ಫ್ಯಾಕ್ಸ್ ಯಂತ್ರದಿಂದ ಇನ್ಸ್ಟಾಗ್ರಾಂ ರೀಲ್ಸ್ವರೆಗೆ: 25 ವರ್ಷಗಳಲ್ಲಿ ಮಾಧ್ಯಮ ಬದಲಾವಣೆಯ ಬಗ್ಗೆ ಮೋದಿ ಮಾತು
- by Suddi Loka
- November 12, 2026
- 79 Views
ನವದೆಹಲಿ: ಒಂದು ಕಾಲದಲ್ಲಿ ಪತ್ರಿಕಾ ಪ್ರಕಟಣೆ ಕಳುಹಿಸಲು ಫ್ಯಾಕ್ಸ್ ಯಂತ್ರ ಹುಡುಕಬೇಕಿತ್ತು. ಆದರೆ ಇಂದು ಮೊಬೈಲ್ ಮೂಲಕವೇ ಸುದ್ದಿ, ಫೋಟೋ ಮತ್ತು ವಿಡಿಯೋ ಕ್ಷಣಾರ್ಧದಲ್ಲಿ ಜಗತ್ತಿನಾದ್ಯಂತ ತಲುಪುತ್ತವೆ. ಕಳೆದ 25 ವರ್ಷಗಳಲ್ಲಿ ರಾಜಕೀಯದ ಜೊತೆಗೆ ಮಾಧ್ಯಮ ಕ್ಷೇತ್ರದಲ್ಲೂ ದೊಡ್ಡ ಬದಲಾವಣೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ದೀಪಾವಳಿ ಮಿಲನ ಕಾರ್ಯಕ್ರಮದಲ್ಲಿ ಪತ್ರಕರ್ತರೊಂದಿಗೆ ಸಂವಾದ ನಡೆಸಿದ ಮೋದಿ, ತಮ್ಮ ರಾಜಕೀಯ ಜೀವನದ ಆರಂಭದ ದಿನಗಳನ್ನು ಸ್ಮರಿಸಿದರು.
1990ರ ದಶಕದ ಆರಂಭದಲ್ಲಿ ದೇಶಾದ್ಯಂತ ನಡೆದ ಎರಡು ಪ್ರಮುಖ ಯಾತ್ರೆಗಳ ನಿರ್ವಹಣೆಯ ಜವಾಬ್ದಾರಿ ತಮಗೆ ನೀಡಲಾಗಿತ್ತು. ಆಗ ಯಾತ್ರೆಗಳ ವ್ಯವಸ್ಥೆ ಮತ್ತು ಪತ್ರಿಕಾ ಪ್ರಕಟಣೆ ಕಳುಹಿಸುವುದು ಸೇರಿದಂತೆ ಹಲವು ಕೆಲಸಗಳನ್ನು ನಿರ್ವಹಿಸುತ್ತಿದ್ದೆ. ಒಂದು ಪ್ರಕಟಣೆ ಕಳುಹಿಸಲೂ ಫ್ಯಾಕ್ಸ್ ಯಂತ್ರ ಹುಡುಕಬೇಕಾಗಿತ್ತು ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು.

ನಂತರ ದೆಹಲಿಯ ಅಶೋಕ ರಸ್ತೆಯಲ್ಲಿದ್ದ ಪಕ್ಷದ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ದೀಪಾವಳಿ ಮಿಲನ ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿಗಳನ್ನು ಸ್ವಾಗತಿಸುವುದು ಮತ್ತು ಆಸನ ವ್ಯವಸ್ಥೆ ಮಾಡುವುದು ತಮ್ಮ ಜವಾಬ್ದಾರಿಯಾಗಿತ್ತು ಎಂದರು.
ಪತ್ರಿಕೋದ್ಯಮದಲ್ಲಿ ತಂತ್ರಜ್ಞಾನದ ಕ್ರಾಂತಿ
ಹಿಂದೆ ಪತ್ರಿಕೆ ಮತ್ತು ಟಿವಿ ವಾಹಿನಿಗಳು ಸುದ್ದಿಯ ಪ್ರಮುಖ ಮೂಲಗಳಾಗಿದ್ದವು. ಈಗ ಡಿಜಿಟಲ್ ಮಾಧ್ಯಮ, ಸಾಮಾಜಿಕ ಜಾಲತಾಣಗಳು, ಯೂಟ್ಯೂಬ್, ಪಾಡ್ಕಾಸ್ಟ್ ಹಾಗೂ ಇನ್ಸ್ಟಾಗ್ರಾಂ ರೀಲ್ಸ್ ಮೂಲಕ ಸುದ್ದಿಗಳು ಜನರನ್ನು ತಲುಪುತ್ತಿವೆ. ಪ್ರತಿಯೊಂದು ವಿಷಯದ ಬಗ್ಗೆಯೂ ಜನರು ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದು ಮಾಧ್ಯಮ ಕ್ಷೇತ್ರದಲ್ಲಿ ಹೊಸ ಅವಕಾಶಗಳ ಜೊತೆಗೆ ಸವಾಲುಗಳನ್ನೂ ಸೃಷ್ಟಿಸಿದೆ ಎಂದು ಮೋದಿ ಅಭಿಪ್ರಾಯಪಟ್ಟರು.
2047ರ ವಿಕಸಿತ ಭಾರತವೇ ಗುರಿ
ಸುದ್ದಿ ಮಾಧ್ಯಮದಲ್ಲಿ ಡೆಡ್ಲೈನ್ ಎಷ್ಟು ಮುಖ್ಯವೋ, ದೇಶದ ಅಭಿವೃದ್ಧಿಯಲ್ಲೂ ಗುರಿ ಮತ್ತು ಕಾಲಮಿತಿ ಅಷ್ಟೇ ಮುಖ್ಯ. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವುದು ನಮ್ಮ ಸಂಕಲ್ಪ. ಆದರೆ ಆ ಗುರಿಗಾಗಿ ಕಾಯದೆ, ಸಣ್ಣ ಗುರಿಗಳನ್ನು ನಿಗದಿಪಡಿಸಿ ಹಂತ ಹಂತವಾಗಿ ಸಾಧಿಸಬೇಕು ಎಂದರು.
ಚಂದ್ರಯಾನ-3ರ ಯಶಸ್ಸು, ಚೆನಾಬ್ ರೈಲ್ವೆ ಸೇತುವೆ, ಸೌರಶಕ್ತಿ ಉತ್ಪಾದನೆ, ಹೆದ್ದಾರಿ ಮತ್ತು ರೈಲು ಸಂಪರ್ಕಗಳ ವಿಸ್ತರಣೆ ಹಾಗೂ ಉಜ್ವಲ ಯೋಜನೆಯಂತಹ ಸಾಧನೆಗಳು ಭಾರತದ ಸಾಮರ್ಥ್ಯವನ್ನು ತೋರಿಸಿವೆ ಎಂದು ಮೋದಿ ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್ ಮತ್ತು ಜೆ.ಪಿ. ನಡ್ಡಾ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.


Comments (0)