ವಿಬಿ-ಜಿ ರಾಮ್ ಜಿ ಕಾಯ್ದೆ ವಿರುದ್ಧ ನಿರ್ಣಯ ಅಂಗೀಕಾರ
- by Suddi Team
- February 4, 2026
- 7 Views
ಬೆಂಗಳೂರು: ತೆಲಂಗಾಣ,ತಮಿಳುನಾಡು,ಕೇರಳ ನಂತರ ಕರ್ನಾಟಕ ವಿಧಾನಸಭೆಯೂ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ (VB-G RAM G) ಕಾಯ್ದೆಯನ್ನು ವಿರೋಧಿಸಿ ಅಧಿಕೃತ ನಿರ್ಣಯವನ್ನು ಅಂಗೀಕರಿಸಿದೆ.
ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ ಸಿಎಂ ಸಿದ್ದರಾಮಯ್ಯ, ಕೇಂದ್ರದ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದರು. ಹೊಸದಾಗಿ ಜಾರಿಗೆ ಬಂದಿರುವ ‘ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ)’ ಅಥವಾ ವಿಬಿ-ಜಿ ರಾಮ್ ಜಿ ಕಾಯ್ದೆಯನ್ನು ಕೇಂದ್ರ ಸರ್ಕಾರವು ತಕ್ಷಣವೇ ಹಿಂಪಡೆಯಬೇಕು ಮತ್ತು ಮನರೇಗಾ (MGNREGA) ಯೋಜನೆಯನ್ನು ಅದರ ಮೂಲ ರೂಪದಲ್ಲಿ ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಈ ಮೊದಲು ಮನರೇಗಾ ಅಡಿಯಲ್ಲಿ ಕೂಲಿ ವೆಚ್ಚದ ಶೇ. 100ರಷ್ಟನ್ನು ಕೇಂದ್ರವೇ ಭರಿಸುತ್ತಿತ್ತು. ಆದರೆ ಹೊಸ ಕಾಯ್ದೆಯನ್ವಯ ರಾಜ್ಯಗಳು ಶೇ. 40ರಷ್ಟು ವೆಚ್ಚವನ್ನು ಭರಿಸಬೇಕಾಗುತ್ತದೆ, ಇದು ರಾಜ್ಯದ ಬೊಕ್ಕಸಕ್ಕೆ ದೊಡ್ಡ ಹೊರೆಯಾಗಿದೆ.ಈ ಕಾಯ್ದೆಯು ಸಂವಿಧಾನದ ಒಕ್ಕೂಟ ತತ್ವಕ್ಕೆ ವಿರುದ್ಧವಾಗಿದ್ದು, ಗ್ರಾಮ ಪಂಚಾಯತ್ಗಳ ಅಧಿಕಾರವನ್ನು ಕಿತ್ತುಕೊಳ್ಳುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.
ನಿರ್ಣಯದ ಮಂಡನೆಯ ಮೇಲೆ ನಡೆದ ಚರ್ಚೆಯ ವೇಳೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಸದನದಿಂದ ಸಭಾತ್ಯಾಗ (Walkout) ಮಾಡಿದರು.ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ಣಯವನ್ನು ಅಂಗೀಕರಿಸುವಂತೆ ಸದನವನ್ನು ಕೋರಿದರು ವಿಧಾನಸಭೆ ಸಭಾಧ್ಯಕ್ಷರು ನಿರ್ಣಯದ ಅನುಮೋದನೆಗಾಗಿ ಸದಸ್ಯರ ಧ್ವನಿ ಮತಕ್ಕೆ ಹಾಕಿದರು. ನಂತರ ಧ್ವನಿಮತದ ಮೂಲಕ ನಿರ್ಣಯವು ಬಹುಮತ ಪರವಾಗಿರುವುದರಿಂದ ಅಂಗೀಕರಿಸಲಾಗಿದೆ ಎಂದು ಸ್ಪೀಕರ್ ಪ್ರಕಟಿಸಿದರು. ಪ್ರತಿಪಕ್ಷಗಳ ಗದ್ದಲದ ನಡುವೆಯೇ ಧ್ವನಿಮತದ ಮೂಲಕ ಈ ನಿರ್ಣಯವನ್ನು ಅಂಗೀಕರಿಸಲಾಯಿತು.
ಇಂದು ಇಡೀ ದಿನ ವಿರೋಧ ಪಕ್ಷದವರು ಅಬಕಾರಿ ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರಕ್ಕೆ ಸಚಿವರು ರಾಜೀನಾಮೆ ನೀಡಬೇಕೆಂದು ಬಾವಿಗಿಳಿದು ನಿರ್ಣಯದ ಮೇಲಿನ ಚರ್ಚೆಗೆ ಅಡಚಣೆ ಮಾಡುತ್ತಲೇ ಇದ್ದರು. ನೆನ್ನೆಯಿಂದ ಈ ನಿರ್ಣಯದ ಮೇಲೆ ಸದನದಲ್ಲಿ 17 ಸದಸ್ಯರು 6 ಗಂಟೆ 51 ನಿಮಿಷ ಚರ್ಚೆ ಮಾಡಿರುವುದಾಗಿ ಸಭಾಧ್ಯಕ್ಷರು ತಿಳಿಸಿದರು.
ಬಹುಮತದ ಮೂಲಕ ನಿರ್ಣಯವನ್ನು ಅಂಗೀಕರಿಸಿದ ನಂತರ ಸಭಾಧ್ಯಕ್ಷರು ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ತಿಳಿಸಿದರು.
ಈ ನಿರ್ಣಯವನ್ನು ಕೇಂದ್ರ ಸರ್ಕಾರ ಮತ್ತು ಭಾರತದ ರಾಷ್ಟ್ರಪತಿಗಳಿಗೆ ಕಳುಹಿಸಿಕೊಡಲು ನಿರ್ಧರಿಸಲಾಗಿದೆ.
ಕರ್ನಾಟಕದಂತೆಯೇ ತೆಲಂಗಾಣ, ತಮಿಳುನಾಡು ಮತ್ತು ಕೇರಳ ವಿಧಾನಸಭೆಗಳೂ ಸಹ ಈ ಕಾಯ್ದೆಯ ವಿರುದ್ಧ ನಿರ್ಣಯಗಳನ್ನು ಅಂಗೀಕರಿಸಿವೆ.
Related Articles
Thank you for your comment. It is awaiting moderation.


Comments (0)