ಇವಿಎಂಗೆ ಗುಡ್ ಬೈ,ಬ್ಯಾಲೆಟ್ ಗೆ ಹಾಯ್ ಹಾಯ್: ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

ಬೆಂಗಳೂರು: ರಾಜ್ಯದಲ್ಲಿ ಮುಂಬರುವ ಎಲ್ಲಾ ಗ್ರಾಮ ಪಂಚಾಯತಿ, ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗಳನ್ನು ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ (ಮತಪತ್ರ) ಮೂಲಕ ನಡೆಸುವ ಮಹತ್ವದ ತೀರ್ಮಾನವನ್ನು ರಾಜ್ಯ ಸಚಿವ ಸಂಪುಟದಲ್ಲಿ ತೆಗೆದುಕೊಳ್ಳಲಾಗಿದೆ.

ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಸಭೆಯಲ್ಲಿ ಪ್ರಮುಖವಾಗಿ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಇವಿಎಂ ಅಥವಾ ಬ್ಯಾಲೆಟ್ ಪೇಪರ್ ಮೂಲಕ ನಡೆಸಬೇಕೋ ಎನ್ನುವ ಚರ್ಚೆ ನಡೆಸಲಾಯಿತು. ಈಗಾಗಲೇ ರಾಜ್ಯದಲ್ಲಿ ವೋಟ್ ಚೋರಿ ನಡೆಸಲಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಸರ್ಕಾರ ಇವಿಎಂ ಬದಲು ಮತಪತ್ರದಲ್ಲಿ ಚುನಾವಣೆಗೆ ಬೇಡಿಕೆ ಇಟ್ಟಿತ್ತು ಆದರೆ ರಾಷ್ಟ್ರಮಟ್ಟದಲ್ಲಿ ವಿರೋಧದಿಂದಾಗಿ ರಾಜ್ಯದಲ್ಲಿ ತನ್ನ ವ್ಯಾಪ್ತಿಯ ಚುನಾವಣೆಗಳನ್ನು ಇವಿಎಂ ಬದಲು ಮತಪತ್ರದ ಮೂಲಕ ನಡೆಸುವ ನಿರ್ಧಾರ ಪ್ರಕಟಿಸಿತ್ತು ಅದರಂತೆ ಇದೀಗ ಜಿಬಿಎ ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆಗೆ ಬ್ಯಾಲೆಟ್ ಪೇಪರ್ ಬಳಸುವ ನಿರ್ಧಾರವನ್ನು ಸಂಪುಟದಲ್ಲಿ ಕೈಗೊಂಡಿದೆ.

AI ತಂತ್ರಜ್ಞಾನದ ಬಳಕೆ: ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ದ್ವೇಷ ಭಾಷಣ (Hate Speech), ಸುಳ್ಳು ಸುದ್ದಿ ಮತ್ತು ದುರುದ್ದೇಶಪೂರಿತ ಅಭಿಯಾನಗಳನ್ನು ಪತ್ತೆಹಚ್ಚಲು ₹67.26 ಕೋಟಿ ವೆಚ್ಚದಲ್ಲಿ AI ಆಧಾರಿತ ‘ಸೋಷಿಯಲ್ ಮೀಡಿಯಾ ಅನಾಲಿಟಿಕ್ಸ್ ಸೊಲ್ಯೂಷನ್’ ಸಾಫ್ಟ್‌ವೇರ್ ಅಳವಡಿಕೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA): ಜಿಬಿಎ ಚುನಾವಣೆಗಳನ್ನು ಮೇ 25ರ ನಂತರ ನಡೆಸಲು ನಿರ್ಧರಿಸಲಾಗಿದೆ.

ಸಚಿವ ಸಂಪುಟ ಪುನಾರಚನೆ: ಸಚಿವ ಸಂಪುಟದಲ್ಲಿ ಬದಲಾವಣೆ ಅಥವಾ ಪುನಾರಚನೆ ಮಾಡುವ ಕುರಿತು ಸಭೆಯಲ್ಲಿ ಗಂಭೀರ ಚರ್ಚೆಗಳು ನಡೆದಿವೆ.ಆದರೆ ಯಾವುದೇ ನಿರ್ಧಾರವಾಗಿಲ್ಲ.

ಕೇಂದ್ರ ಬಜೆಟ್ ವಿರುದ್ಧ ನಿರ್ಣಯ: 2026-27ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಆಕ್ಷೇಪಿಸಿ, ಸಂಸತ್ತಿನಲ್ಲಿ ಅಂಗೀಕರಿಸಲಾದ VB-G RAM G ಕಾಯ್ದೆಯನ್ನು ವಿರೋಧಿಸಿ ನಿರ್ಣಯ ಅಂಗೀಕರಿಸಲಾಗಿದೆ.

ಬಿ-ಖಾತಾ ಪರಿವರ್ತನೆ: ಬೆಂಗಳೂರಿನ ಅಕ್ರಮ ಬಡಾವಣೆಗಳಲ್ಲಿರುವ ಬಿ-ಖಾತಾ ಆಸ್ತಿಗಳನ್ನು ಎ-ಖಾತಾಗೆ ಪರಿವರ್ತಿಸುವ ಪ್ರಕ್ರಿಯೆಯನ್ನು ವೇಗಗೊಳಿಸಲು ಮತ್ತು ಮಾರ್ಗಸೂಚಿಗಳನ್ನು ಸರಳಗೊಳಿಸಲು ಈ ಹಿಂದಿನ ಸಭೆಯಲ್ಲಿ ನಿರ್ಧರಿಸಲಾಗಿತ್ತು.

Related Articles

Comments (0)

Leave a Comment