ ಪರಾವಶತೆ ಮೂಡಿಸಿದೆ.

ಸಿದ್ಧಾಂತ ಶಿಖಾಮಣಿಯ ಜ್ಞಾನದ ಬೆಳಕು:ಹಸಿರು ಕಾಡಿನ ನಡುವೆ ಬೆಳ್ಳಂಬೆಳಗ್ಗೆ ಸೂರ್ಯನ ಕಿರಣಗಳು ಈ ಮೂರ್ತಿಯ ಮೇಲೆ ಬಿದ್ದಾಗ, ಆ ದೃಶ್ಯವು ದೇವಲೋಕದ ವೈಭವವನ್ನು ನೆನಪಿಸಲಿದೆ.ಈ ಮಂಗಳಮೂರ್ತಿಯ ನೆರಳಿನಲ್ಲಿ ಕುಳಿತು ಜಪ-ತಪ ಮಾಡುವ ಭಕ್ತರಿಗೆ ರೇಣುಕರು ಬೋಧಿಸಿದ ಸಿದ್ಧಾಂತ ಶಿಖಾಮಣಿಯ ಜೀವನ ದರ್ಶನ ಲಭಿಸಲಿದೆ. “ಮಾನವಕುಲ ಒಂದೇ” ಎಂಬ ಸಂದೇಶ ಸಾರಿದ ಗುರುಗಳ ಪಾದದಡಿಯಲ್ಲಿ ನಿಂತಾಗ, ಅಹಂಕಾರ ಕರಗಿ ಭಕ್ತಿ ಮಾತ್ರ ಉಳಿಯುತ್ತದೆ ಎಂಬುದು ಇಲ್ಲಿನ ಭಕ್ತರ ನಂಬಿಕೆ.

ಲೋಕ ಕಲ್ಯಾಣದ ಸಂಕಲ್ಪ:

ಪ್ರಸಕ್ತ ಜಗದ್ಗುರುಗಳಾದ ಶ್ರೀ ಪ್ರಸನ್ನ ರೇಣುಕಾ ವೀರಸೋಮೇಶ್ವರ ಶಿವಾಚಾರ್ಯರ ದಿವ್ಯ ಮಾರ್ಗದರ್ಶನದಲ್ಲಿ ಈ ಕಾರ್ಯ ಸಾಗುತ್ತಿದೆ. ಈ ಬೃಹತ್ ಮೂರ್ತಿಯು ಕೇವಲ ಕರ್ನಾಟಕಕ್ಕೆ ಮಾತ್ರವಲ್ಲದೆ, ಇಡೀ ಭಾರತಕ್ಕೆ ಶಾಂತಿ ಮತ್ತು ಸಹಬಾಳ್ವೆಯ ಸಂದೇಶ ಸಾರುವ ಆಧ್ಯಾತ್ಮಿಕ ದೀಪಸ್ತಂಭವಾಗಲಿದೆ.

ರೇಣುಕಾಚಾರ್ಯ ಜಯಂತಿ ಮತ್ತು ಯುಗಮಾನೋತ್ಸವದ ಸಂದರ್ಭದಲ್ಲಿಯೇ ಈ ಮೂರ್ತಿಯ ಶಂಕುಸ್ಥಾಪನೆ (ಭೂಮಿ ಪೂಜೆ) ನೆರವೇರಿಸಲಾಗಿದ್ದು, ಪೀಠದ ಇತಿಹಾಸವನ್ನು ಸಾರುವ ಮ್ಯೂಸಿಯಂ ಅನ್ನು ಸಹ ಪ್ರತಿಮೆಯ ಅಡಿಯಲ್ಲಿ ನಿರ್ಮಿಸುವ ಯೋಜನೆ ಇದೆ. ಬಾಳೆಹೊನ್ನೂರಿಗೆ ಕಾಲಿಡುತ್ತಿದ್ದಂತೆ, ದೂರದಿಂದಲೇ ಕಾಣುವ ಆ ರೇಣುಕರ ಭವ್ಯ ರೂಪವನ್ನು ಕಂಡು ಕಣ್ತುಂಬಿಕೊಳ್ಳುವ ಆ ಕ್ಷಣಕ್ಕಾಗಿ ಭಕ್ತಸಮೂಹ ಕಾತರದಿಂದ ಕಾಯುತ್ತಿದೆ.

 

Related Articles

Comments (0)

Leave a Comment