‘ವೀರಶೈವ ಧರ್ಮ ಗಂಗೋತ್ರಿಗೆ ಶಕ್ತಿ ತುಂಬಿದ ಕಾಶಿ ಜಗದ್ಗುರುಗಳು’:ಶ್ರೀಶೈಲ ಪೀಠದ ಜಗದ್ಗುರುಗಳು

ಸೊಲ್ಲಾಪೂರ :  ವಿಶಾಲವಾದ ವೀರಶೈವ ಧರ್ಮ ಗಂಗೋತ್ರಿಯು ಎಲ್ಲಿಯೂ ಬತ್ತದಂತೆ ಕಾಳಜಿವಹಿಸಿ, ಅದು ಎಲ್ಲೆಡೆ ನಿರಂತರ ಮೈದುಂಬಿ ಪ್ರವಹಿಸಲು ಶಕ್ತಿತುಂಬಿ ಶ್ರಮಿಸಿದ ಶ್ರೇಯಸ್ಸು ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರರಿಗೆ ಸಲ್ಲುತ್ತದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ಸೊಲ್ಲಾಪುರ ನಗರದ ಸೇಳಗಿಯ ಡಾ.ಶೈಲೇಶ್ ಜಗದೀಶ ಪಾಟೀಲ ಗಾರ್ಡನ್‌ದಲ್ಲಿ ಭಕ್ತಗಣ ಹಮ್ಮಿಕೊಂಡಿದ್ದ ಕಾಶಿ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ 36ನೆಯ ಪೀಠಾರೋಹಣ ವರ್ಧಂತಿ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಜಗದ್ಗುರುಗಳು, ಕಾಶಿ ಪೀಠದಲ್ಲಿ ಕಳೆದ 36 ವರ್ಷಗಳ ಸುದೀರ್ಘ ಅವಧಿಯಲ್ಲಿ ವೀರಶೈವ ವಾಙ್ಮಯ ಲೋಕ ವಿಸ್ತೃತವಾಗಿ ಬೆಳೆದು ಬಲಗೊಳ್ಳಲು ಶಕ್ತಿಮೀರಿ ಶ್ರಮಿಸಿರುವ ಡಾ. ಚಂದ್ರಶೇಖರ ಜಗದ್ಗುರುಗಳು, ವಿಶೇಷವಾಗಿ ವೀರಶೈವ ಧರ್ಮಗ್ರಂಥವೆಂದೇ ಪ್ರಸಿದ್ಧಿ ಪಡೆದಿರುವ ‘ಶ್ರೀಸಿದ್ಧಾಂತ ಶೀಖಾಮಣಿ’ಯು ರಷ್ಯಾ ದೇಶವೂ ಸೇರಿ ಒಟ್ಟು 20 ಭಾಷೆಗಳಿಗೆ ಅದನ್ನು ಭಾಷಾಂತರಿಸಿ ವೀರಶೈವ ಧರ್ಮದ ಮೂಲ ತತ್ವಾದರ್ಶಗಳು ಭಾರತದೆಲ್ಲೆಡೆ ಪ್ರಸಾರವಾಗುವಂತೆ ಮಾಡಿದರು  ಎಂದರು.

ಮೂಲತಃ ಕನ್ನಡಿಗರೇ ಆಗಿರುವ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಕನ್ನಡ, ಸಂಸ್ಕೃತ, ಹಿಂದಿ, ಮರಾಠಿ ಭಾಷೆಗಳಲ್ಲಿ ಆಳವಾದ ಜ್ಞಾನ ಹೊಂದಿದ್ದು, ಇದರಿಂದಾಗಿ ಭಾರತದ ಬಹುತೇಕ ರಾಜ್ಯಗಳಲ್ಲಿ ಇವರು ಕೈಕೊಂಡ ಧರ್ಮ ಜಾಗೃತಿ ಯಾತ್ರೆಗಳು ಫಲಿಸಿದ್ದು, ಎಲ್ಲೆಡೆ ಅಷ್ಟಾವರಣ, ಪಂಚಾಚಾರ ಮತ್ತು ಷಟ್‌ಸ್ಥಲಗಳ ಮೂಲ ಸಿದ್ಧಾಂತದ ವ್ಯಾಪಕ ಪ್ರಸಾರವು ಸುಲಭ ಸಾಧ್ಯವಾಯಿತು ಎಂದೂ ಶ್ರೀಶೈಲ ಜಗದ್ಗುರುಗಳು ಶ್ಲಾಘಿಸಿದರು.

ತಮ್ಮ 36ನೆಯ ಪೀಠಾರೋಹಣ ವರ್ಧಂತಿ ಮಹೋತ್ಸವದ ಸಂದರ್ಭದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ಭಕ್ತಗಣ ನೀಡಿದ ಗೌರವವನ್ನು ಸ್ವೀಕರಿಸಿ ಆಶೀರ್ವಚನ ನೀಡಿದ ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು, ನಮ್ಮ ಪೀಠದ ಶೈವಭಾರತೀ ಶೋಧ ಪ್ರತಿಷ್ಠಾನ ಹಾಗೂ ಶ್ರೀಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನಗಳ ಅಡಿಯಲ್ಲಿ ಮೂಲ ವೀರಶೈವ ಸಿದ್ಧಾಂತವು ಎಲ್ಲಿಯೂ ಮಂಕಾಗದಂತೆ ಎಲ್ಲಾ ನೆಲೆಗಳಲ್ಲಿ ಕಾಳಜಿವಹಿಸಿ ಅದಕ್ಕೆ ಭದ್ರ ನೆಲೆಯನ್ನು ಒದಗಿಸಲಾಗಿದೆ. ಜೊತೆಗೆ ವೀರಶೈವ ಧರ್ಮದ ಸಾಹಿತ್ಯ ಸಂವರ್ಧನೆಗೂ ಶಕ್ತಿಮೀರಿ ಶ್ರಮಿಸಿ, ಅನೇಕ ಮಹತ್ವದ ಉದ್ಗ್ರಂಥಗಳನ್ನು ಕಾಶಿ ಪೀಠವು ಪ್ರಕಟಿಸಿ ಧನ್ಯತೆಯನ್ನು ಹೊಂದಿದೆ ಎಂದರು.

ಕಾಶಿ ಜ್ಞಾನ ಪೀಠದ ಕಿರಿಯ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಸುಮಾರು 20ಕ್ಕೂ ಹೆಚ್ಚು ಶಿವಾಚಾರ್ಯ ಶ್ರೀಗಳು, ಸೊಲ್ಲಾಪೂರ ಶಾಸಕ ವಿಜಯಕುಮಾರ ದೇಶಮುಖ, ಮಾಜಿ ಶಾಸಕ ಬಸವರಾಜ ಪಾಟೀಲ, ಖ್ಯಾತ ಹೃದಯ ರೋಗ ತಜ್ಞ ಡಾ.ಶೈಲೇಶ್ ಪಾಟೀಲ ಸೇರಿದಂತೆ ಅನೇಕ ಗಣ್ಯರು ಇದ್ದರು, ಇದೇ ಸಂದರ್ಭದಲ್ಲಿ ಸೊಲ್ಲಾಪೂರದ ವೀರಶೈವ ಸಮಾಜದ ಮುಖಂಡ ಜಗದೀಶ ಪಾಟೀಲ ಅವರ 75ನೆಯ ಹುಟ್ಟು ಹಬ್ಬದ ಸಂದರ್ಭದಲ್ಲಿ ಅವರ ಗ್ರಂಥ ತುಲಾಭಾರ ಜರುಗಿಸಲಾಯಿತು.

Related Articles

Comments (0)

Leave a Comment